ಬೆಂಗಳೂರು: ಮದ್ಯದ ಅಮಲಿನಲ್ಲಿ ಬಾಡಿಗೆದಾರ ಯುವತಿಗನಿಂದಿಸಿ, ಹಲ್ಲೆ ಮಾಡಿದ ಖಾಸಗಿ ಅಪಾರ್ಟ್ಮೆಂಟ್ವೊಂದರ ಮಾಲಿಕನ ಪುತ್ರನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್ಎಂವಿ 2ನೇ ಹಂತದ ಪ್ಲಾನೆಟ್ ವಿಸ್ತಾ ಅಪಾರ್ಟ್ಮೆಂಟ್ ನಿವಾಸಿ ಮಂಜುನಾಥ ಗೌಡ (30) ಬಂಧಿತ ಆರೋಪಿ. ಡಿ.3ರ ರಾತ್ರಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 26 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ದೂರು?: ಪಶ್ಚಿಮ ಬಂಗಾಳ ಮೂಲದ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ಸಂಜಯನಗರದ ಆರ್ಎಂವಿ 2ನೇ ಹಂತದ ಆರೋಪಿ ಮಂಜುನಾಥ ಗೌಡನ ತಂದೆಗೆ ಸೇರಿದ ಪ್ಲಾನೆಟ್ ವಿಸ್ತಾ ಅಪಾರ್ಟ್ಮೆಂಟ್ನ 3ನೇ ಮಹಡಿಯ ಫ್ಲ್ಯಾಟ್ ಬಾಡಿಗೆ ಪಡೆದು ವಾಸವಾಗಿದ್ದಾರೆ. ಡಿ.3ರಂದು ರಾತ್ರಿ ಸುಮಾರು 10.30ಕ್ಕೆ ಪಾರ್ಸೆಲ್ ತೆಗೆದುಕೊಳ್ಳಲು ಯುವತಿ ಅಪಾರ್ಟ್ಮೆಂಟ್ನ ಗೇಟ್ ಬಳಿ ನಿಂತಿದ್ದಾರೆ.
ಆಗ ಯುವತಿಯನ್ನು ನೋಡಿದ ಆರೋಪಿ ವಿನಾಕಾರಣ ಆಕೆಯನ್ನು ಮಾತನಾಡಿಸಲು ಮುಂದಾಗಿದ್ದಾನೆ. ಈ ವೇಳೆ ಆತ ಮದ್ಯ ಸೇವಿಸಿದ್ದರಿಂದ ಯುವತಿ ಆತನ ಮಾತಿಗೆ ಗಮನ ಕೊಟ್ಟಿಲ್ಲ. ಈ ವೇಳೆ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಯುವತಿಯ ಕಪಾಳಕ್ಕೆ ಹೊಡೆದಿದ್ದಾನೆ. ಬಳಿಕ ಆಕೆಯ ಕುತ್ತಿಗೆ ಬಿಗಿಯಾಗಿ ಹಿಡಿದು ಜೋರಾಗಿ ಗೋಡೆಗೆ ಗುದ್ದಿಸಿದ್ದಾನೆ. ಈ ವೇಳೆ ಆತನ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯುವತಿ ಮುಂದಾ ದಾಗ ಆರೋಪಿ ಆಕೆಯ ಕೈ ಬೆರಳು ಕಚ್ಚಿ ಗಾಯ ಗೊಳಿಸಿದ್ದಾನೆ. ಯುವತಿಯನ್ನು ಬಲವಂತವಾಗಿ ಆತನ ಮನೆಗೆ ಎಳೆದೊಯ್ಯಲು ಯತ್ನಿಸಿದ್ದಾನೆ.
ಅಲ್ಲದೆ, ಯುವತಿ ತಪ್ಪಿಸಿಕೊಂಡು ತನ್ನ ಫ್ಲ್ಯಾಟ್ ಕಡೆ ಓಡಿದ್ದಾರೆ. ಆಗ ಬೆನ್ನಟ್ಟಿದ ಆರೋಪಿ ಮತ್ತೆ ಆಕೆಯನ್ನು ತಡೆದು ಹಲ್ಲೆ ಮಾಡಿದ್ದಾನೆ. ಮರು ದಿನ ಬೆಳಗ್ಗೆ ಮತ್ತೆ ಯುವತಿಯ ಫ್ಲ್ಯಾಟ್ಗೆ ಬಂದ ಆರೋಪಿ ಕಿಟಕಿಯಲ್ಲಿ ಇಣುಕಿ ನೋಡಿ ಒಳಗೆ ಬರಬಹುದೇ ಎಂದು ಕೇಳಿದ್ದಾನೆ. ಅದಕ್ಕೆ ಯುವತಿ ನಿರಾಕರಿಸಿದ್ದಾರೆ. ಈ ವೇಳೆಯೂ ಆರೋಪಿ ನಿಂದಿ ಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.