ವಿಜಯಪುರ : ಅರುಣ್ ಸಿಂಗ್ ಭೇಟಿಯ ಮಾತುಕತೆ ಸಂದರ್ಭದಲ್ಲಿ ನನ್ನ ವಿರುದ್ಧ ನಡೆದಿದ್ದ ಷಡ್ಯಂತ್ರದ ಬಗ್ಗೆ ಮಾಹಿತಿ ನೀಡಿದ್ದೇನೆ. ವಿಜಯಪುರ ಪಾಲಿಕೆಯ ಚುನಾವಣೆ ಫಲಿತಾಂಶದಿಂದ ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ ಎಂದು ಅರುಣ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಬಿಎಸ್ ವೈಗೆ ಮಸಿ ಬಳಿಯಲು ಬಿಜೆಪಿಯೇ ಯತ್ನಾಳರನ್ನು ಮುಂದೆ ಬಿಟ್ಟಿದೆಯೇ?: ಕಾಂಗ್ರೆಸ್
ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಏನೆಲ್ಲ ಷಡ್ಯಂತ್ರ ನಡೆದಿದೆ ಎಂಬುದು ಪಕ್ಷದ ಹೈಕಮಾಂಡ್‍ಗೆ ಗೊತ್ತಿದೆ. ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದಿಂದ ರಾಜ್ಯ ಹಾಗೂ ಕೇಂದ್ರದ ನಾಯಕರು ಸಂತಸಪಟ್ಟಿದ್ದಾರೆ ಎಂದರು.
ಕಾಂಗ್ರೆಸ್ಸಿನ ಶಾಸಕರೊಬ್ಬರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣೆ ಮಾಡದೆ ಪಕ್ಷೇತರ ಅಭ್ಯರ್ಥಿಗಳ ಪರ ಚುನಾವಣೆ ಮಾಡಿದರು ಎಂದು ಪರೋಕ್ಷವಾಗಿ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ವಿರುದ್ದ ಗುಡುಗಿದ ಯತ್ನಾಳ್, ಇಂಥ ವ್ಯಕ್ತಿ ವಿಜಯಪುರ ನಗರದಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ. ಇಂಥ ಬ್ಲಾಕ್ ಮೇಲ್ ವ್ಯಕ್ತಿಗಳಿಗೆ ನಾನು ಹೆದರುವುದಿಲ್ಲ ಎಂದು ಕುಟುಕಿದರು.
ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗಾಗಿ ಸಂಕಲ್ಪ ಯಾತ್ರೆಗಾಗಿ ಜಿಲ್ಲೆಗೆ ಆಗಮಿಸಿದ್ದ ಬಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಸಂದರ್ಭದಲ್ಲಿ ನಾನು ನಗರದಲ್ಲಿ ಇರಲಿಲ್ಲ. ನಗರದ ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳುವಾಗ ಅರುಣಸಿಂಗ್ ಅಕಸ್ಮಿಕವಾಗಿ ನಮ್ಮ ಹೈಪರ್ ಮಾರ್ಟ್‍ನಲ್ಲಿ ಪರಸ್ಪದ ಭೇಟಿ ಆಗಿದ್ದೆವು. ಈ ಹಂತದಲ್ಲಿ ನನ್ನ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ವಿವರಿಸಿದ್ದೇನೆ. ಇದರ ಹೊರತಾಗಿ ಹೆಚ್ಚಿನ ಚರ್ಚೆಗಳು ನಡೆಯಲಿಲ್ಲ ಎಂದರು.
ಗುಜರಾತ್ ಚುನಾವಣೆಯ ಬಳಿಕ ಯತ್ನಾಳ್ ಸಿಎಂ ಆಗುತ್ತಾರೆ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವಾಗಲೂ ಆ ಗುಂಗಿನಲ್ಲಿ ಇರಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸುತ್ತೇನೆಂಬ ಸಂಕೇತವನ್ನು ಕೊಟ್ಟಿದ್ದಾರೆ ಅಷ್ಟೇ ಎಂದರು.
ಮುಂದಿನ ವಿಧಾನಸಭೆ ಚುನಾವಣೆ ವೇಳೆ ನಾನು ಸ್ಟಾರ್ ಕ್ಯಾಂಪೇನರ್ ಆಗಿ ಪ್ರಚಾರದಲ್ಲಿರುತ್ತೇನೆ. ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ಮಾಡಲು ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಅವರಿಗೆ ನೀಡಿದರೆ ಎಂದಾಗ, ನಾನು ನಾನು ಪ್ರತ್ಯೇಕವಾದಿ ನಾಯಕನಲ್ಲ, ಪ್ರತ್ಯೇಕವಾಗಿ ಪ್ರಚಾರ ಮಾಡುವುದಿಲ್ಲ. ಪಕ್ಷದ ಎಲ್ಲ ನಾಯಕರೊಂದಿಗೆ ಪ್ರಚಾರ ಮಾಡುತ್ತೇನೆ ಎಂದರು.
ಮುಂಬರುವ ಚುನಾವಣೆಯಲ್ಲಿ ಯತ್ನಾಳ್ ಶಕ್ತಿಯನ್ನ ಜನಪ್ರಿಯತೆಯನ್ನು ಉಪಯೋಗ ಮಾಡಿಕೊಳ್ಳುತ್ತೇವೆ ಎಂದು ಅರುಣಸಿಂಗ್ ಹೇಳಿದ್ದಾರೆ. ಎಲ್ಲ ನದಿಗಳು ಹರಿದು ಸಾಗರ ಸೇರುವ ಹಾಗೆ ನಾವೆಲ್ಲ ನಾಯಕರು ಸೇರಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಯಡಿಯೂರಪ್ಪ ಹಾಗೂ ನನ್ನ ಮಧ್ಯೆ ಹೊಂದಾಣಿಕೆ ವಿಷಯದಲ್ಲಿ ಕೇಂದ್ರದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಿರುತ್ತೇವೆ ಎಂದು ಸ್ಪಷ್ಟಪಡಿಸಿದರು.