Advertisement

Missing Case: 8 ದಿನಗಳಿಂದ ಪತಿ ನಾಪತ್ತೆಯಾಗಿದ್ದಾರೆ, ಹುಡುಕಿಕೊಡಿ: ಪತ್ನಿ

11:11 AM Aug 13, 2024 | Team Udayavani |

ಬೆಂಗಳೂರು: ಕಳೆದ 8 ದಿನಗಳಿಂದ ನಾಪತ್ತೆಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ನಗರ ಪೊಲೀಸರಿಗೆ ಕೋರಿದ್ದು, ಜತೆಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

ಟಾಟಾ ನಗರದ 5ನೇ ಮುಖ್ಯರಸ್ತೆ ನಿವಾಸಿ ವಿಪಿನ್‌ ಗುಪ್ತಾ(37) ನಾಪತ್ತೆಯಾಗಿರುವ ಟೆಕಿ. ಅವರ ಪತ್ನಿ ಶ್ರೀಪರ್ಣಾ ದತ್‌ ಎಂಬುವರು ನೀಡಿದ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಪಿನ್‌ ಗುಪ್ತಾ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. 5 ಲಕ್ಷ ರೂ. ಕೊಡದಿದ್ದರೆ ಕೊಲೆ ಬೆದರಿಕೆ: ಈ ಮಧ್ಯೆ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ನನಗೆ ಬ್ಲ್ಯಾಕ್‌ ಮೇಲ್‌ ಸಂದೇಶ ಬರುತ್ತಿವೆ. 5 ಲಕ್ಷ ರೂ. ಹಣ ವರ್ಗಾವಣೆ ಮಾಡುವಂತೆ ಅಪರಿಚಿತರು ಬೇಡಿಕೆ ಇಡುತ್ತಿದ್ದಾರೆ. ಹಣ ಕೊಡದಿದ್ದಲ್ಲಿ ನಿನ್ನ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಶ್ರೀಪರ್ಣಾ ದತ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ದೂರಿನಲ್ಲಿ ಏನಿದೆ?: ಉತ್ತರ ಪ್ರದೇಶದ ಲಕ್ನೋ ಮೂಲದ ವಿಪಿನ್‌ ಗುಪ್ತಾ, ಪತ್ನಿ ಶ್ರೀಪರ್ಣಾ ಹಾಗೂ ಇಬ್ಬರು ಪುತ್ರಿ ಯರ ಜೊತೆಗೆ ಟಾಟಾನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ವಿಪಿನ್‌ ಗುಪ್ತಾ ಕಳೆದ ಜೂನ್‌ನಲ್ಲಿ ಉದ್ಯೋಗ ತೊರೆದಿದ್ದರು. ಹೊಸ ಉದ್ಯೋಗಕ್ಕಾಗಿ ಹುಡುಕಾಟದಲ್ಲಿ ತೊಡಗಿದ್ದರು. ಆ.4ರಂದು ಮಧ್ಯಾಹ್ನ 12.42ಕ್ಕೆ ಮನೆ ಯಿಂದ ಬೈಕ್‌ನಲ್ಲಿ ಹೊರಗೆ ಹೋಗಿದ್ದು, 25 ನಿಮಿಷದ ಬಳಿಕ ಬ್ಯಾಂಕ್‌ ಖಾತೆಯಿಂದ 1.80 ಲಕ್ಷ ರೂ. ಡ್ರಾ ಮಾಡಿದ್ದಾರೆ. ಬಳಿಕ ಕರೆ ಮಾಡಿದರೆ ಮೊಬೈಲ್‌ ಸ್ವಿಚ್‌x ಆಫ್ ಬಂದಿದೆ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಹೀಗಾಗಿ ತಮ್ಮ ಪತಿಯನ್ನು ಹುಡುಕಿ ಕೊಡಿ ಎಂದು ಶ್ರೀಪರ್ಣಾ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು, ವಿಪಿನ್‌ ಗುಪ್ತಾ ಪತ್ತೆಗೆ ವಿವಿಧ ಆಯಾಮಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪೊಲೀಸರು ಸರಿಯಾಗಿ ಸಂದಿಸುತ್ತಿಲ್ಲ : ಮಹಿಳೆ ಆರೋಪ : ಪತಿ ನಾಪತ್ತೆ ದಿನವೇ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದಾಗ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ. ಬಳಿಕ ಆ.6ರಂದು ಎಫ್ಐಆರ್‌ ದಾಖಲಿಸಿದ್ದಾರೆ. ಇದುವರೆಗೂ ಪತಿ ಪತ್ತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ಮಹಿಳೆ ಎಕ್ಸ್‌ ಖಾತೆಯಲ್ಲಿ ಪೊಲೀಸರ ವಿರುದ್ಧ ಆರೋಪಿಸಿದ್ದಾರೆ. ನನಗೆ 5 ತಿಂಗಳ ಮತ್ತು 14 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನಮಗೆ ಬೆಂಗಳೂರಿನಲ್ಲಿ ಯಾವುದೇ ಸಂಬಂಧಿಕರು ಇಲ್ಲ. ನಮ್ಮದು ಮಧ್ಯಮ ವರ್ಗದ ಕುಟುಂಬ. ಕೌಟುಂಬಿಕ ಜೀವನ ಉತ್ತಮವಾಗಿದೆ. ಆರ್ಥಿಕವಾಗಿ ಯಾವುದೇ ಸಮಸ್ಯೆಯಿಲ್ಲ. ಇಬ್ಬರು ಮಕ್ಕಳೊಂದಿಗೆ ನಾವು ಸುಖವಾಗಿದ್ದೆವು. ಆ.5ರಂದು ನಮ್ಮ ವಿವಾಹ ವಾರ್ಷಿಕೋತ್ಸವ ಇತ್ತು. ಪತಿ ವಿಪಿನ್‌ ನನಗೆ ಐಫೋನ್‌ ಗಿಫ್ಟ್ ಮಾಡಲು ಉತ್ಸುಕರಾಗಿದ್ದರು. ಆ.8ರಂದು ಕುಟುಂಬ ಸಮೇತ ಕಳಸ, ಹೊರನಾಡು, ಶೃಂಗೇರಿ, ಕುಕ್ಕೆ, ಧರ್ಮಸ್ಥಳಕ್ಕೆ ತೆರಳಲು ಪ್ಲ್ರಾನ್‌ ಮಾಡಿದ್ದೆವು. ಆದರೆ, ಆ.4ರಂದು ಪತಿ ನಾಪತ್ತೆಯಾಗಿದ್ದಾರೆ. ಅವರ ಜೀವದ ಬಗ್ಗೆ ಆತಂಕವಾಗಿದೆ. ದಯವಿಟ್ಟು ಪತಿ ವಿಪಿನ್‌ರನ್ನು ಹುಡುಕಿ ಕೊಡಿ ಎಂದು ಎಕ್ಸ್‌ ಖಾತೆಯಲ್ಲಿ ಶ್ರೀಪರ್ಣಾ ದತ್‌ ನಗರ ಪೊಲೀಸ್‌ ಆಯುಕ್ತ, ಸಿಎಂ ಹಾಗೂ ಮಾಧ್ಯಮಗಳಿಗೆ ಟ್ಯಾಗ್‌ ಮಾಡಿದ್ದಾರೆ.

