Advertisement
“”ಹೌದಾ, ನಮ್ಮ ಸಂಬಂಧದಲ್ಲೇ ಒಂದು ಹುಡುಗಿ ಇದ್ದಾಳೆ. ತುಂಬಾ ಪಾಪದವಳು. ಬಿ.ಎ. ಗ್ರಾಜುಯೇಟ್. ಬೇಕಾದರೆ ನೋಡಬಹುದು…’‘
“”ಬರೀ ಬಿ.ಎ. ಗ್ರಾಜುಯೇಟ್ ಹುಡುಗಿ ಬೇಡ ಕಣ್ರೀ. ನನ್ನ ಮಗ ನಿಮ್ಗೆ ಗೊತ್ತಲ್ಲಾ… ಸಾಫ್ಟ್ವೇರ್ ಇಂಜಿನಿಯರ್. ಬಿಇ ಓದಿ ಕೆಲಸದಲ್ಲಿದ್ದವಳನ್ನೇ ಹುಡುಕ್ತಾ ಇದ್ದೀವಿ”.
Related Articles
Advertisement
ಮಗನಷ್ಟೇ ಸಂಬಳ ತರುವ ಸೊಸೆಯನ್ನು ಮನೆ ತುಂಬಿಸಿಕೊಂಡುಬಿಟ್ಟರೆ ಸಾಲದು. ಅವಳಿಗೊಂದು ಮಗುವಾಯಿತೆಂದರೆ ಸಾಕು ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಂತೆಯೇ ಸರಿ ಎಂಬುದನ್ನು ಅಜ್ಜಿಯರು ಮರೆತುಬಿಡುತ್ತಾರೆ. ಹಳ್ಳಿಯ ಮುಕ್ತ ವಾತಾವರಣ, ಪುರಾಣ, ಹರಿಕಥೆ, ಮಹಿಳಾಮಂಡಲ, ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕುತ್ತಿದ್ದ ಅಜ್ಜಿಯಂದಿರ ತಲೆಯ ಮೇಲೆ ನಗರಗಳಲ್ಲಿ ಮೊಮ್ಮಗುವನ್ನು ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಬಿದ್ದು ಬಿಡುತ್ತದೆ. ಅವರ ಪಯಣ ಹಳ್ಳಿಯಿಂದ ದಿಲ್ಲಿಯತ್ತ ಸಾಗುತ್ತದೆ. ಹಳ್ಳಿಯ ವಿಶಾಲವಾದ ಪರಿಸರದಲ್ಲಿ ಬೆಳೆದ ಅವರಿಗೆ ನಗರಗಳ ಫ್ಲಾಟಿನಲ್ಲಿದ್ದ ವಾಸ ಉಸಿರು ಕಟ್ಟಿಸುವ ಅನುಭವ ತರುತ್ತದೆ. ಸುತ್ತಮುತ್ತಲಿನ ಮನೆಯ ಮುಚ್ಚಿದ ಬಾಗಿಲುಗಳು ಅವರಿಗೆ ಕಾರಾಗೃಹವನ್ನು ನೆನಪಿಸುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಖೈದಿಗಳಂತೆ ಬಾಯಿಗೆ ಬೀಗ ಹಾಕಿಕೊಂಡು ಬದುಕಬೇಕಾದ ಸಂದರ್ಭ ಬಂದಾಗ ಮಾನಸಿಕವಾಗಿ ಆಘಾತಗೊಂಡು ಉದ್ಯೋಗಸ್ಥ ಸೊಸೆ ಬೇಡವಾಗಿತ್ತು ಎಂಬ ಭಾವನೆ ಬರುವುದು ಸಹಜ. ಸುಖಲೋಲುಪ ಜೀವನಕ್ಕಾಗಿ ಆಸೆಪಟ್ಟು ಇಲ್ಲಿ ಸಿಕ್ಕಿಹಾಕಿಕೊಂಡೆನೇನೋ ಎಂಬ ಅಪರಾಧಿ ಪ್ರಜ್ಞೆ ಕಾಡುತ್ತದೆ.ನಗರಗಳಲ್ಲಿನ ಮೋಸ, ವಂಚನೆಗಳ ಅರಿವಿದ್ದ ದಂಪತಿಗಳಿಗೆ ಮಗುವನ್ನು ಡೇಕೇರ್, ಚೈಲ್ಡ್ ಕೇರ್‌ಗಳಂಥ ಸಂಸೆ§ಗಳಲ್ಲಿ ಬಿಡಲು ಇಷ್ಟವಿಲ್ಲವಾದಾಗ, ಮಗುವನ್ನು ನೋಡಿಕೊಳ್ಳಲು ತಾಯಿಯನ್ನೇ ಅವಲಂಬಿಸಬೇಕಾಗುತ್ತದೆ.
