Advertisement

World Cup; ಸಮರ ಗೆದ್ದ ವೀರ ಮ್ಯಾಕ್ಸ್ ವೆಲ್!:ಅಫ್ಘಾನ್ ವಿರುದ್ಧ ಸೋತು ಗೆದ್ದ ಆಸೀಸ್

10:45 PM Nov 07, 2023 | Team Udayavani |

ಮುಂಬೈ :ವಿಶ್ವಕಪ್ ಕ್ರಿಕೆಟ್ ರೋಚಕ ಹಂತಕ್ಕೆ ತಲುಪಿದ್ದು ಮಂಗಳವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಲಾಢ್ಯ ತಂಡವೆಂದು ಪರಿಗಣಿಸಲ್ ಪಟ್ಟ ಆಸ್ಟ್ರೇಲಿಯ  ತಂಡ ಅಫ್ಘಾನಿಸ್ಥಾನ ವಿರುದ್ದದ ಪಂದ್ಯದಲ್ಲಿ ಸೋಲಿನ ಸುಲಿಗೆ ಸಿಲುಕಿ ಮ್ಯಾಕ್ಸ್ ವೆಲ್ ಕಮಾಲ್ ಮಾಡಿ ಅಮೋಘ ವಿಕ್ರಮ ಸಾಧಿಸಿ ಸೆಮಿಫೈನಲ್ ಪ್ರವೇಶ ಖಚಿತ ಪಡಿಸಿಕೊಂಡಿದೆ.

Advertisement

ಮ್ಯಾಕ್ಸ್ ವೆಲ್ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ ದ್ವಿಶತಕ ಸಿಡಿಸಿ ತಾನೊಬ್ಬ ದೈತ್ಯ ಪ್ರತಿಭೆ ಎನ್ನುವುದನ್ನು ನಿರೂಪಿಸಿ ಆಸ್ಟ್ರೇಲಿಯ ತಂಡದ ವೈಭವಯುತ ಜಯಕ್ಕೆ ಸಾಕ್ಷಿಯಾಗಿ ವಿಶ್ವಕಪ್ ಹೀರೋ ಎನಿಸಿಕೊಂಡರು.

ಅಫ್ಘಾನಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಬ್ರಾಹಿಂ ಜದ್ರಾನ್ ಅವರ ಅಮೋಘ ಶತಕ ಮತ್ತು ಇತರ ಆಟಗಾರರ ಸಮಯೋಚಿತ ಸಾಥ್ ನ ನೆರವಿನಿಂದ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಕಲೆ ಹಾಕಿತು. ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಜದ್ರಾನ್ ಅಜೇಯ 129 ರನ್ ಗಳಿಸಿದರು. 143 ಎಸೆತಗಳಲ್ಲಿ ಇನ್ನಿಂಗ್ಸ್ ಕಟ್ಟಿದ ಅವರು 8 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ ಬಾರಿಸಿದರು.

ಗುರ್ಬಾಜ್ 21, ರಹಮತ್ 30, ಶಾಹಿದಿ 26, ಅಜ್ಮತುಲ್ಲಾ 22, ನಬಿ 12 ಮತ್ತು ಕೊನೆಯಲ್ಲಿ ರಶೀದ್ ಖಾನ್ 18 ಎಸೆತಗಳಲ್ಲಿ 35 ರನ್ ಸಿಡಿಸಿ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು.

292 ರನ್  ಗುರಿ ಬೆನ್ನಟ್ಟಿದ ಆಸೀಸ್ 4 ರನ್ ಗಳಿಸಿದ್ದ ವೇಳೆ ಟ್ರಾವಿಸ್ ಹೆಡ್ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಮೇಲುಗೈ ಸಾಧಿಸಿದ ಅಫ್ಘಾನ್ ಬೌಲರ್ ಗಳು 91 ರನ್ ಆಗುವಷ್ಟರಲ್ಲಿ 7 ಪ್ರಮುಖ ವಿಕೆಟ್ ಬೀಳಿಸಿ ಭಾರೀ ಆಘಾತ ನೀಡಿದರು.

