ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದು ಸೀರೆ ಅಂಗಡಿಯ ಸಿಬ್ಬಂದಿ ಗಮನ ಬೇರೆಡೆ ಸೆಳೆದು ದುಬಾರಿ ಬೆಲೆಯ ರೇಷ್ಮೆ ಸೀರೆಗಳನ್ನು ತಮ್ಮ ಸೀರೆಗಳಲ್ಲಿ ಅಡಗಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ನಾಲ್ವರು ಮಹಿಳೆಯರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಜಾನಕಿ (35), ಪೊನ್ನೂರು ಮಲ್ಲಿ (32), ಮೇಧ ರಜಿನಿ (36) ಮತ್ತು ವೆಂಕಟೇಶ್ವರಮ್ಮ (40) ಬಂಧಿತರು.
ಇತರೆ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳಿಂದ 17.5 ಲಕ್ಷ ರೂ. ಮೌಲ್ಯದ 38 ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೂರುದಾರರು ಜೆ.ಪಿ.ನಗರದಲ್ಲಿ ಸಿಲ್ಕ್ಹೌಸ್ ವೊಂದರಲ್ಲಿ ರೇಷ್ಮೆ ಸೀರೆ ಮಾರಾಟ ಮಳಿಗೆ ಹೊಂದಿದ್ದಾರೆ. ಆ.25ರಂದು 6 ಮಂದಿ ಆರೋಪಿಗಳು ರೇಷ್ಮೆ ಸೀರೆ ಖರೀದಿ ಸೋಗಿನಲ್ಲಿ ಅಂಗಡಿಗೆ ಬಂದಿದ್ದು, ವಿವಿಧ ಶ್ರೇಣಿಯ ರೇಷ್ಮೆ ಸೀರೆಗಳನ್ನು ತೋರಿಸುವಂತೆ ಅಂಗಡಿ ಸಿಬ್ಬಂದಿಗೆ ಹೇಳಿದ್ದರು. ಸೀರೆಗಳನ್ನು ಸಿಬ್ಬಂದಿ ತೋರಿಸುತ್ತಿದ್ದಂತೆ 6 ಮಹಿಳೆಯರ ಪೈಕಿ ಇಬ್ಬರು ತಮ್ಮ ಸೀರೆಯೊಳಗೆ 8 ರೇಷ್ಮೆ ಸೀರೆಗಳನ್ನು ಅಡಗಿಸಿಕೊಂಡು ಅಂಗಡಿಯಿಂದ ಪರಾರಿಯಾಗಿದ್ದಾರೆ. ಕೆಲ ಹೊತ್ತಿನ ಬಳಿಕ ಇತರೆ ನಾಲ್ವರು ಮಹಿಳೆಯರು ಅದೇ ಮಾದರಿಯಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು 10 ರೇಷ್ಮೆ ಸೀರೆಗಳನ್ನು ತಮ್ಮ ಸೀರೆಯೊಳಗೆ ಅಡಗಿಸಿಕೊಂಡು ಹೊರ ಹೋಗಲು ಮುಂದಾಗಿದ್ದರು. ಕೂಡಲೇ ಅಂಗಡಿ ಮಾಲೀಕರು ಎಚ್ಚೆತ್ತು ವಿಚಾರಿಸಿದಾಗ ಕಳವು ಮಾಡಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಈ ವೇಳೆ 10 ಸೀರೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಕೋರಮಂಗಲದಲ್ಲಿ ವಾಸವಿರುವ ಆರೋಪಿಗಳ ಸ್ನೇಹಿತನ ಮನೆಯಲ್ಲಿ 28 ರೇಷ್ಮೆ ಸೀರೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಜೆ.ಪಿ.ನಗರ ಮತ್ತು ಜಯನಗರ ಠಾಣೆಗಳಲ್ಲಿ ದಾಖಲಾಗಿದ್ದ ಮೂರು ರೇಷ್ಮೆ ಸೀರೆ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
1 ಸಾವಿರ ರೂ.ಗೆ ಮಾರಲು ಸಿದ್ಧತೆ : ಆರೋಪಿಗಳು ಕಳವು ಮಾಡಿದ ರೇಷ್ಮೆ ಸೀರೆಗಳನ್ನು ಆಂಧ್ರಪ್ರದೇಶ ಹಾಗೂ ಗಡಿ ಭಾಗದ ಪ್ರದೇಶಗಳಲ್ಲಿ ಕಡಿಮೆ ಮೊತ್ತಕ್ಕೆ ಮಾರಾಟಕ್ಕೆ ಸಿದ್ದತೆ ನಡೆಸಿದ್ದರು. ಪ್ರತಿ ಸೀರೆಯನ್ನು 1 ರಿಂದ ಒಂದೂವರೆ ಸಾವಿರ ರೂ.ಗೆ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.