ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ತಮ್ಮನ್ನು ಎಳೆದುಕೊಂಡು ಹೋಗಿರುವುದು ಕಾನೂನು ಬಾಹಿರ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಹೇಳಿದ್ದಾರೆ.
ರಾಜೀನಾಮೆ ಪ್ರಹಸನದ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜೀನಾಮೆ ಸಲ್ಲಿಸಿದ ನಂತರ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಕೊರಳಿಗೆ ಕೈ ಹಾಕಿ ಎಳೆದುಕೊಂಡು ಹೋಗಿದ್ದಾರೆ. ನಾನು ಬೇಕೆಂದರೆ ಅವರಿಗೆ ಎಲ್ಲಿ ಬೇಕಾದರೂ ಸಿಗುತ್ತಿದ್ದೆ.
ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಗಳು. ಅವರು ಕೂಡ ಅತ್ಯಂತ ಆತ್ಮೀಯರು, ಹಿತೈಶಿಗಳು. ಅವರೂ ನನಗೆ ಅನೇಕ ವಿಚಾರಗಳನ್ನು ಹೇಳಿ, ನನ್ನ ಮನಸ್ಸು ಪರಿವರ್ತನೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಯಾವ ಕಾರಣಕ್ಕೆ ನಾನು ರಾಜೀನಾಮೆ ಕೊಡುವಂತಹ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮನವರಿಕೆ ಮಾಡಿದ್ದೇನೆ’ ಎಂದರು.
“ನಾನು ಒಳ್ಳೆಯ ಹುದ್ದೆ ಬಿಟ್ಟು ದೇಶದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬಂದಿದ್ದೆ. ವಿಶೇಷವಾಗಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಅಭಿವೃದ್ಧಿ ಮಾಡಲು ಬಂದಿದ್ದೆ. ಕಳೆದ ಹದಿಮೂರು ತಿಂಗಳಲ್ಲಿ ನಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಆಗಿಲ್ಲ. ಆ ನೋವಿನಿಂದ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದರು.
“ಈ ದೇಶದ ಪ್ರಗತಿಯ ಹಾದಿಯಲ್ಲಿ ನಾನೂ ಒಬ್ಬ ಕಾರ್ಯಕರ್ತನಾಗಿ ಇರಲು ಬಯಸಿದ್ದೇನೆ. ನಾನು ಹಾಗೂ ಎಂಟಿಬಿ ನಾಗರಾಜ್ ಕಾಂಗ್ರೆಸ್‌ನ ಪಕ್ಷ ಸಿದ್ದಾಂತದಲ್ಲಿ ಬೆಳೆದು ಬಂದಿದ್ದೇವೆ. ನಾನು ಎಲ್ಲೇ ಇರಲಿ, ಸಿದ್ದರಾಮಯ್ಯ ಅವರು ನನ್ನ ಆದರ್ಶ ವ್ಯಕ್ತಿಗಳು. ಇಂತಹ ಕಾಲಘಟ್ಟದಲ್ಲಿ ಯಾಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರಿಗೆ ಮನವರಿಕೆ ಮಾಡಿದ್ದೇನೆ’ ಎಂದರು.
“ರಾಜಕೀಯದ ಅನಿಶ್ಚಿತತೆಯಿಂದ ರಾಜ್ಯದ ಜನರು ನಮ್ಮನ್ನು ಶಪಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಂದ ಮೇಲೆ ರಾಜ್ಯದ ಪರಿಸ್ಥಿತಿ ಏನಾಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕಿದೆ. ನಾನು ಬಾಂಬೆಗೂ ಹೋಗಲ್ಲ. ದೆಹಲಿಗೂ ಹೋಗಲ್ಲ. ನಮ್ಮನ್ನು ಯಾರೂ ಕರೆಸಿಲ್ಲ’ ಎಂದು ಹೇಳಿದರು.