ವಿಜಯಪುರ : ನನ್ನನ್ನು ಏನೂ ಮಾಡುವುದು ಬೇಡ, ರಾಜ್ಯಕ್ಕೆ ಖಡಕ್ ಮಾತನಾಡುವ ಒಬ್ಬರಾದರೂ ಬೇಕಿದ್ದಾರೆ. ದುಡ್ಡು ಲೂಟಿ ಮಾಡುವ ಹಣದ ವ್ಯಾಮೋಹ ಇಲ್ಲದ ನನ್ನ ಕೈಗೆ ರಾಜ್ಯವನ್ನು ಕೊಟ್ಟರೆ ಮಾದರಿ ಕರ್ನಾಟಕವನ್ನಾಗಿ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳಿಗೆ ಮಾತ್ರ ಅಪ್ಪಾಜಿ ಎಂದಿರುವ ನಾನು, ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿಲ್ಲ, ಅಪ್ಪಾಜಿ ಎನ್ನಲಾಗದೇ ಪಕ್ಷದಲ್ಲಿ ಎಂದೂ ಸ್ಥಾನ ಮಾನ ಕೊಡಿ ಎಂದು ಯಾರನ್ನೂ ಕೇಳಿಲ್ಲ ಎಂದರು.
ನನ್ನ ಹಿಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಯಾರು ಇಲ್ಲ ಎಂಬ ಪ್ರಶ್ನೆಯೇ ಇಲ್ಲ. ಚಾಮರಾಜನಗರ ಕೋಲಾರದಿಂದ ಹಿಡಿದು ಬಸವಕಲ್ಯಾಣದ ವರೆಗೂ ಎಲ್ಲಿಯೇ ಹೋಗಿ ಕೇಳಿ ನೀವು ಇರಬೇಕು ಎಂದು ಜನರೇ ನನಗೆ ಹೇಳುತ್ತಾರೆ. ಅಧಿಕಾರವೇ ಇಲ್ಲದಿದ್ದರೂ ಕೇವಲ ಶಾಸಕನಾಗಿ ನಾನು ಇಡೀ ವಿಜಯಪುರ ಅಭಿವೃದ್ಧಿ ಮಾಡಿದ್ದರಿಂದ ದೇಶದ ಉತ್ತಮ ಗಾಳಿ ಬೀಸುವ ಪ್ರದೇಶಗಳ ಪಟ್ಟಿಯಲ್ಲಿ ಇದೀಗ ವಿಜಯಪುರ 6ನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.
ಯಾರು ಇಲ್ಲ ಜಗತ್ತಲ್ಲಿ ಯಾರು ಯಾರ ಜೊತೆಗೂ ಇಲ್ಲ. ಕೋವಿಡ್ ಸಂಕಷ್ಟದಲ್ಲಿ ಯಾರೊಂದಿಗೆ ಯಾರಿದ್ದರು. ಅಪ್ಪ ಮಗನನ್ನು ಮುಟ್ಟಲಿಲ್ಲ, ಮಗ ಅಪ್ಪನನ್ನು ಮುಟ್ಟಲಿಲ್ಲ, ಆಗೆಲ್ಲ ಜೊತೆಗಿದ್ದು ಯಾರು ಮುಟ್ಟಿದ್ದರು ಹೇಳಿ. ಹೀಗಾಗಿ ನನಗೆ ಯಾರೂ ಬೇಕಿಲ್ಲ, ನನ್ನ ಹಿಂದೆ ಜನರಿದ್ದಾರೆ ಎಂದರು.
ನಾನು 750 ಕೋಟಿ ರೂ. ವೆಚ್ಚದಲ್ಲಿ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಎಥೆನಾಲ್ ಕಾರ್ಖಾನೆ ಮಾಡಿದ್ದೇನೆ. ನಾನು ರೈತರ ಮಗ, ಎಂದು ಭಾಷಣ ಹೊಡೆಯುವ ನೀವು ರೈತರಿಗಾಗಿ ಮಾಡಿದ್ದು ಏನು ಎಂದು ಹೇಳಿ ಎಂದು ಯಡಿಯುರಪ್ಪ ಹಾಗೂ ವಿಜಯೇಂದ್ರ ಅವರನ್ನು ಪ್ರಶ್ನಿಸಿದರು.
ನಾನೇ ಮೊದಲು ಕೃಷಿ ಬಜೆಟ್ ಮಂಡಿಸಿದ್ದು ಎನ್ನುತ್ತಾರೆ. ನಮ್ಮ ರೈತನ ಮಕ್ಕಳು ದುಬೈನಲ್ಲಿ ಆಸ್ತಿ ಮಾಡಿರುವುದು ಏಕೆ, ಅಮೆರಿಕಯಲ್ಲಿ ಮನೆ ಖರೀದಿಸಿದ್ದು ಏಕೆ ಎಂದು ಉತ್ತರಿಸಲಿ ಎದು ಆಗ್ರಹಿಸಿದರು.