Advertisement

ಬೂಸ್ಟರ್‌ಗೆ ಐಸಿಎಂಆರ್‌ ಒತ್ತು; ಸಂಸತ್‌ ಸ್ಥಾಯೀ ಸಮಿತಿ ಮುಂದೆ ಪ್ರತಿಪಾದನೆ

01:41 AM Dec 11, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ದೇಶದಲ್ಲಿ ಒಮಿಕ್ರಾನ್‌ ರೂಪಾಂತರಿಯ ಸೋಂಕಿಗೀಡಾ ದವರ ಸಂಖ್ಯೆ 32ಕ್ಕೆ ಏರಿದ್ದು, ಕೊರೊನಾ ವಿರುದ್ಧ ಬೂಸ್ಟರ್‌ ಡೋಸ್‌ ಲಸಿಕೆ ನೀಡುವ ಮಾತುಗಳು ಕೇಳಿಬರಲಾರಂಭಿಸಿವೆ.

Advertisement

ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ನಿರ್ದೇಶಕ ಡಾ| ಬಲರಾಮ ಭಾರ್ಗವ ಎರಡೂ ಡೋಸ್‌ ಲಸಿಕೆ ಪಡೆದು 9 ತಿಂಗಳುಗಳಾಗಿದ್ದರೆ ಹೆಚ್ಚುವರಿ ಡೋಸ್‌ ನೀಡಬಹುದು ಎಂದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಂಸತ್ತಿನ ಸ್ಥಾಯೀ ಸಮಿತಿ ಮುಂದೆ ಅವರು ಈ ಅಂಶ ಪ್ರಸ್ತಾವಿಸಿದ್ದಾರೆ.

ಸದ್ಯ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಎರಡೂ ಡೋಸ್‌ ನೀಡಿ ಒಂಬತ್ತು ತಿಂಗಳು ಕಳೆದಿವೆ. ಇವರಿಗೆ ಆದ್ಯತೆ ಮೇರೆಗೆ ಬೂಸ್ಟರ್‌ ಅಥವಾ ಹೆಚ್ಚುವರಿ ಡೋಸ್‌ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಐಸಿಎಂಆರ್‌ನ ನಿರ್ದೇಶಕರು ಈ ಸಲಹೆ ನೀಡಿದ್ದಾರೆ.

ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪೌಲ್‌ ಜತೆಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಡಾ| ಬಲರಾಮ ಭಾರ್ಗವ, ಒಮಿಕ್ರಾನ್‌ ವಿರುದ್ಧ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಯೇ ಎಂಬುದರ ಬಗ್ಗೆ ಪ್ರಯೋಗ ಆರಂಭವಾಗಿದೆ ಎಂದಿದ್ದರು.

ಇದಕ್ಕಾಗಿ ಪುಣೆಯಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ಮತ್ತು ಐಸಿಎಂಆರ್‌ನಲ್ಲಿ ಒಮಿಕ್ರಾನ್‌ ದೃಢಪಟ್ಟ ಕೆಲವರ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂದಿದ್ದಾರೆ.

Advertisement

ಇದನ್ನೂ ಓದಿ:ದೇಶದಲ್ಲಿ 25 ಒಮಿಕ್ರಾನ್ ಪ್ರಕರಣಗಳು : ಮಾಸ್ಕ್ ಗಳ ಬಳಕೆ ಕಡಿಮೆ;ಎಚ್ಚರಿಕೆ

ಶಿಫಾರಸು ಮಾಡಿಲ್ಲ
ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಲಸಿಕೆಯ ರಾಷ್ಟ್ರೀಯ ತಾಂತ್ರಿಕ ಸಮಿತಿ (ಎನ್‌ಟಿಎಜಿಐ) ಶಿಫಾರಸು ಮಾಡಿಲ್ಲ ವೆಂದು ನೀತಿ ಆಯೋಗದ ಸದಸ್ಯ ಡಾಣ ವಿ.ಕೆ. ಪೌಲ್‌ ತಿಳಿಸಿದ್ದಾರೆ. ಸಮಿತಿ ಸದಸ್ಯರು ಲಸಿಕೆ ಹಾಕುವ ವಿಚಾರದ ಬಗ್ಗೆ ಇರುವ ಅಂಶಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಇದುವರೆಗೆ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಶಿಫಾರಸು ಸರಕಾರಕ್ಕೆ ಬಂದಿಲ್ಲ ಎಂದರು.

ಅಲ್ಪ ಪ್ರಮಾಣದ ಲಕ್ಷಣ
ಶುಕ್ರವಾರ ಬೆಳಗ್ಗಿನ ವರೆಗೆ ದೇಶದಲ್ಲಿ 25 ಒಮಿಕ್ರಾನ್‌ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಎಲ್ಲರಲ್ಲೂ ಅಲ್ಪ ಪ್ರಮಾಣದ ಲಕ್ಷಣಗಳು ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ. ಸದ್ಯ ಹೊಸ ರೂಪಾಂತರಿಯ ಸೋಂಕು ಆರೋಗ್ಯ ವ್ಯವಸ್ಥೆಗೆ ಹೊರೆಯಾಗದು ಎಂಬ ಆಶಾವಾದ ಇದೆ. ಆದರೂ ವೈದ್ಯಕೀಯ ಮೂಲಸೌಕರ್ಯವನ್ನು ಸನ್ನದ್ಧವಾಗಿ ಇರಿಸಿಕೊಳ್ಳಬೇಕು ಎಂದವರು ಹೇಳಿದ್ದಾರೆ. ಡಿ. 1ರ ಬಳಿಕ 96 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸೋಂಕು ದೃಢಪಟ್ಟಿದೆ. ಅವರ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

