ಪುನೀತ್ ರಾಜಕುಮಾರ್ ಖುಷಿಯಾಗಿದ್ದಾರೆ. ಸದ್ಯದ ಅವರ ಖುಷಿಗೆ ಕಾರಣ “ರಾಜ್‌ಕುಮಾರ’ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಎರಡು ವಾರಗಳ ಹಿಂದೆ ತೆರೆಕಂಡ “ರಾಜಕುಮಾರ’ ಸಿನಿಮಾವನ್ನು ಜನ ಇಷ್ಟಪಟ್ಟಿದ್ದಾರೆ. ಪರಿಣಾಮವಾಗಿ ಸಿನಿಮಾದ ಕಲೆಕ್ಷನ್ ಕೂಡಾ ಜೋರಾಗಿದೆ. ಹಾಗಾದರೆ ಕಲೆಕ್ಷನ್ ಎಷ್ಟು? ಪುನೀತ್ ಯಾವತ್ತೂ ಕಲೆಕ್ಷನ್ ಬಗ್ಗೆ ಮಾತನಾಡಿದವರಲ್ಲ. ಸಿನಿಮಾವನ್ನು ಜನ ಇಷ್ಟಪಟ್ಟ ರೀತಿಯನ್ನಷ್ಟೇ ಅವರು ಸಂಭ್ರಮಿಸುತ್ತಾರೆ. ಈ ಬಾರಿಯೂ ಅವರು ಅದನ್ನೇ ಮಾಡಿದ್ದಾರೆ.
“ಕಲೆಕ್ಷನ್ ಬಗ್ಗೆ ನಾನು ತಿಳಿದುಕೊಳ್ಳಲು ಹೋಗುವುದಿಲ್ಲ. ನನ್ನ ಅಭಿಮಾನಿಗಳು, ನಿರ್ಮಾಪಕರು ಹಾಗೂ ಇಡೀ ತಂಡ ಖುಷಿಯಾಗಿದೆಯಾ ಅನ್ನೋದಷ್ಟೇ ಮುಖ್ಯ. “ರಾಜಕುಮಾರ’ ಸಿನಿಮಾ ವಿಷಯದಲ್ಲಿ ಇಡೀ ತಂಡ ಖುಷಿಯಾಗಿದೆ. ನಿರ್ಮಾಪಕರು ಕೂಡಾ ತುಂಬಾ ಖುಷಿಯಾಗಿದ್ದಾರೆ. ಅಭಿಮಾನಿಗಳು ಕೂಡಾ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ನನಗೆ ಅಷ್ಟು ಸಾಕು’ ಎನ್ನುವ ಮೂಲಕ ಸಿನಿಮಾ ಗೆದ್ದ ಖುಷಿಯನ್ನು ಹಂಚಿಕೊಳ್ಳುತ್ತಾರೆ.
“ಅನೇಕ ಕಡೆಗಳಿಂದ ನನಗೆ ಫೋನ್ ಬರುತ್ತಿದೆ, ಥಿಯೇಟರ್‌ಗೆ ಹೋಗಿ ಸುಮಾರು ವರ್ಷ ಆಗಿತ್ತು. ಈಗ ನಿಮ್ಮ “ರಾಜಕುಮಾರ’ ನೋಡಲು ಹೋಗುತ್ತಿದ್ದೇವೆ ಎನ್ನುತ್ತಾರೆ. ನಿಜಕ್ಕೂ ಇದು ಖುಷಿಯ ಸಂಗತಿ. ಮುಂದೆ ಬರುವಂತಹ ಎಲ್ಲಾ ಕನ್ನಡ ಸಿನಿಮಾಗಳು ಯಶಸ್ಸು ಕಾಣಬೇಕು’ ಎಂದು ಪುನೀತ್ ಹಾರೈಸುತ್ತಾರೆ. “ರಾಜಕುಮಾರ’ ಎಂಬ ಟೈಟಲ್ ಇಟ್ಟರೆ ಹೇಗೆ ಎಂದು ಆರಂಭದಲ್ಲಿ ಚರ್ಚೆಯಾದಾಗ ಪುನೀತ್ ಅವರಿಗೆ ಭಯ ಇತ್ತಂತೆ. ಏಕೆಂದರೆ, ದೊಡ್ಡ ಹೆಸರು.
