Advertisement

Crime: ಪತ್ನಿಯ ಕೊಂದು ಠಾಣೆಗೆ ಬಂದು ಕಥೆ ಕಟ್ಟಿದ!

12:15 PM Aug 29, 2024 | Team Udayavani |

ಬೆಂಗಳೂರು: ತರಕಾರಿ ಕೊಯ್ಯುವುದಕ್ಕೆ ತೋಟಕ್ಕೆ ಕರೆದೊಯ್ದ ಪತ್ನಿಯನ್ನು ಕಬ್ಬಿಣ ಸಲಾಕೆಯಿಂದ ಹೊಡೆದು ಹತ್ಯೆಗೈದು, ಬಳಿಕ ಯಾರೋ ಅಪರಿಚಿತರು ಕೊಲೆಗೈದಿದ್ದಾರೆ ಎಂದು ಕಥೆ ಸೃಷ್ಟಿಸಿದ ಪತಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಜಾಕಾ ಸಾಬ್‌ ಪಾಳ್ಯ ನಿವಾಸಿ ಮೆಹಬೂಬ್‌ ಸಾಬ್‌(50) ಬಂಧಿತ.

ಆರೋಪಿ ಆ.24ರಂದು ರಾತ್ರಿ ತನ್ನ 2ನೇ ಪತ್ನಿ ಮಮ್ತಾಜ್‌ (45) ಎಂಬಾಕೆಯನ್ನು ಕೊಂದಿದ್ದ. ಬಳಿಕ ತಾನೇ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದ. ಆದರೆ, ಆತನ ವರ್ತನೆ ಹಾಗೂ ಕೆಲ ತಾಂತ್ರಿಕ ತನಿಖೆಯಲ್ಲಿ ಆರೋಪಿಯ ಕೃತ್ಯ ಬಯಲಾಗಿದ್ದು, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಮೆಹಬೂಬ್‌ ಸಾಬ್‌ಗ ಇಬ್ಬರು ಪತ್ನಿಯರಿದ್ದು, ಮಮ್ತಾಜ್‌ 2ನೇ ಪತ್ನಿ. ಈಕೆ ಜತೆ ರಜಾಕ್‌ಸಾಬ್‌ ಪಾಳ್ಯದಲ್ಲಿ ವಾಸವಾಗಿದ್ದ. ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಜತೆಗೆ ಸಣ್ಣ ತೋಟದಲ್ಲಿ ತರಕಾರಿ ಬೆಳೆಯುತ್ತಿದ್ದರು. ಈ ಮಧ್ಯೆ ತಾವು ವಾಸವಾಗಿದ್ದ ಮನೆಯನ್ನು ಮಾರಾಟಕ್ಕೆ ಆರೋಪಿ ಮುಂದಾಗಿದ್ದ. ಆಗ ಪತ್ನಿ ಮಮ್ತಾಜ್‌ ಬೇಡವೆಂದು ಅಡ್ಡಿಪಡಿಸಿದ್ದಳು. ಅಲ್ಲದೆ, ಆಕೆ ಕೂಲಿ ಕೆಲಸಕ್ಕೆ ಹೋದಾಗ ಅಲ್ಲಿನ ಇತರೆ ಕಾರ್ಮಿಕರ ಜತೆ ಹರಟೆ ಹೊಡೆಯುತ್ತಾಳೆ ಎಂದು ಆಕೆಯ ಶೀಲ ಶಂಕಿಸಿದ್ದ ಆರೋಪಿ, ಇದೇ ವಿಚಾರಕ್ಕೆ ನಿತ್ಯ ಪತ್ನಿ ಜತೆ ಜಗಳ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ತರಕಾರಿ ಕೊಯ್ಯಲು ಕರೆದೊಯ್ದು ಹತ್ಯೆ: ಪತ್ನಿ ಕೊಲೆಗೆ ಸಂಚು ರೂಪಿಸಿದ್ದ ಆರೋಪಿ, ಆ.24ರಂದು ಪತ್ನಿಯನ್ನು ಮನೆ ಸಮೀಪದ ತೋಟಕ್ಕೆ ತರಕಾರಿ ಕೊಯ್ಯಲು ಕರೆದೊಯ್ದಿದ್ದಾನೆ. ಹೋಗುವಾಗ ಕಬ್ಬಿಣ ಸಲಾಕೆ ಕೊಂಡೊಯ್ದಿದ್ದಾನೆ. ಅದನ್ನು ಏಕೆ ತರುತ್ತಿರುವೆ ಎಂದು ಪತ್ನಿ ಪ್ರಶ್ನಿಸಿದ್ದಾಳೆ. ಆಗ ಆರೋಪಿ ತೋಟದಲ್ಲಿ ಹುಳಗಳು ಇರುತ್ತವೆ. ಅದಕ್ಕಾಗಿ ಎಂದು ಕರೆದೊಯ್ದು ಮಾರ್ಗ ಮಧ್ಯೆ ಸೀಬೆ ಗಿಡದ ಬಳಿ ಆಕೆಯ ತಲೆಗೆ ಹೊಡೆದು ಕೊಲೆಗೈದಿದ್ದಾನೆ. ಬಳಿಕ ಕಬ್ಬಿಣ ಸಲಾಕೆ ಜತೆ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

