Advertisement

ಗಿರಿಜನರ ಭೂಮಿಯಲ್ಲಿ ಅನ್ಯರು ಕೃಷಿ ಮಾಡಿದರೆ ಕ್ರಮ

12:55 PM Jun 16, 2017 | Team Udayavani |

ಮೈಸೂರು: ಗಿರಿಜನರಿಗೆ ನೀಡಲಾಗಿರುವ ಜಮೀನಿನಲ್ಲಿ ಬೇರೆಯವರು ಕೃಷಿ ಮಾಡುವುದು ಕಂಡು ಬಂದಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಎಚ್ಚರಿಸಿದರು. ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಪುನರ್ವಸತಿಗೊಂಡಿರುವ ನಾಗಾಪುರ ಗಿರಿಜನ ಹಾಡಿಯಲ್ಲಿ ಏರ್ಪಡಿಸಿದ್ದ ಆದಿವಾಸಿ ಜನರಿಗೆ ಆರೋಗ್ಯ ಶಿಬಿರ ಹಾಗೂ ಕಂದಾಯ ಅದಾಲತ್‌ ಉದ್ಘಾಟಿಸಿ ಮಾತನಾಡಿದರು.

Advertisement

ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹೋಗಲಾಡಿಸುವುದು, ಕಾಲಮಿತಿಯೊಳಗೆ ಗಿರಿಜನರ ಕೆಲಸ ಮಾಡಿಕೊಡಲು ಅನುಕೂಲವಾಗುವಂತೆ ಕಂದಾಯ ಅದಾಲತ್‌ ಮಾಡಲು ನಿರ್ಧರಿಸಲಾಗಿದ್ದು, ಇಲಾಖಾ ಮಟ್ಟದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದರು.

731 ಹೆಕ್ಟೇರ್‌ ಭೂಮಿಯನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಪಡೆಯಲು 16 ವರ್ಷ ತಡವಾಗಿದ್ದೇಕೆಂದು ಗೊತ್ತಿಲ್ಲ. ಈ ಸಂಬಂಧ ಹುಣಸೂರು ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ರನ್ನು ಒಳಗೊಂಡ ತಂಡ ರಚನೆ ಮಾಡಿ, ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಸಮಗ್ರ ಸರ್ವೇ ಮಾಡಿಸಲಾಗುವುದು. ಇದಕ್ಕೆ ಅರಣ್ಯ ಇಲಾಖೆಯ ಆಕ್ಷೇಪವೂ ಇಲ್ಲ.

ಹೀಗಾಗಿ 2-3 ತಿಂಗಳಲ್ಲಿ ಸರ್ವೇ ಮಾಡಿಸಲಾಗುವುದು. ಜತೆಗೆ 6ನೇ ಘಟಕದ ಗಿರಿಜನರಿಗೂ ಐದು ಎಕರೆ ಭೂಮಿ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಹಾಗೂ ಕಂದಾಯ ಇಲಾಖೆಯ ನಡುವಿನ ಸಮನ್ವಯ ಕೊರತೆಯಿಂದಾಗಿ ಬಾಕಿ ಉಳಿದಿರುವ ಈ ಪ್ರಕರಣದ ಬಗ್ಗೆ ಸಭೆ ನಡೆಸಿ ಒಂದು ತಿಂಗಳಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳು ಕಂಡುಬಂದಲ್ಲಿ ತಹಶೀಲ್ದಾರ್‌ ಸಿಆರ್‌ಇ ಘಟಕಕ್ಕೆ ವರದಿ ಮಾಡಿ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳು ಪರಿಶೀಲನೆಯಲ್ಲಿದ್ದು ಎಲ್ಲರಿಗೂ ಕಾರ್ಡ್‌ ನೀಡಿ ಹಸಿವು ಮುಕ್ತ ಹಾಡಿಯನ್ನಾಗಿಸುವುದಾಗಿ ಹೇಳಿದರು.