ಇದೇ ವೇಳೆ ದೇಶದ 25 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಅಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಬೇಕು ಮತ್ತು ಅಲ್ಲಿ ಸ್ಥಳೀಯವಾಗಿರುವ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್‌ ಹೇಳಿದ್ದಾರೆ. ಇದಾದ ಬಳಿಕ ಮಹಾರಾಷ್ಟ್ರದಲ್ಲಿ 3 ವರ್ಷದ ಮಗು ಸಹಿತ 7 ಮಂದಿಯಲ್ಲಿ ಒಮಿಕ್ರಾನ್‌ ಸೋಂಕು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 32ಕ್ಕೆ ಏರಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅನುಮೋದನೆ
ಅತೀ ಅಪಾಯ ದೇಶಗಳಿಂದ ಆಗಮಿಸಿದ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟರೆ, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಗುರುತಿಸಲಾದ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಬೇಕು. ಅದರ ಸಂಪೂರ್ಣ ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ. ಚಿಕಿತ್ಸೆ ಮತ್ತು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ.

ಮಾಸ್ಕ್ ಮರೆಯಬೇಡಿ
ಜಗತ್ತಿನ ಇತರ ರಾಷ್ಟ್ರಗಳ ಪರಿಸ್ಥಿತಿಯನ್ನು ಗಮನಿಸಬೇಕು. ದೇಶದಲ್ಲಿ ಮಾಸ್ಕ್ ಧರಿಸುವವರ ಪ್ರಮಾಣ ಕಡಿಮೆಯಾಗಿದೆ ಎಂದು ಡಾ| ವಿ.ಕೆ. ಪೌಲ್‌ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಎಲ್ಲರೂ ಸೋಂಕು ಪ್ರತಿಬಂಧಕ ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಮತ್ತೆ ಕಠಿನ ಪರಿಸ್ಥಿತಿ ಉಂಟಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಎರಡು ಡೋಸ್‌ ಲಸಿಕೆ ಪಡೆಯುವುದು ಮತ್ತು ಮಾಸ್ಕ್ ಧರಿಸುವುದು ಅತ್ಯಗತ್ಯ. ಜಗತ್ತಿನಲ್ಲಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದರು.

ಡಿಸ್ಚಾರ್ಜ್ ಗೆ ರಾಜ್ಯ ಸರಕಾರದ ಮಾರ್ಗಸೂಚಿ
ಒಮಿಕ್ರಾನ್‌ ಸೋಂಕು ದೃಢಪಟ್ಟವರು ಗುಣಹೊಂದಿದ ಬಳಿಕ ಡಿಸ್ಚಾರ್ಜ್ ಮಾಡುವ ಬಗ್ಗೆ ರಾಜ್ಯ ಸರಕಾರ ಶುಕ್ರವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

1. ಸೋಂಕುಪೀಡಿತ ವ್ಯಕ್ತಿ ಮೂರು ದಿನಗಳಿಂದ ಕೋವಿಡ್‌ನ‌ ಲಕ್ಷಣ ಹೊಂದಿರಬಾರದು. ಕೃತಕ ಆಮ್ಲಜನಕದ ಸಹಾಯವಿಲ್ಲದೆ ಸತತ 4 ದಿನ ಆಮ್ಲಜನಕ ಮಟ್ಟ ಶೇ. 95ರಷ್ಟು ಇರಬೇಕು.

2. ಡಿಸ್ಚಾರ್ಜ್ ಆದ ಬಳಿಕ 7 ದಿನಗಳ ಕಾಲ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಬೇಕು. ಅವರ ಮಾಹಿತಿ ಮತ್ತು ಆರೋಗ್ಯದ ವಿವರವನ್ನು ಆಯಾ ಜಿಲ್ಲೆಗಳ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು ಸಂಗ್ರಹಿಸಬೇಕು.

3. ಹೋಮ್‌ ಕ್ವಾರಂಟೈನ್‌ ಬಳಿಕ ಆರ್‌ಟಿ-ಪಿಸಿಆರ್‌ ವರದಿ ನೆಗೆಟಿವ್‌ ಬಂದರಷ್ಟೇ ಕ್ವಾರಂಟೈನ್‌ನಿಂದ ಬಿಡುಗಡೆ.

4. ಸೌಮ್ಯ, ಸಾಮಾನ್ಯ ಲಕ್ಷಣ ಹೊಂದಿರುವ ವ್ಯಕ್ತಿಗಳು ಡಿಸ್ಚಾರ್ಜ್ ಆಗುವ 24 ತಾಸು ಮೊದಲು ನಡೆಸಲಾಗುವ ಎರಡು ಆರ್‌ಟಿ- ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಹೊಂದಿರಬೇಕು.

5. ತೀವ್ರ ಲಕ್ಷಣಗಳಿರುವ ರೋಗಿ ಚಿಕಿತ್ಸೆ ಪಡೆದು ಚೇತರಿಸಿ ಕೊಂಡ 3 ದಿನಗಳ ಅನಂತರ ನಡೆಸಲಾಗುವ ಆರ್‌ಟಿ- ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೆ ಮಾತ್ರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಹೋಮ್‌ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ. ಪಾಸಿಟಿವ್‌ ಬಂದರೆ 48 ತಾಸುಗಳ ಒಳಗೆ ವ್ಯಕ್ತಿಯ ಸ್ಲ್ಯಾಬ್ ಪರೀಕ್ಷೆಗೆ ಕಳಹಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next