Advertisement

ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಗಂಡಾಂತರ

08:52 PM Apr 13, 2019 | Team Udayavani |

ಚಿಕ್ಕಬಳ್ಳಾಪುರ: ಬಿಜೆಪಿ ಮತ್ತೂಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಮಾಜದಲ್ಲಿನ ದಲಿತ, ಶೋಷಿತ ಹಾಗೂ ಹಿಂದುಳಿದ ವರ್ಗಗಳಿಗೆ ಸಂವಿಧಾನ ಬದ್ಧವಾಗಿ ಕಲ್ಪಿಸಿರುವ ಮೀಸಲಾತಿಗೆ ಗಂಡಾಂತರ ತಪ್ಪಿದ್ದಲ್ಲ. ಬಿಜೆಪಿ ಎಂದೂ ಕೂಡ ಸಮಾನತೆಯನ್ನು ಬಯಸುವ ಪಕ್ಷವಲ್ಲ. ಮೇಲುಕೀಳು ಪೋಷಿಸುವ ಬಿಜೆಪಿ ಪಕ್ಷವನ್ನು ಮತದಾರರು ತಿರಸ್ಕರಿಸಬೇಕೆಂದು ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹೇಳಿದರು.

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಶನಿವಾರ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಯುದ್ಧದ ಭೀತಿ ಆವರಿಸಿದೆ. ಸಾಮಾಜಿಕ ನ್ಯಾಯ ವಿರುದ್ಧ ಇರುವ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕು. ಇಲ್ಲದಿದ್ದರೆ ದೇಶದ ಸಂವಿಧಾನಕ್ಕೂ ಹಾಗೂ ಶೋಷಿತರ ಮೀಸಲಾತಿಗೆ ರಕ್ಷಣೆ ಇರುವುದಿಲ್ಲ ಎಂದು ಎಚ್ಚರಿಸಿದರು.

ಮಾನವೀಯತೆ ಇಲ್ಲ: ಕಾಂಗ್ರೆಸ್‌ ಪಕ್ಷದಲ್ಲಿ ಮಾನವೀಯತೆ ಇದೆ. ಆದರೆ ಪ್ರಧಾನಿ ಮೋದಿ ಹಾಗೂ ಅವರು ಪ್ರತಿನಿಧಿಸುವ ಬಿಜೆಪಿಗೆ ಯಾವುದೇ ರೀತಿ ಕರುಣೆ, ದಯೆ, ಮಾನವೀಯತೆ ಇಲ್ಲ. ಮೋದಿ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದ ಕೋಮುಗಲಭೆಗಳಲ್ಲಿ 1000ಕ್ಕೂ ಹೆಚ್ಚು ಅಸಂಖ್ಯಾತ ಅಮಾಯಕರು ಪಿತೂರಿಗೆ ಬಲಿಯಾದರು.

ಆ ಸಂದರ್ಭದಲ್ಲಿ ಅವರ ರಕ್ಷಣೆಗೆ ನಿಂತ ಎಲ್‌.ಕೆ.ಅಡ್ವಾಣಿಗೆ ಈಗ ಪಕ್ಷದಲ್ಲಿ ಟಿಕೆಟ್‌ ಇಲ್ಲ ಎಂದು ಮೋದಿ ವಿರುದ್ಧ ಮೊಯ್ಲಿ ವಾಗ್ಧಾಳಿ ನಡೆಸಿದರು. ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಸ್ಥಾಪನೆಗೆ ಮುಂದಾಗಿದ್ದಾರೆ. ಇಂತಹವರ ಕೈಗೆ ಮತ್ತೆ ದೇಶದ ಅಧಿಕಾರ ಸಿಕ್ಕರೆ ಸಂವಿಧಾನಕ್ಕೆ ಉಳಿಗಾಲ ಇರುವುದಿಲ್ಲ ಎಂದರು.

