Advertisement

ಸಾವಿರ ಟೆಸ್ಟ್‌  ಸರದಾರರಿಗೆ ಐಸಿಸಿ ಅಭಿನಂದನೆ

10:04 AM Jul 31, 2018 | Harsha Rao |

ಲಂಡನ್‌: ಕ್ರಿಕೆಟ್‌ ಜನಕರೆಂಬ ಖ್ಯಾತಿಯ ಇಂಗ್ಲೆಂಡ್‌ ಈಗ ಇತಿಹಾಸದ ಹೊಸ್ತಿಲಲ್ಲಿದೆ. ಸಾವಿರ ಟೆಸ್ಟ್‌ ಆಡಲಿರುವ ವಿಶ್ವದ ಪ್ರಪ್ರಥಮ ರಾಷ್ಟ್ರವೆಂಬ ಹಿರಿಮೆಗೆ ಇಂಗ್ಲೆಂಡ್‌ ಪಾತ್ರವಾಗಲಿದೆ. ಇದಕ್ಕೆ ಸಾಕ್ಷಿಯಾಗಲಿರುವುದು ಬುಧವಾರ ಪ್ರವಾಸಿ ಭಾರತದ ವಿರುದ್ಧ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಅಂಗಳದಲ್ಲಿ ಆರಂಭವಾಗಲಿರುವ ಪ್ರಥಮ ಟೆಸ್ಟ್‌ ಪಂದ್ಯ.

Advertisement

ಈ ಐತಿಹಾಸಿಕ ಸಂದರ್ಭದಲ್ಲಿ ಕ್ರಿಕೆಟಿನ ಮಾತೃ ಸಂಸ್ಥೆ “ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌’ (ಐಸಿಸಿ) ಇಂಗ್ಲೆಂಡ್‌ ಕ್ರಿಕೆಟಿಗೆ ಶುಭಾಶಯ ಸಲ್ಲಿಸಿ ಅಭಿನಂದಿಸಿದೆ. “ಸಾವಿರ ಟೆಸ್ಟ್‌ ಆಡುತ್ತಿರುವ ಇಂಗ್ಲೆಂಡಿಗೆ ವಿಶ್ವ ಕ್ರಿಕೆಟ್‌ ಕುಟುಂಬದ ಪರವಾಗಿ ಅಭಿನಂದನೆಗಳು. ಇಂಗ್ಲೆಂಡ್‌ ಜಾಗತಿಕ ಕ್ರಿಕೆಟ್‌ನಲ್ಲಿ ಇಂಥದೊಂದು ಮೈಲುಗಲ್ಲು ನೆಡುತ್ತಿರುವ ಮೊದಲ ದೇಶವೆಂಬುದು ವಿಶೇಷ…’ ಎಂದು ಐಸಿಸಿ ಅಧ್ಯಕ್ಷ ಶಶಾಂಕ್‌ ಮನೋಹರ್‌ ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.

“ಈ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಳ್ಳು ತ್ತಿರುವ ಇಂಗ್ಲೆಂಡ್‌ ತಂಡಕ್ಕೆ ಶುಭ ಹಾರೈಕೆಗಳು. ಟೆಸ್ಟ್‌ ಕ್ರಿಕೆಟ್‌ ಅತ್ಯಂತ ಪುರಾತನ ಮಾದರಿಯ ಪಂದ್ಯವಾಗಿದೆ. ಇದಕ್ಕೆ ಸ್ಫೂರ್ತಿ ತುಂಬಬಲ್ಲ ಇನ್ನಷ್ಟು ಸಾಧಕರನ್ನು ಇಂಗ್ಲೆಂಡ್‌ ಕೊಡುಗೆಯಾಗಿ ನೀಡಲಿ…’ ಎಂದು ಶಶಾಂಕ್‌ ಹೇಳಿದ್ದಾರೆ. 

ಇಸಿಬಿಗೆ ಬೆಳ್ಳಿ ಸ್ಮರಣಿಕೆ
ಟೆಸ್ಟ್‌ ಪಂದ್ಯದ ಆರಂಭಕ್ಕೂ ಮುನ್ನ ನಡೆಯಲಿರುವ ಸರಳ ಸಮಾರಂಭವೊಂದರಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಕಾಲಿನ್‌ ಗ್ರೇವ್ಸ್‌ ಅವರಿಗೆ ಬೆಳ್ಳಿ ಸ್ಮರಣಿಕೆಯೊಂದನ್ನು ಉಡುಗೊರೆಯಾಗಿ ನೀಡಲಾಗುವುದು. ಐಸಿಸಿ ಪರವಾಗಿ ಈ ಸ್ಮರಣಿಕೆಯನ್ನು ಮ್ಯಾಚ್‌ ರೆಫ್ರಿ, ನ್ಯೂಜಿಲ್ಯಾಂಡಿನ ಮಾಜಿ ನಾಯಕ ಜೆಫ್ ಕ್ರೋವ್‌ ಪ್ರದಾನ ಮಾಡುವರು.