ಸಹಜವಾಗಿಯೇ ಜನ ಕೂಡಾ ಆ ಟೈಟಲ್‌ನಡಿ ಹಾಗೂ ತನ್ನಿಂದ ಬೇರೇನನ್ನೋ ಬಯಸುತ್ತಾರೆ, ಅದನ್ನು ಕೊಡಲಾಗದಿದ್ದರೆ ಆ ಟೈಟಲ್ ಇಟ್ಟು ವ್ಯರ್ಥವಾದಂತೆ ಎಂಬ ಭಾವನೆ ಕಾಡಿತ್ತಂತೆ. ಆದರೆ, ನಿರ್ದೇಶಕ ಸಂತೋಷ್ ಆನಂದರಾಮ್ ಮಾಡಿಕೊಂಡ ಕಥೆ ಹಾಗೂ ಅವರು ಮಾಡಿಕೊಂಡ ಪೋಸ್ಟರ್ ಡಿಸೈನ್ ತೋರಿಸಿದ ನಂತರ ಪುನೀತ್ ಖುಷಿಯಾದರಂತೆ. “ಚಿತ್ರದಲ್ಲಿ ಒಂದು ಒಳ್ಳೆಯ ವಿಷಯವನ್ನು ಹೇಳಿದ್ದೇವೆ. ನಾನು ತುಂಬು ಕುಟುಂಬದಲ್ಲಿ ಎಲ್ಲರನ್ನು ಪ್ರೀತಿಸುತ್ತಾ ಬೆಳೆದವ.
ನನಗೆ ವೃದ್ಧಾಶ್ರಮ ಬಗ್ಗೆ, ಅಲ್ಲಿರುವವರ ಮನಸ್ಥಿತಿಗಳ ಬಗ್ಗೆ ಗೊತ್ತಿರಲಿಲ್ಲ. ಈ ಸಿನಿಮಾ ಮೂಲಕ ಗೊತ್ತಾಯಿತು. ಸಿನಿಮಾ ನೋಡಿ ಒಂದಷ್ಟು ಮಂದಿ ಬದಲಾದರೆ ಅದಕ್ಕಿಂತ ಖುಷಿ ಮತ್ತೂಂದಿಲ್ಲ’ ಎಂಬುದು ಪುನೀತ್ ಮಾತು. ಇದೇ ವೇಳೆ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಲೆಂದು ನಿರ್ಧರಿಸಿದ ವ್ಯಕ್ತಿಯೊಬ್ಬ “ರಾಜಕುಮಾರ’ ಸಿನಿಮಾ ನೋಡಿ, “ಎಷ್ಟೇ ಕಷ್ಟವಾ ದರೂ ನಾನೇ ಸಾಕುತ್ತೇನೆ, ವೃದ್ಧಾಶ್ರಮಕ್ಕೆ ಸೇರಿಸೋದಿಲ್ಲ’ ಎಂದು ತಂದೆ- ತಾಯಿಯನ್ನು ವಾಪಾಸ್ ಕರೆದುಕೊಂಡು ಹೋಗಿದ್ದಾನೆಂಬ ವಿಷಯ ಕೂಡಾ ಪುನೀತ್ ರಾಜಕುಮಾರ್ ಕಿವಿಗೆ ಬಿದ್ದಿದೆ.
ಇನ್ನು, 27 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ 1830 ಶೋ ಬಹುತೇಕ ಹೌಸ್‌ಫುಲ್ ಪ್ರದರ್ಶನ ಕಂಡ ಖುಷಿ ಕೂಡಾ ಪುನೀತ್‌ಗಿದೆ. “ರಾಜ್‌ಕುಮಾರ’ ಚಿತ್ರದಲ್ಲಿ ಪುನೀತ್ ಡ್ಯಾನ್ಸ್‌ಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ಪುನೀತ್ ಈ ಕ್ರೆಡಿಟ್ ಅನ್ನು ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಕೊಡುತ್ತಾರೆ. “ನನ್ನ ಡ್ಯಾನ್ಸ್ ಕ್ರೆಡಿಟ್ ಜಾನಿ ಮಾಸ್ಟರ್ ಅಂಡ್ ತಂಡಕ್ಕೆ ಸಲ್ಲುತ್ತದೆ. ಎರಡೂರು ದಿನ ರಿಹರ್ಸಲ್ ಮಾಡಿಸಿದರು. ಅವರ ಹುಡುಗರು ಸ್ಟೆಪ್ ಬರುವವರೆಗೆ ಹಾಗೂ ನಾನು ಸ್ಟೆಪ್ ಹಾಕುವವರೆಗೆ ಬಿಡಲಿಲ್ಲ’ ಎನ್ನುವುದು ಪುನೀತ್ ಮಾತು.