ತಮ್ಮ ಮಕ್ಕಳ ಜವಾಬ್ದಾರಿಗಳೆಲ್ಲ ಮುಗಿದು ಅವರ ದಾರಿ ಸುಗಮವಾಯಿತೆಂದು ನೆಮ್ಮದಿಯಿಂದಿದ್ದ ವೃದ್ಧರಿಗೆ ಪುಟ್ಟ ಮೊಮ್ಮಗುವಿನ ಜವಾಬ್ದಾರಿ ಹೊರುವುದೆಂದರೆ ಒಂದು ಹೊರೆಯೇ ಸರಿ. ವಯೋಸಹಜ ಸಣ್ಣಪುಟ್ಟ ಕಾಯಿಲೆಗಳಿಂದ ಬಳಲುತ್ತಿರುವ 60-65ರ ವೃದ್ಧರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಪುಟ್ಟ ಮಗುವಿನ ಲಾಲನೆ-ಪಾಲನೆ ಕಷ್ಟದ ಕೆಲಸ ಅನ್ನಿಸಿದರೆ ತಪ್ಪೇನಿಲ್ಲ.
ಐಷಾರಾಮಿ ಜೀವನಕ್ಕೆ ಹೊಂದಿಕೊಂಡು ಬಿಟ್ಟವರಿಗೆ ಸೊಸೆಯನ್ನು ಕೆಲಸ ಬಿಡಲು ಹೇಳಲೂ ಧೈರ್ಯವಿರುವುದಿಲ್ಲ. ಕೆಲಸಕ್ಕೆ ಹೋಗುವ ಹುಡುಗಿಯನ್ನೇ ಸೊಸೆಯನ್ನಾಗಿ ಆಯ್ಕೆಮಾಡಿಕೊಂಡವರಿಗೆ ಈಗ ಬದುಕನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಮಕ್ಕಳ ಆಶ್ರಯದಲ್ಲೇ ಬದುಕಬೇಕಾದ ಅನಿವಾರ್ಯತೆಯಿಂದ ಅನ್ನಲೂ ಆಗದೆ ಅನುಭವಿಸಲೂ ಆಗದೆ ಒಳಗೊಳಗೇ ಕೊರಗುತ್ತಿರುತ್ತಾರೆ. ಒಟ್ಟಾರೆ ಅವರ ಪರಿಸ್ಥಿತಿ ಬಿಸಿ ತುಪ್ಪದಂತಾಗಿ ಬಿಡುತ್ತದೆ. ನುಂಗಲೂ ಆಗದೆ ಉಗಿಯಲೂ ಆಗದೆ ಒದ್ದಾಡುತ್ತಿರುತ್ತಾರೆ.
ಸಣ್ಣ ಪ್ರಾಯದಲ್ಲಿ ತಮ್ಮ ಮಕ್ಕಳ ಓದು, ಜವಾಬ್ದಾರಿಗಳಿಂದ ಬಸವಳಿದು ಈಗಲಾದರೂ ತಮಗಿಷ್ಟ ಬಂದ ಹಾಗೆ ಬದುಕಲಾಗದೆ ಒದ್ದಾಡುವುದನ್ನು ನೋಡಿದರೆ ಮಹಿಳೆಗೆ ನಿವೃತ್ತ ಜೀವನವೆಂಬುದೇ ಇಲ್ಲವೇ, ಹುಟ್ಟಿನಿಂದ ಸಾಯುವವರೆಗೂ ಅವಳು ದುಡಿಯುತ್ತಲೇ ಇರಬೇಕೇ ಎಂಬ ಪ್ರಶ್ನೆಯು ಕಾಡದೇ ಇರದು. ಬಾಲ್ಯದಲ್ಲಿ ತಂದೆಯ, ಯೌವ್ವನದಲ್ಲಿ ಗಂಡನ, ವೃದ್ಧಾಪ್ಯದಲ್ಲಿ ಮಕ್ಕಳ ಆಶ್ರಯದಲ್ಲಿಯೇ ಬಾಳುವ ಅವಳಿಗೆ ಸ್ವತಂತ್ರವಾದ ಬದುಕೇ ಇಲ್ಲವೇ ಎಂಬ ಕನಿಕರ ಯಾರಿಗಾದರೂ ಬಾರದೇ ಇರದು.
