ಹೈದರಾಬಾದ್: ತೆಲಂಗಾಣದ ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯ ಕ್ಯಾಂಪಸ್ ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವುದಕ್ಕೆ ವಿವಿ ಆಡಳಿತ ಮಂಡಳಿ ಅನುಮತಿ ನಿರಾಕರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಿಎಸ್ಐ ಅಕ್ರಮ: ಸಿಐಡಿ ತಂಡಕ್ಕೆ ಶರಣಾದ ಜ್ಷಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್
ಕಾಂಗ್ರೆಸ್ ಪಕ್ಷದ ಸಂಸದ ರಾಹುಲ್ ಗಾಂಧಿ ಮೇ 6 ಮತ್ತು 7ರಂದು ತೆಲಂಗಾಣಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ವಾರಂಗಲ್ ನಲ್ಲಿ ಅಂದಾಜು ಐದು ಲಕ್ಷ ಬೆಂಬಲಿಗರೊಂದಿಗೆ ಭರ್ಜರಿ ಸಭೆ ನಡೆಸಲು ತೆಲಂಗಾಣ ರಾಜ್ಯ ಕಾಂಗ್ರೆಸ್ ಘಟಕ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲು ಸಮಯ ನಿಗದಿಪಡಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಆದರೆ ಉಸ್ಮಾನಿಯಾ ವಿವಿಗೆ ರಾಹುಲ್ ಗಾಂಧಿ ಭೇಟಿ ನೀಡುವುದಕ್ಕೆ ಆಡಳಿತ ಮಂಡಳಿ ಅನುಮತಿ ಕೊಡಲು ನಿರಾಕರಿಸಿದೆ. ಕ್ಯಾಂಪಸ್ ನೊಳಗೆ ರಾಜಕೀಯ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಉಸ್ಮಾನಿಯಾ ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
“ ನಾವು ಉಸ್ಮಾನಿಯಾ ವಿವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಜತೆ ಸಂವಹನ ನಡೆಸಲು ತೀರ್ಮಾನಿಸಿದ್ದು, ಯಾವುದೇ ರಾಜಕೀಯ ಸಭೆ ನಡೆಸುತ್ತಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ ತಿಳಿಸಿರುವುದಾಗಿ ವರದಿ ಹೇಳಿದೆ.
ಉಸ್ಮಾನಿಯಾ ವಿವಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಭೆ ನಡೆಸಲು ಅನುಮತಿ ನೀಡದಿರುವ ಹಿಂದೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರದ ಕೈವಾಡ ಇದ್ದಿರುವುದಾಗಿ ಕಾಂಗ್ರೆಸ್ ಪಕ್ಷ ಆರೋಪಿಸಿದೆ.