ಮತ್ತೂಂದು ಐತಿಹಾಸಿಕ ಗಳಿಗೆ
ಇಂಗ್ಲೆಂಡ್‌ ಟೆಸ್ಟ್‌ ಕ್ರಿಕೆಟಿನ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗುತ್ತಿರುವುದು ಭಾರತದ ಪಾಲಿನ ಹೆಗ್ಗಳಿಕೆ. 2011ರ ಇಂಗ್ಲೆಂಡ್‌ ಪ್ರವಾಸದ ವೇಳೆಯೂ ಭಾರತ ಇಂಥದೇ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅಂದು ಲಾರ್ಡ್ಸ್‌
ನಲ್ಲಿ ಟೆಸ್ಟ್‌ ಇತಿಹಾಸದ 2000ದ ಪಂದ್ಯವನ್ನು ಆಡಲಾಗಿತ್ತು. ಬುಧವಾರ ಭಾರತ-ಇಂಗ್ಲೆಂಡ್‌ ನಡುವೆ ನಡೆಯುತ್ತಿರುವುದು ಟೆಸ್ಟ್‌ ಇತಿಹಾಸದ 2,314ನೇ ಪಂದ್ಯ.

Advertisement

999 ಟೆಸ್ಟ್‌ ಸಾಧನೆ
1877ರ ಮಾರ್ಚ್‌ ತಿಂಗಳಲ್ಲಿ ಆತಿಥೇಯ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ನಡುವೆ ಟೆಸ್ಟ್‌ ಇತಿಹಾಸದ ಪ್ರಪ್ರಥಮ ಪಂದ್ಯ ನಡೆದಿತ್ತು. ಈ ವರೆಗಿನ 999 ಟೆಸ್ಟ್‌ ಪಂದ್ಯಗಳಲ್ಲಿ ಇಂಗ್ಲೆಂಡ್‌ 357 ಪಂದ್ಯಗಳನ್ನು ಜಯಿಸಿದ್ದು, 297ರಲ್ಲಿ ಸೋಲನು ಭವಿಸಿದೆ. 345 ಪಂದ್ಯಗಳು ಡ್ರಾಗೊಂಡಿವೆ.

ಐತಿಹಾಸಿಕ ಎಜ್‌ಬಾಸ್ಟನ್‌ ಅಂಗಳದಲ್ಲಿ ಇಂಗ್ಲೆಂಡ್‌ ಆಡುತ್ತಿರುವ 51ನೇ ಟೆಸ್ಟ್‌ ಇದಾಗಿದೆ. ಇಲ್ಲಿ 1902ರಲ್ಲಿ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್‌ ಆಡಿದ್ದ ಇಂಗ್ಲೆಂಡ್‌, 27ರಲ್ಲಿ ಜಯ ಸಾಧಿಸಿದೆ. 8ರಲ್ಲಿ ಸೋತಿದೆ. ಉಳಿದ 15 ಟೆಸ್ಟ್‌ಗಳು ಡ್ರಾ ಆಗಿವೆ.

ಭಾರತ ತನ್ನ ಟೆಸ್ಟ್‌ ಇತಿಹಾಸದ ಪ್ರಥಮ ಪಂದ್ಯವನ್ನು 1932ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಆಡಿತ್ತು. ಈ ವರೆಗೆ ಇತ್ತಂಡಗಳ ನಡುವೆ 117 ಟೆಸ್ಟ್‌ ಪಂದ್ಯಗಳು ನಡೆದಿವೆ. 25ರಲ್ಲಿ ಗೆದ್ದಿರುವ ಭಾರತ, 43ರಲ್ಲಿ ಸೋಲನುಭವಿಸಿದೆ. ಉಳಿದವು ಡ್ರಾಗೊಂಡಿವೆ.

ತವರಿನಂಗಳದಲ್ಲಿ ಭಾರತದ ವಿರುದ್ಧ 30 ಟೆಸ್ಟ್‌ ಗೆದ್ದಿರುವ ಇಂಗ್ಲೆಂಡ್‌, ಆರರಲ್ಲಷ್ಟೇ ಸೋತಿದೆ. 21 ಪಂದ್ಯ ಡ್ರಾ ಫ‌ಲಿತಾಂಶ ದಾಖಲಿಸಿವೆ. ಎಜ್‌ಬಾಸ್ಟನ್‌ನಲ್ಲಿ ಭಾರತ-ಇಂಗ್ಲೆಂಡ್‌ ನಡುವೆ 6 ಟೆಸ್ಟ್‌ಗಳನ್ನು ಆಡಲಾಗಿದ್ದು, ಇಂಗ್ಲೆಂಡ್‌ 5-0 ಗೆಲುವಿನ ದಾಖಲೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next