ಪ್ರಸಕ್ತ ದಿನಕ್ಕೆ ಸುಮಾರು 2 ಕೋಟಿ ಕ್ಯೂಬಿಕ್ ಮೀಟರ್ ನೀರು ಅಣೆಕಟ್ಟಿಗೆ ಹರಿದುಬರುತ್ತಿದೆ. ಅಂದರೆ ವಿದ್ಯುತ್ ಉತ್ಪಾದನೆ ಬಳಿಕವೂ 1 ಕೋಟಿ ಕ್ಯೂಬಿಕ್ ಮೀಟರ್ ನೀರನ್ನು ಅಣೆಕಟ್ಟಿನಲ್ಲಿ ಸಂಗ್ರಹಿಸಬೇಕಾಗುತ್ತದೆ. ನಿನ್ನೆ ಕೇವಲ 88 ಲಕ್ಷ ಯೂನಿಟ್ ವಿದ್ಯುತ್ ಅನ್ನು ಉತ್ಪಾದಿಸಲಾಗಿತ್ತು. ಜನರೇಟರ್‌ಗಳನ್ನು ನಿರಂತರ ಚಾಲೂಗೊಳಿಸಿದಲ್ಲಿ ಅವು ಹಾಳಾಗುವ ಸಾಧ್ಯತೆಯಿದೆ. ಅಣೆಕಟ್ಟಿನ ಬಾಗಿಲುಗಳನ್ನು ತೆರೆಯುವ ಕುರಿತು ಅಣೆಕಟ್ಟು ಸುರಕ್ಷಾ ಘಟಕದ ಸಭೆಯೊಂದನ್ನು ಕರೆಯಲಾಗಿದೆ.
ಚಿರುತ್ತೂಣಿ: ಇಡುಕ್ಕಿ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುವುದು ಮುಂದುವರಿದಿದ್ದು ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗುವ ಸಾಧ್ಯತೆಯಿದೆ.
ಪ್ರಸಕ್ತ ಅಣೆಕಟ್ಟು ತನ್ನ ಸಾಮರ್ಥ್ಯದ ಶೇ. 81.15ರಷ್ಟು ಭರ್ತಿಯಾಗಿದ್ದು ಮಳೆ ಹೀಗಿಯೇ ಮುಂದುವರಿದಲ್ಲಿ ಅಣೆಕಟ್ಟು 18 ದಿನಗಳೊಳಗೆ ತನ್ನ ಪೂರ್ಣ ಪ್ರಮಾಣವನ್ನು ತಲಪಲಿದೆ.ಮೂಲಮಠಂ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದ್ದರೂ ಜಲಾಶಯಕ್ಕೆ ಹರಿದುಬರುತ್ತಿರುವ ನೀರು ಕಡಿಮೆ ಯಾಗಿಲ್ಲವಾದ ಕಾರಣ ಬಾಗಿಲುಗಳನ್ನು ತೆರೆಯಬೇಕಾಗಬಹುದು. ಮಂಗಳವಾರ ನೀರಿನ ಪ್ರಮಾಣ 2,386.54 ಅಡಿಗೆ ತಲಪಿದ್ದು ಇದು ಅಣೆಕಟ್ಟಿನ ಗರಿಷ್ಠ ಸಾಮರ್ಥ್ಯವಾದ 2,403 ಅಡಿಗಳಿಗೆ ಕೇವಲ 17 ಅಡಿ ಮಾತ್ರ ಕಡಿಮೆ. ಅಣೆಕಟ್ಟಿನ ನೀರು ಪ್ರತಿದಿನ ಸರಾಸರಿ ಒಂದು ಅಡಿಯಂತೆ ಹೆಚ್ಚುತ್ತಿದೆ. ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಸುಮಾರು 8 ಸೆಂ.ಮೀ. ಮಳೆ ಸುರಿದಿದೆ. ಅಣೆಕಟ್ಟು 40 ಅಡಿ ಉದ್ದ ಹಾಗೂ 60 ಅಡಿ ಅಗಲದ ಐದು ಬಾಗಿಲುಗಳನ್ನು ಹೊಂದಿದೆ.
ಸಾಮಾನ್ಯವಾಗಿ ಅಣೆಕಟ್ಟು ಗರಿಷ್ಠ ಸಾಮರ್ಥ್ಯವನ್ನು ತಲಪಿದ ಬಳಿಕ ನೀರಿನ ಬಲವಾದ ಹರಿವನ್ನು ನಿಯಂತ್ರಿಸು ವುದಕ್ಕಾಗಿ ಬಾಗಿಲುಗಳನ್ನು ಕೇವಲ ಕೆಲವು ಅಂಗುಲಗಳಷ್ಟು ತೆರೆಯಲಾಗುತ್ತದೆ. ಈ ಹಿಂದೆ ಕೇವಲ ಎರಡು ಬಾರಿ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗಿತ್ತು ಮತ್ತು ಎರಡೂ ಬಾರಿ ಅದು ಅಕ್ಟೋಬರ್ ತಿಂಗಳಿನಲ್ಲಾಗಿತ್ತು. 1992ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗಿತ್ತು.
ಜುಲೈಯಲ್ಲಿ ಉಪುತ್ತಾರದಿಂದ ಕುಲ ಮಾವು ತನಕ ವ್ಯಾಪಿಸಿರುವ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಪ್ರಸಕ್ತ ಮೂಲಮಠಂ ವಿದ್ಯುದಾಗಾರ ಹರಿದು ಬರುತ್ತಿರುವ ಅಗಾಧ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿಲ್ಲ. ವಿದ್ಯುದಾಗಾರದಲ್ಲಿ ಆರು ಜನರೇಟರ್‌ಗಳಿದ್ದು ಈ ಪೈಕಿ ಒಂದೂ ಕೆಲಸ ಮಾಡುತ್ತಿಲ್ಲ. ಉಳಿದ ಐದು ಜನರೇಟರ್‌ಗಳು ದಿನದ 24 ತಾಸುಗಳ ಕಾಲ ಕಾರ್ಯಾಚರಿಸಿದರೆ ಸುಮಾರು 2.4 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಇದಕ್ಕೆ 1.02 ಕೋಟಿ ಕ್ಯೂಬಿಕ್ ಮೀಟರ್ ಸಾಕಾಗುತ್ತದೆ.