ಕಾಂಗ್ರೆಸ್‌ ಆಡಳಿತದಲ್ಲಿ ಮಾತ್ರ ಜನ ನೆಮ್ಮದಿ ಕಾಣಲು ಸಾಧ್ಯ. ಯುಪಿಎ ಸರ್ಕಾರದಲ್ಲಿ ಕೇವಲ 260, 300 ರೂ.ಗೆ ಸಿಗುತ್ತಿದ್ದ ಅಡುಗೆ ಅನಿಲ ಈಗ 900 ರೂ.ಗೆ ತಲುಪಿದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ರಾಹುಲ್‌ಗಾಂಧಿ ಪ್ರಧಾನಿಯಾಗುವುದು ಖಚಿತ ಎಂದರು.
ಐದು ವರ್ಷಗಳ ಕಾಲ ಜನರನ್ನು ಮೋಡಿಯಲ್ಲಿ ಮುಳಗಿಸಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಕೇವಲ 10, 15 ಮಂದಿ ಶ್ರೀಮಂತರ ಪರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

Advertisement

ಬಿಜೆಪಿ ಬೆಳೆಸುವುದು ಬೇಡ: ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಮಾತನಾಡಿ, ಜಿಲ್ಲೆಯಲ್ಲಿ ಸ್ವಾತಂತ್ರ್ಯ ಬಂದ ಬಳಿಕ ಯಾವ ಸರ್ಕಾರವು ಮಾಡದ ಕೆಲಸವನ್ನು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈ ಭಾಗಕ್ಕ ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಾರ್ಯಕರ್ತರು ಮೊಯ್ಲಿ ಎಂದರು. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಳೆಸುವುದು ಬೇಡ. ಮೋದಿ ಸರ್ಕಾರದಲ್ಲಿ ರೈತರಿಗೆ ಯಾವುದೇ ರೀತಿ ಲಾಭ ಆಗಿಲ್ಲ ಎಂದರು.

ಬೆಳೆಗಳಿಗೆ ನ್ಯಾಯಯುತ ಬೆಲೆ ಕೊಡಲಿಲ್ಲ. ಸಮರ್ಪಕವಾಗಿ ಮಾರುಕಟ್ಟೆ ಒದಗಿಸಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಉದ್ಯೋಗ ಸೃಷ್ಠಿಗಿಂತ ನಿರುದ್ಯೋಗ ಸೃಷ್ಟಿ ಮಾಡಿದರೆಂದು ಆರೋಪಿಸಿದರು. ತಮ್ಮ ಐದು ವರ್ಷಗಳ ದುರಾಡಳಿತವನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಪುಲ್ವಾಮಾ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕರಾದ ಎಸ್‌.ಎಂ.ಮುನಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಮುಖಂಡರಾದ ಯಲುವಹಳ್ಳಿ ರಮೇಶ್‌, ಮರಳುಕುಂಟೆ ಕೃಷ್ಣಮೂರ್ತಿ, ಕೆ.ವಿ.ನಾಗರಾಜ್‌, ತಾಪಂ ಅಧ್ಯಕ್ಷ ರಾಮುಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಟಿಎಪಿಸಿಎಂಸ್‌ ಅಧ್ಯಕ್ಷ ಅವುಲುರೆಡ್ಡಿ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.

ಮೊಯ್ಲಿ ಪರ ಭರ್ಜರಿ ರೋಡ್‌ ಶೋ: ಕ್ಷೇತ್ರದಲ್ಲಿ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹಾಗೂ ಶಾಸಕ ಡಾ.ಕೆ.ಸುಧಾಕರ್‌ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಿ ಜಿಲ್ಲಾ ಕೇಂದ್ರದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು.

ನಗರದ ಎಂಜಿ ರಸ್ತೆ, ಅಂಬೇಡ್ಕರ್‌ ವೃತ್ತ, ಬಿಬಿ ರಸ್ತೆ, ಬಜಾರ್‌ ರಸ್ತೆ, ಗಂಗಮ್ಮ ಗುಡಿ ರಸ್ತೆ ಮುಖಾಂತರ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಂಸದ ಎಂ.ವೀರಪ್ಪ ಮೊಯ್ಲಿ ಹಾಗೂ ಶಾಸಕ ಸುಧಾಕರ್‌ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ರೋಡ್‌ ಶೋದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next