Advertisement

ಕೃತ್ಯ ಮರೆಮಾಚಲು ಮಾಲೂರಿನ ಸಂಬಂಧಿಕರ ಮದುವೆ ತೆರಳಿ 5 ನಿಮಿಷದಲ್ಲಿ ವಾಪಸ್ಸಾಗಿದ್ದ ಪತಿ!:

ಪತ್ನಿಯನ್ನು ಕೊಂದ ಬಳಿಕ ಆರೋಪಿ ಆ.24ರಂದು ರಾತ್ರಿ ಮಾಲೂರಿನಲ್ಲಿರುವ ಸಂಬಂಧಿಕರ ಮದುವೆ ಆರತಕ್ಷತೆಗೆ ಹೋಗಿ, 5 ನಿಮಿಷ ಇದ್ದಂತೆ ನಟಿಸಿ, ಅಲ್ಲಿದ್ದವರಿಗೆ ಯಾರೇ ಕೇಳಿದರೂ ರಾತ್ರಿಯಿಡಿ ಇಲ್ಲಿಯೇ ಇದ್ದಾಗಿ ಹೇಳಿಕೆ ನೀಡುವಂತೆ ಹೇಳಿ ಅಲ್ಲಿಂದ ಪರಾರಿಯಾಗಿದ್ದ. ತಡರಾತ್ರಿ ರಜಾಕ್‌ಸಾಬ್‌ ಪಾಳ್ಯಕ್ಕೆ ಬಂದು ಪತ್ನಿಗೆ ಒಮ್ಮೆ ಕರೆ ಮಾಡಿದ್ದಾನೆ. ಮಗಳ ಮೊಬೈಲ್‌ನಿಂದಲೂ ಕರೆ ಮಾಡಿಸಿದ್ದಾನೆ. ನಂತರ ವಾಪಸ್‌ ಮನೆಗೆ ಬಂದು ಎಲ್ಲೆಡೆ ಹುಡುಕಾಟ ನಡೆಸಿದಂತೆ ನಟಿಸಿದ್ದಾನೆ. ಬಳಿಕ ಪತ್ನಿ ಎಲ್ಲಿಯೂ ಪತ್ತೆಯಾಗಿಲ್ಲ. ಕೆಲ ಹೊತ್ತಿನ ಬಳಿ ನಂತರ ಸ್ಥಳೀಯರ ಮಾಹಿತಿ ಮೇರೆಗೆ ತೋಟಕ್ಕೆ ಹೋಗಿ ನೋಡಿದಾಗ ಪತ್ನಿ ಕೊಲೆಯಾಗಿರುವುದು ಗೊತ್ತಾಗಿದೆ ಎಂದು ದೂರು ನೀಡಿದ್ದ.

ಈ ಸಂಬಂಧ ತನಿಖೆ ಆರಂಭಿಸಿದಾಗ ಆರೋಪಿ, ಆರೋಪಿ ಆರತಕ್ಷತೆಗೆ ಹೋಗಿದ್ದು, ಕೆಲ ಕ್ಷಣಗಳಲ್ಲೇ ವಾಪಸ್‌ ಬಂದಿರುವುದು ಗೊತ್ತಾಗಿದೆ. ಅಲ್ಲದೆ, ಘಟನೆ ಸಂದರ್ಭದಲ್ಲಿ ದಂಪತಿ ಮೊಬೈಲ್‌ ನೆಟ್‌ವರ್ಕ್‌ ಒಂದೇ ಕಡೆ ಇತ್ತು. ಈ ಎಲ್ಲಾ ಅಂಶಗಳಿಂದ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.