ಬೆಂಗಳೂರು: ಸವಿತಾ ಸಮುದಾಯ ಸೇರಿ ಹಿಂದುಳಿದ ನಾಲ್ಕು ಸಮುದಾಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಅಭಿವೃದ್ಧಿ ನಿಗಮ ಸ್ಥಾಪಿಸಿ ಹಂಚಿಕೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಚರ್ಚಿಸುವುದಾಗಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದ್ದಾರೆ.
ರಾಜ್ಯ ಸವಿತಾ ಸಮಾಜದ ವತಿಯಿಂದ ಮಂಗಳವಾರ ಕೊಡಿಗೇಹಳ್ಳಿ ಗೇಟ್ ಸಮೀಪದ ಗುಂಡಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸವಿತಾ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ಸಣ್ಣ ವರ್ಗಗಳ ಪರವಾಗಿ ಕಾಂಗ್ರೆಸ್ ಧ್ವನಿ ಎತ್ತುತ್ತಲೇ ಬಂದಿದೆ. ಅತಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಶ್ರಮಿಸುತ್ತಿದೆ. ಸವಿತಾ ಸಮಾಜ, ಮಡಿವಾಳ ಸಮಾಜ ಸೇರಿದಂತೆ ನಾಲ್ಕು ಸಮುದಾಯದ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳನ್ನು ಈ ವರ್ಷದ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ಅನುದಾನವನ್ನು ನಿಗಮ ಮಂಡಳಿ ಸ್ಥಾಪಿಸಿ ಹಂಚಿಕೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮಾತುಕತೆ ನಡೆಸುವುದಾಗಿ ಹೇಳಿದರು.
ಮಾಜಿ ಶಾಸಕ ಗೋಪಾಲ್ ಭಂಡಾರಿ ಮಾತನಾಡಿ, ಸಂಘಟನೆ ಸಮಾಜದ ಅಭಿವೃದ್ಧಿಗಾಗಿಯೇ ಹೊರತು ವೈಯಕ್ತಿಕ ಏಳ್ಗೆಗಾಗಿ ಅಲ್ಲ. ಸಂಘಟನೆಗಳು ಸಮಾಜಮುಖೀಯಾಗಿ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ಸೇವೆ ಸಲ್ಲಿಸಬೇಕು. ಯಾರೊಬ್ಬರನ್ನು ಶಾಸಕ, ಸಂಸದ ಮಾಡಲು ಸಂಘಟನೆ ಕೆಲಸ ಮಾಡಬಾರದು. ನಮ್ಮಲ್ಲಿನ ಕೀಳರಿಮೆಯನ್ನು ದೂರ ಮಾಡಿ, ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಸಮಾಜದ ಅಧ್ಯಕ್ಷ ಯು.ಕೃಷ್ಣಮೂರ್ತಿ ಮಾತನಾಡಿದರು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಜಿಪಂ ಸದಸ್ಯ ಕೆ.ರಮೇಶ್, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸವಿತಾ ಸಮಾಜದ ಅಧ್ಯಕ್ಷ ಬಿ.ಗಂಗಾಧರ್ ಮೊದಲಾದವರು ಉಪಸ್ಥಿತರಿದ್ದರು.
ಸವಿತಾ ಸಮಾಜಕ್ಕೆ ಯಾವ ಪಕ್ಷವೂ ರಾಜಕೀಯ ಸ್ಥಾನಮಾನ ನೀಡಿಲ್ಲ. ಕ್ಷೌರಿಕರನ್ನು ಇಂದಿಗೂ ಕೀಳಾಗಿ ಕಾಣುತ್ತಿದ್ದಾರೆ. ವೃತ್ತಿಗೆ ಸಮಾನಾದ ಗೌರವ ನೀಡುತ್ತಿಲ್ಲ. ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಎಷ್ಟೇ ಬೇಡಿಕೆ ನೀಡಿದರೂ ರಾಜ್ಯ ಸರ್ಕಾರ ಈಡೇರಿಸಿಲ್ಲ. ಹೋರಾಟದಿಂದಲೇ ನಮ್ಮ ಸ್ಥಾನಮಾನ ಗುರುತಿಸಿಕೊಳ್ಳಬೇಕು.
-ರಾಮಚಂದ್ರಪ್ಪ, ಸವಿತಾ ಸಮಾಜ ಮುಖಂಡ