ಹುಣಸೂರು: ಅಕ್ರಮವಾಗಿ ಜಮೀನಿನ ಬೇಲಿಗೆ ಅಳವಡಿಸಿದ್ದ ವಿದ್ಯುತ್ ಸ್ಪರ್ಶಿಸಿ 30-35 ವರ್ಷದ ಸಲಗ ಮೃತಪಟ್ಟರುವ ಘಟನೆ ನಾಗರಹೊಳೆ ಉದ್ಯಾನದಂಚಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ನಡೆದಿದ್ದು, ಜಮೀನು ಮಾಲಕನ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಜೂ.29 ರಂದು ಘಟನೆ ನಡೆದಿದ್ದು, ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಡಿ.ಬಿಕುಪ್ಪೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಳೇ ಮಾನಂದವಾಡಿ-ಮೈಸೂರು ರಸ್ತೆ ಪಕ್ಕದಲ್ಲಿ ಘಟನೆ ನಡೆದಿದ್ದು, ಆನೆಮಾಳ ಗ್ರಾಮದ ಗ್ರಾಮಸ್ಥರು ಮದ್ದೂರು ಶಾಖೆಯ ಡಿ.ಆರ್.ಎಫ್.ಓಗೆ ಮಾಹಿತಿ ನೀಡಿದ್ದರು. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ನಾಗರಹೊಳೆ ಉದ್ಯಾನದ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ನರಗುಂದ, ಬೆಳೆ ಉಳಿಸಿಕೊಳ್ಳಲು ಅಳವಡಿಸಿದ್ದ ಸೋಲಾರ್ ತಂತಿ ಬೇಲಿಗೆ ಅಕ್ರಮವಾಗಿ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿರುವುದು ಪತ್ತೆಯಾಗಿದೆ.
ಆನೆಯು ಉದ್ಯಾನದಿಂದ ಹೊರಬಂದು ರಸ್ತೆ ದಾಟುತ್ತಿದ್ದ ವೇಳೆ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್‌ಗೆ ಬಲಿಯಾಗಿದ್ದು, ಜಮೀನು ಮಾಲಿಕ ಉದಯರ ಪುತ್ರ ಥಾಮಸ್‌ಗೆ ಸೇರಿದ್ದಾಗಿದ್ದು, ಘಟನೆ ನಂತರ ನಾಪತ್ತೆಯಾಗಿದ್ದಾನೆ.1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 9 ಮತ್ತು 22ರ ಉಲ್ಲಂಘಿಸಿರುವ ಥಾಮಸ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮವಹಿಸಲಾಗಿದ್ದು, ಈ ಸಂಬಂಧ ಅಂತರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಉದಯವಾಣಿಗೆ ಮಾಹಿತಿ ನೀಡಿದರು.
ಸಾವನ್ನಪ್ಪಿದ ಸಲಗದ ಶವವನ್ನು ನಾಗರಹೊಳೆ ಪಶುವೈದ್ಯಾಧಿಕಾರಿಯಾದ ಆನೆ ಪ್ರಭಾರದಾರಕ ಡಾ.ಎಚ್.ರಮೇಶ್, ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಸಂಸ್ಕಾರ ನಡೆಸಲಾಯಿತೆಂದು ಅಂತರಸಂತೆ ಎಸಿಎಫ್ ರಂಗಸ್ವಾಮಿ ತಿಳಿಸಿದರು. ಈ ವೇಳೆ ಇನ್ಸ್ಪೆಕ್ಟರ್ ಎಂ.ಲಕ್ಷ್ಮೀ ಕಾಂತ್, ಡಿ.ಬಿ.ಕುಪ್ಪೆವಲಯದ ಆರ್.ಎಫ್.ಓ.ಕೆ.ಎಲ್.ಮಧು ಚೆಸ್ಕಾಂ ಇಂಜಿನಿಯರ್ ದೀಪಕ್, ಎಸ್.ಐ.ರವಿಶಂಕರ್ ಹಾಗೂ ಸಿಬ್ಬಂದಿಗಳು ಇದ್ದರು.
ಅರಣ್ಯದಂಚಿನ ಗ್ರಾಮಸ್ಥರು ವನ್ಯಪ್ರಾಣಿಗಳು ಕಾಣಿಸಿಕೊಂಡಾಗ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕೇ ವಿನಃ, ವನ್ಯಜೀವಿ ಹಾವಳಿ ಎಂಬ ಕಾರಣಕ್ಕೆ ಅರಣ್ಯದಂಚಿನ ಜಮೀನುಗಳ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಉರುಳು ಅಳವಡಿಸುವುದು, ಅಕ್ರಮ ಅರಣ್ಯ ಪ್ರವೇಶಕ್ಕೆ ವನ್ಯಜೀವಿ ಕಾಯ್ದೆಯಡಿ ಕಠಿಣ ಶಿಕ್ಷೆ ಇದ್ದು, ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗುವ ಕೃತ್ಯಕ್ಕೆ ಮುಂದಾಗದಂತೆ ಎಚ್ಚರಿಸಿ, ರೈತರು, ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಡಿಸಿಎಫ್ ಮನವಿ ಮಾಡಿದ್ದಾರೆ.