ಧಾರವಾಡ: ನವೋದಯ ವಿದ್ಯಾಲಯ ಸಮಿತಿಯ ಹೈದ್ರಾಬಾದ್ ಪ್ರಾಂತ ವತಿಯಿಂದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ನ್ಯಾಷನಲ್ ಟೇಕ್ವಾಂಡೋ ಮೀಟ್-2017ಗೆ ಗುರುವಾರ ತೆರೆ ಬಿದ್ದಿದೆ.
ಈ ಸ್ಪರ್ಧೆಯಲ್ಲಿ ಅಂತಿಮವಾಗಿ 14 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ಎರಡೂ ಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮುನ್ನಡೆ ಸಾಧಿಸಿದ ಹೈದ್ರಾಬಾದ್ ಪ್ರಾಂತ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬಾಲಕರ ವಿಭಾಗದಲ್ಲಿ 42 ಅಂಕ ಹಾಗೂ ಬಾಲಕಿಯರ ವಿಭಾಗದಲ್ಲಿ 29 ಅಂಕ ಪಡೆದು ಹೈದ್ರಾಬಾದ್ ಪ್ರಾಂತ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ.
ಇನ್ನು 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 40 ಅಂಕ ಪಡೆದ ಹೈದ್ರಾಬಾದ್ ಪ್ರಾಂತ ಹಾಗೂ ಬಾಲಕಿಯರ ವಿಭಾಗದಲ್ಲಿ 29 ಅಂಕ ಪಡೆದ ಲಕೌ° ಪ್ರಾಂತ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ.
ಉಳಿದಂತೆ 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 24 ಅಂಕ ಪಡೆದ ಶಿಲ್ಲಾಂಘ ಪ್ರಾಂತ ಹಾಗೂ ಬಾಲಕಿಯರ ವಿಭಾಗದಲ್ಲಿ 24 ಅಂಕ ಪಡೆದ ಲಕೌ ಪ್ರಾಂತ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಬಹುಮಾನ ವಿತರಣೆ: ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿನ ಜವಾಹನ ನವೋದಯ ವಿದ್ಯಾಲಯದಲ್ಲಿ ಗುರುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ವಿದ್ಯಾಲಯದ ಪ್ರಾಂಶುಪಾಲೆ ವಿ.ಬಿ. ಸುಧಾ, ಹೈದ್ರಾಬಾದ್ ಪ್ರಾಂತ ಸಹಾಯಕ ಆಯುಕ್ತ ಟಿ. ಗೋಪಾಲಕೃಷ್ಣ ಸೇರಿದಂತೆ ಹಲವರು ಇದ್ದರು.