Advertisement

ಹಳ್ಳಿಗಳು, ಗಿರಿಜನ ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ರಾತ್ರಿ ವೇಳೆಯಲ್ಲಿಯೂ ತಮಗೆ ದೂರುಗಳು ಬರುತ್ತಿವೆ. ಮದ್ಯದ ಅಂಗಡಿಗಳ ಪರವಾನಗಿ ವರ್ಗಾವಣೆ ಯನ್ನು ಸದ್ಯ ಅಬಕಾರಿ ಇಲಾಖೆ ಮಾಡುತ್ತಿರುವುದರಿಂದ ಈ ರೀತಿಯ ಸಮಸ್ಯೆ ತಲೆದೋರಿದೆ. ಇನ್ನು ಮುಂದೆ ಜಿಲ್ಲಾಧಿಕಾರಿ ಮೂಲಕವೇ ವರ್ಗಾವಣೆ ಕೂಡ ಆಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಪೊ›. ಮುಜಾಫ‌ರ್‌ ಅಸ್ಸಾದಿ ವರದಿಯಂತೆ ಸರ್ವೇ ಕಾರ್ಯ ಕೊನೆ ಹಂತಕ್ಕೆ ಬಂದಿದ್ದು, ಜೂ.30ರೊಳಗೆ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು. 
ನಾಗಾಪುರ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಆಸ್ಪತ್ರೆ ಕಾರ್ಯಾರಂಭ ಮಾಡಿಸಲಾಗುವುದು.

ಬೆಳೆನಷ್ಟ ಪರಿಹಾರ ನೀಡಿಕೆಗೆ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯವಾಗಿರುವುದರಿಂದ ಈ ತಿಂಗಳ ಮೂರನೇ ಶನಿವಾರ ಹಾಗೂ ಜುಲೈ ತಿಂಗಳ ಮೊದಲ ಶನಿವಾರ ನಾಗಾಪುರ ಆಶ್ರಮ ಶಾಲೆಯಲ್ಲಿ ಏರ್ಪಡಿಸುವ ಆಧಾರ್‌ ನೋಂದಣಿ ಕಾರ್ಯದಲ್ಲಿ ಭಾಗವಹಿಸಿ ಆಧಾರ್‌ ನೋಂದಣಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜೇನುಕುರುಬರ ಕಲ್ಯಾಣ ಇಲಾಖೆ ಕಚೇರಿಗೆ ಉಪ ತಹಶೀಲ್ದಾರ್‌ ದರ್ಜೆಯ ಅಧಿಕಾರಿ ಇರಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಜತೆಗೆ ಗಿರಿಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಎಲ್ಲ ಹಾಡಿಗಳಲ್ಲಿ ಆರೋಗ್ಯ ಶಿಬಿರ ನಡೆಸುವುದಾಗಿ ತಿಳಿಸಿದರು.

ಬೆಳೆ ಬೆಳೆದವರ ವಿರುದ್ಧ ಎಫ್ಐಆರ್‌
ಮೈಸೂರು:
ನಾಗಾಪುರದ ಆರು ಘಟಕಗಳ ಗಿರಿಜನರ ಭೂಮಿಯಲ್ಲಿ ತಂಬಾಕು ಹಾಗೂ ಶುಂಠಿ ಬೆಳೆದಿರುವ ಬೇರೆಯವರ ವಿರುದ್ಧ ಎಫ್ಐಆರ್‌ ದಾಖಲಿಸಿ, ತಂಬಾಕು-ಶುಂಠಿ ಬೆಳೆಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಹುಣಸೂರು ಉಪ ವಿಭಾಗಾಧಿಕಾರಿ ಡಾ.ಸೌಜನ್ಯರಿಗೆ ಜಿಲ್ಲಾಧಿಕಾರಿ ಡಿ.ರಂದೀಪ್‌ ಸೂಚಿಸಿದರು.

ಹುಣಸೂರಿನ ಲ್ಯಾಂಪ್‌ ಸೊಸೈಟಿಯಲ್ಲಿ ಜೇನು ಕುರುಬರಿಗೆ ಸದಸ್ಯತ್ವ ನೀಡದಿರುವುದು, ನಿಯಮಿತವಾಗಿ ಸಂಘದ ಲೆಕ್ಕ ಪರಿಶೋಧನೆ ನಡೆಸದಿರುವ ಬಗ್ಗೆ ದೂರುಗಳು ಕೇಳಿಬಂದಿರುವ ಹಿನ್ನೆಲೆ ಹುಣಸೂರು ಲ್ಯಾಂಪ್‌ ಸೊಸೈಟಿ ಸೂಪರ್‌ ಸೀಡ್‌ ಮಾಡುವ ಸಂಬಂಧ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಪತ್ರ ಬರೆಯುವಂತೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next