 2ನೇ ಬಾರಿ ನಾಪತ್ತೆ!: ಪೊಲೀಸರ ತನಿಖೆ ವೇಳೆ ಟೆಕಿ ವಿಪಿನ್‌ ಗುಪ್ತಾ ಇದು 2ನೇ ಬಾರಿಗೆ ನಾಪತ್ತೆ ಯಾಗಿದ್ದಾರೆ ಎಂಬುದು ಗೊತ್ತಾಗಿದೆ. 8 ತಿಂಗಳ ಹಿಂದೆ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡು ಒಂಟಿಯಾಗಿ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಬಳಿಕ ಗೋವಾದಲ್ಲಿ ಅವರನ್ನು ಪತ್ತೆಹಚ್ಚಿ ನಗರಕ್ಕೆ ಕರೆತಂದು ಕುಟುಂಬಕ್ಕೆ ಒಪ್ಪಿಸಿದ್ದೆವು. ಇದೀಗ ಮತ್ತೂಮ್ಮೆ ವಿಪಿನ್‌ ಗುಪ್ತಾ ಹಣದ ಸಮೇತ ನಾಪತ್ತೆಯಾಗಿದ್ದಾರೆ. ಈಗಾಗಲೇ ಪೊಲೀಸರ ವಿಶೇಷ ತಂಡ ವಿಪಿನ್‌ ಗುಪ್ತಾ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದು, ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜಿತ್‌ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next