Advertisement

ಡೇವಿಡ್ ವಾರ್ನರ್ 18, ಹೆಡ್ ಶೂನ್ಯ, ಮಿಚೆಲ್ ಮಾರ್ಷ್ 24, ಮಾರ್ನಸ್ ಲಬುಶೇನ್ 14(ರನ್ ಔಟ್), ಜೋಶ್ ಇಂಗ್ಲಿಸ್ 0, ಮಾರ್ಕಸ್ ಸ್ಟೊಯಿನಿಸ್ 6, ಮಿಚೆಲ್ ಸ್ಟಾರ್ಕ್ 3, ರನ್ ಗಳಿಗೆ ನಿರ್ಗಮಿಸಿದರು.

ಆ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್  ಮುರಿಯದ ವಿಕೆಟ್ ಗೆ ಗೆಲುವಿನ ದಡದ ವರೆಗೆ ಈಜಿದರು. ತಂಡ ಸಂಕಷ್ಟದ ಸುಲಿಗೆ ಸಿಲುಕಿದ್ದ ವೇಳೆ ಅತ್ಯಮೋಘ ಆಟವಾಡಿದ ಮ್ಯಾಕ್ಸ್ ವೆಲ್ ಸ್ಮರಣೀಯ ಇನ್ನಿಂಗ್ಸ್ ಆಡಿದರು. ತೀವ್ರವಾದ ಕಾಲುನೋವಿನ ನಡುವೆ ಕುಂಟುತ್ತಾ ಕುಂಟುತ್ತಾ ಒಂದೊಂದು ರನ್ ಗೂ ನೋವಿನಲ್ಲೇ ಓಡಿದರು. ದೊಡ್ಡ ಹೊಡೆತಗಳ ಮೂಲಕವೇ ಗೆಲುವಿನ ಸಂಭ್ರಮಕ್ಕೆ ಸಾಖಿಯಾದರು. ಈ ಪಂದ್ಯವನ್ನು ಸಿನಿಮಾ ಮಾಡಿದರೂ ಅಚ್ಚರಿಯಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹೊರ ಹಾಕಿದ್ದಾರೆ.

ಮ್ಯಾಕ್ಸ್ ವೆಲ್ 128 ಎಸೆತಗಳಿಂದ 201 ರನ್ ಬಾರಿಸಿ ವಿಶ್ವಕಪ್ ದ್ವಿಶತಕದ ಸಂಭ್ರಮ ಆಚರಿಸಿದರು. ಬರೋಬ್ಬರಿ 21 ಬೌಂಡರಿ ಮತ್ತು 10 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ಪ್ಯಾಟ್ ಕಮ್ಮಿನ್ಸ್ ಸಾಥ್ ನೀಡಿ 68 ಎಸೆತಗಳಲ್ಲಿ 12 ರನ್ ಗಳಿಸಿ ಔಟಾಗದೆ ಉಳಿದರು. ರೋಮಾಂಚನಕಾರಿ ಪಂದ್ಯದಲ್ಲಿ ಕೊನೆಗೂ 46.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿ 3 ವಿಕೆಟ್ ಗಳ ಜಯ ಸಾಧಿಸಿತು.

ಅಜ್ಮತುಲ್ಲಾ, ನವೀನ್-ಉಲ್-ಹಕ್,ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು.

ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ಥಾನಕ್ಕೆ ನಿರೀಕ್ಷೆಗೆ ಮೀರಿದ ಸೋಲುಣಿಸಿದ ಅಫ್ಘಾನ್ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಗೆ ಏರಲು ಈ ಪಂದ್ಯವನ್ನು ಗೆಲ್ಲಲೇಬೇಕೆಂಬ ರಣತಂತ್ರ ಹಣೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next