ಒಂದು ರೀತಿಯಲ್ಲಿ ಹೇಳುವುದಾದರೆ ಮಗನಿಗೆ ಸಂಸಾರ ನಿಭಾಯಿಸುವಷ್ಟು ಸಂಬಳ ಬರುತ್ತಿದ್ದರೆ ಸೊಸೆ ಮನೆವಾರ್ತೆ ನೋಡಿಕೊಂಡಿರುವುದೇ ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು. ಪುಟ್ಟ ಕಂದನನ್ನು ಬಿಟ್ಟು ಕೆಲಸಕ್ಕೆ ಹೋಗುವಾಗ ಅವಳಿಗಾಗುವ ವೇದನೆ, ಬಂದ ನಂತರ ಮಗುವನ್ನು ಅಪ್ಪಿಕೊಂಡಾಗ ಆಗುವ ಸಂತೋಷ ಇದಕ್ಕಿಂತ ಮಿಗಿಲಾದುದು ಇನ್ನೇನಿದೆ. ಪುಟ್ಟ ಮಗುವಿನ ಲಾಲನೆ-ಪಾಲನೆಯನ್ನು ಅಮ್ಮನಿಗಿಂತ ಬೇರೆ ಇನ್ಯಾರೂ ನೋಡಿಕೊಳ್ಳಲು ಸಾಧ್ಯ. ಅದರ ಅಳುವಿಗೆ ಕಾರಣ ಅಮ್ಮನಿಗಲ್ಲದೆ ಇನ್ಯಾರಿಗೆ ಗೊತ್ತಾಗುತ್ತದೆ. ತನ್ನ ಕಂದನ ಆಟ, ತೊದಲು ಮಾತುಗಳಿಂದ ವಂಚಿತಳಾಗಿ ದಿನದ ಹೆಚ್ಚು ಭಾಗ ಮನೆಯಿಂದ ಹೊರಗೇ ಕಳೆಯಬೇಕಾದ ಅಮ್ಮಂದಿರ ಪರಿಸ್ಥಿತಿಯೇನೂ ಸುಲಭವಾದದ್ದೇ?
ಮನುಷ್ಯನ ಆಸೆಗೆ ಮಿತಿ ಎಂಬುದಿಲ್ಲ. ಗಂಡನಿಗೆ ಬರುವ ಸಂಬಳದಲ್ಲೇ ನಾಜೂಕಾಗಿ ಸಂಸಾರ ನಡೆಸುತ್ತ, ಎಲ್ಲರ ಬೇಕು ಬೇಡಗಳಿಗೆ ಸಾಕ್ಷಿಯಾಗುತ್ತ, ಮಗುವಿಗೆ ಪೂರ್ಣಪ್ರಮಾಣದ ತಾಯಿಯಾಗಿ ಬದುಕುವುದರಲ್ಲಿರುವ ತೃಪ್ತಿ ಯಾವ ಹಣದಿಂದಲೂ ಕೊಳ್ಳುವಂತಹುದಲ್ಲ ಎನ್ನುವುದನ್ನು ಇಂದಿನ ಯುವತಿಯರು ಮನಗಾಣಬೇಕು. ಆಗ ಹಿರಿಯರು ಹೇಳಿದ “ಗೃಹಿಣಿ ಗೃಹಮುಚ್ಯತೆ’ ಎಂಬ ನುಡಿಗಟ್ಟಿಗೂ ಒಂದು ಅರ್ಥ ಬರುತ್ತದೆ.
– ಪುಷ್ಪಾ ಎನ್.ಕೆ. ರಾವ್