Advertisement

ಮೊಬೈಲ್‌ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ:ಏನಿದು‌ ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್

04:52 PM Feb 09, 2023 | Team Udayavani |

ಹೈದರಾಬಾದ್: ನಮಗೆ ತಿಳಿದೋ ಅಥವಾ ತಿಳಿಯದೆಯೋ ನಾವು ದಿನ ನಿತ್ಯ ಹೆಚ್ಚು ಹೊತ್ತು ಮೊಬೈಲ್‌ ಸ್ಕ್ರೋಲ್‌ ಮಾಡಿಯೇ ಸಮಯ ಕಳೆಯುತ್ತೇವೆ. ಇತ್ತೀಚೆಗಿನ ಯುವ ಜನರು ರಾತ್ರಿ ಹೊತ್ತು ಮೊಬೈಲ್‌ ಬಳಸುವ ಹವ್ಯಾಸವನ್ನು ಹೆಚ್ಚಾಗಿಸಿಕೊಂಡಿದ್ದಾರೆ.

Advertisement

ರಾತ್ರಿ ಕೋಣೆಯ ಲೈಟ್‌ ಆಫ್‌ ಮಾಡಿದರೂ ಹೊದಿಕೆಯ ಒಳಗೆ ಇಂಟರ್‌ ನೆಟ್‌ ಜಗತ್ತಿನ ಕೌತುಕವನ್ನು ಬ್ರೌಸ್‌ ಮಾಡುತ್ತಾ ಮಧ್ಯರಾತ್ರಿಯನ್ನು ಕಳೆಯುತ್ತೇವೆ. ಹೀಗೆ ಹೆಚ್ಚು ಹೊತ್ತು ಮೊಬೈಲ್‌ ಬಳಸಿದರೆ ಕಣ್ಣಿಗೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?

ಹೈದಾರಾಬಾದ್‌ ಮೂಲದ ವೈದ್ಯ ಡಾ.ಸುಧೀರ್‌ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ. ಕೋಣೆಯ ಲೈಟ್‌ ಆಫ್‌ ಮಾಡಿದ ಬಳಿಕವೂ ಮಹಿಳೆಯೊಬ್ಬರು ಹೆಚ್ಚು ಹೊತ್ತು ರಾತ್ರಿ ಮೊಬೈಲ್‌ ಬಳಸಿದ ಪರಿಣಾಮ ಕಣ್ಣಿನ ದೃಷ್ಟಿಗೆ ಹಾನಿ ಮಾಡಿಕೊಂಡಿದ್ದಾರೆ ಎಂದು ಸುಧೀರ್‌ ಟ್ವೀಟ್‌ ನಲ್ಲಿ ಹೇಳಿದ್ದಾರೆ.

ಮಂಜು ಎಂಬ ಮಹಿಳೆ ಕಣ್ಣಿನಲ್ಲಿ ಫ್ಲೋಟರ್ಸ್‌ ಇರುವ ಲಕ್ಷಣ (ಕಣ್ಣು ಮಂಜಾದಂತೆ ಆಗುವುದು ಅಥವಾ ಕಣ್ಣಿನಲ್ಲಿ ಏನೋ ಚಲಿಸದಂತಹ ಅನುಭವವಾಗುವುದು) ಕಂಡು ಬಂದಿದೆ. ಇದನ್ನು ಪರೀಕ್ಷಿಸಿದ ಬಳಿಕ ಆಕೆ ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್ (smartphone vision syndrom) ನಿಂದ ಬಳಲುತ್ತಿರುವುದು ತಿಳಿಯಿತು. ಇದು ಹೆಚ್ಚಾದರೆ ಕುರುಡುತನ ಸೇರಿದಂತೆ ಕಣ್ಣಿನ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಲಿದೆ.

ಇದಕ್ಕೆ ಕಾರಣವನ್ನು ತಿಳಿಸಿರುವ ವೈದ್ಯ ಡಾ.ಸುಧೀರ್‌ , ರಾತ್ರಿ ವೇಳೆಯಲ್ಲಿ ಹೆಚ್ಚು ಹೊತ್ತು ಮೊಬೈಲ್‌ ಬಳಸಿದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಂಜು ಕಳೆದ ಒಂದೂವರೆ ವರ್ಷದಿಂದ ರಾತ್ರಿ ಹೊತ್ತು ಮೊಬೈಲ್‌ ಬ್ರೌಸ್‌ ಮಾಡುವ ಹವ್ಯಾಸವನ್ನು ಇಟ್ಟುಕೊಂಡಿದ್ದರು. ಬ್ಯೂಟಿಷಿಯನ್‌ ಕೆಲಸವನ್ನು ಬಿಟ್ಟ ಬಳಿಕ ಅವರ ವಿಶೇಷ ಚೇತನ ಮಗುವನ್ನು ನೋಡಿಕೊಳ್ಳುವ ಸಲುವಾಗಿ ರಾತ್ರಿ ಹೊತ್ತು ಮೊಬೈಲ್‌ ಬಳಸುತ್ತಿದ್ದರು. ಲೈಟ್‌ ಆಫ್ ಮಾಡಿದ ಬಳಿಕವೂ ಸುಮಾರು 2 ಗಂಟೆ ಕಾಲ ಮೊಬೈಲ್‌ ಬಳಸುತ್ತಿದ್ದರು ಎಂದು ಡಾ.ಸುಧೀರ್‌ ಹೇಳಿದ್ದಾರೆ.

Advertisement

ಅದೃಷ್ಟಕ್ಕೆ ಸರಿಯಾದ ಸಮಯಕ್ಕೆ ವೈದ್ಯರ ಬಳಿ ಬಂದ ಕಾರಣ, ಮಂದವಾಗಿದ್ದ ಮಂಜು ಅವರ ದೃಷ್ಟಿ ಮತ್ತೆ ಸರಿಯಾಗಿದೆ. ಮೊಬೈಲ್‌ ಬಳಕೆಯ ಹೊತ್ತನ್ನು ಕಡಿಮೆ ಮಾಡಿದ್ದಾರೆ. ವೈದ್ಯರು ಹೇಳಿದಂತೆ ಅವರು ನಿಯಮವನ್ನು ಪಾಲಿಸಿದ್ದಾರೆ ಎಂದು ಡಾ. ಸುಧೀರ್‌ ಹೇಳಿದ್ದಾರೆ.

2021 ರಲ್ಲಿ ಮೊಬೈಲ್ ಅನಾಲಿಟಿಕ್ಸ್ ಸಂಸ್ಥೆ, ಡಾಟಾ.ಎಐ ನಡೆಸಿರುವ ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿ ಪ್ರತಿನಿತ್ಯ 4.7 ಗಂಟೆ ಮೊಬೈಲ್‌ ಬಳಸುತ್ತಾನೆ. ಇದು 2020 ರಲ್ಲಿ 4.5 ಗಂಟೆಯಿತ್ತು. 2019 ರಲ್ಲಿ 3.7 ಗಂಟೆಯಿತ್ತು.

Advertisement

Udayavani is now on Telegram. Click here to join our channel and stay updated with the latest news.

Next