Advertisement

ಐಎಎಸ್‌ ಕಲಿಕೆಗೆ ರಾಜ್‌ ಅಕಾಡೆಮಿ

11:41 AM Mar 06, 2017 | |

ಬೆಂಗಳೂರು: ಐಎಎಸ್‌, ಐಪಿಎಸ್‌ ಹಾಗೂ ಕೆಎಎಸ್‌ ಮೂಲಕ ನಾಗರಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳಿಗೆ ಜನರ ಸೇವೆ ಮಾಡಬೇಕು ಎಂಬ ಮನೋಭಾವ ಇದ್ದಾಗ ಮಾತ್ರ ಒಳ್ಳೆಯ ಆಡಳಿತ ನೀಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್‌ ಟಾಟಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ರಾಜ್‌ ಕುಟುಂಬ ಸದಸ್ಯರು ಆರಂಭಿಸಿರುವ “ಡಾ. ರಾಜ್‌ಕುಮಾರ್‌ ಸಿವಿಲ್‌ ಸರ್ವೀಸ್‌ ಅಕಾಡೆಮಿ ಉದ್ಘಾಟಿಸಿ ಮಾತನಾಡಿದರು.

ಶಾಸಕಾಂಗ ರಚಿಸುವ ಕಾನೂನುಗಳು, ಸರ್ಕಾರಗಳು ಜಾರಿಗೆ ತರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಾಂಗ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ನಾಗರಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳಿಗೆ ಜನರ ಸೇವೆ ಮಾಡುವ ಮನೋಭಾವ ಇರಬೇಕು. ಹಾಗೆ ಆದಾಗ ಮಾತ್ರ ದೇಶ ಅಥವಾ ರಾಜ್ಯವನ್ನು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.

ರಾಜ್‌ ಶ್ರದ್ಧೆ ಅನುಕರಣೀಯ: ಡಾ.ರಾಜ್‌ಕುಮಾರ್‌ ಅವರಿಗೆ ಕೆಲಸದ ಬಗ್ಗೆ ಇದ್ಧ ಶ್ರದ್ಧೆ, ಈಗಿನ ಯುವಕರಿಗೆ ಮಾದರಿ. ಅವರ ಸರಳ ಹಾಗೂ ಮಾನವೀಯ ಗುಣಗಳು ಅವರನ್ನು ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದವು. ಪ್ರತಿಭೆ ಅಥವಾ ಅಧಿಕಾರ ವಂಶ ಪಾರಂಪರಿಕ ಆಸ್ತಿಯಲ್ಲ. ಸಾಮರ್ಥಯ ತೋರಿಸಲು ಅವಕಾಶ ಸಿಕ್ಕಾಗ ಪ್ರತಿಯೊಬ್ಬರು ಜೀವನದಲ್ಲಿ ಎತ್ತರದ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು. ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಶಾಲಾ ಪಠ್ಯದಲ್ಲಿ ಸೇರಿಸಲು ಪರಿಶೀಲಿಸಲಾಗುವುದು ಎಂದು ಇದೇ ವೇಳೆ ಸಿದ್ದರಾಮಯ್ಯ ಭರವಸೆ ನೀಡಿದರು.

ಐಎಎಸ್‌ ಅಧಿಕಾರಿ ವಿಜಯಲಕ್ಷ್ಮಿಬಿದರಿ ಮಾತನಾಡಿ, ರಾಜ್ಯದ 6.5 ಕೋಟಿ ಜನರಲ್ಲಿ ಕೇವಲ 35ರಿಂದ 40 ಮಂದಿ ಮಾತ್ರ ಐಎಎಸ್‌ ಹಾಗೂ ಐಪಿಎಸ್‌ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುತ್ತಿದ್ದಾರೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕರೆಯುವ ಪರೀಕ್ಷೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಸಂಖ್ಯೆ ಶೇ.30ರಷ್ಟಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಯುಪಿಎಸ್‌ಸಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

Advertisement

ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ರಾಜಕುಮಾರ್‌ ಅವರು ಕಲಾ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ಆದರೆ, ಶಿಕ್ಷಣ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಸೆ ಅವರಲ್ಲಿತ್ತು. ಆದ್ದರಿಂದ ಈ ಅಕಾಡೆಮಿ ಆರಂಭಿಸಲಾಗಿದೆ. ಯುಪಿಎಸ್‌ಸಿ ಪರೀಕ್ಷೆಗಳ ಜೊತೆ, ಇತರ ಸರ್ಕಾರಿ ಸೇವಾ ಪರೀಕ್ಷೆಗಳಿಗೂ ತರಬೇತಿ ಆರಂಭಿಸಲಾಗುವುದು. ಮುಂದಿನ ದಿನದಲ್ಲಿ ರಾಜ್ಯದ ಜಿಲ್ಲಾ ಕೇಂದ್ರಗಳಿಗೂ ತರಬೇತಿ ಕೇಂದ್ರಗಳನ್ನು ವಿಸ್ತರಿಸುವ ಗುರಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ, ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ಭಾಸ್ಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ರೂಪಕ್‌ ಕುಮಾರ್‌ ದತ್ತ, ವಾಣಿಜ್ಯ ತೆರಿಗೆ ಇಲಾಖೆ ಮುಖ್ಯ ಆಯುಕ್ತೆ ನೂತನ್‌ ಒಡೆಯರ್‌, ಡಾ. ರಾಜ್‌ ಪುತ್ರರಾದ ಶಿವರಾಜಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next