ಹುಣಸೂರು: ಬ್ರಾಹ್ಮಣ ಸಮುದಾಯದ ಯುವ ಸಮೂಹಕ್ಕೆ ನಮ್ಮ ಸಂಸ್ಕಾರ, ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕು ಕಟ್ಟಿಕೊಳ್ಳಲು ಪೋಷಕರು ಪ್ರೇರೇಪಿಸಬೇಕಾಗಿದೆ ಎಂದು ವಿದ್ವಾನ್ ಟಿ.ವಿ.ಸತ್ಯನಾರಾಯಣ ಆಶಿಸಿದರು.
ನಗರದ ರಾಘವೇಂದ್ರಸ್ವಾಮಿ ಮಠದ ಸುದಾಯಭವನದಲ್ಲಿ ತಾಲೂಕು ಬ್ರಾಹ್ಮಣ ಸಭಾ ಮತ್ತು ವಿಪ್ರ ವನಿತಾ ಸೇವಾ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಾಹ್ಮಣ್ಯ ಹುಟ್ಟಿನಿಂದ ಬಂದದ್ದಲ್ಲ, ಬರುವುದೂ ಇಲ್ಲ. ಆದರೆ ಆತನ ಸಂಸ್ಕಾರ ಮತ್ತು ಜ್ಞಾನದಿಂದ ಬಂದದ್ದು. ವಿಪ್ರ(ಬ್ರಾಹ್ಮಣ) ಸಮುದಾಯ ಲೋಕ ಕಲ್ಯಾಣಕ್ಕೆ ಸದಾ ತುಡಿಯುವ ವ್ಯಕ್ತಿತ್ವ ಹೊಂದಿದ್ದು, ಸದಾ ಪರೋಪಕಾರ ಮಾಡುವ ಮನಸ್ಥಿತಿ ಹೊಂದಿರುವ ಸಮುದಾಯ ಇದಾಗಿದೆ ಎಂದರು.
ಸಂಸ್ಕೃತ ಭಾಷೆ ವಿಶ್ವದಲ್ಲೇ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಈ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಯುವಪೀಳಿಗೆ ಗಮನ ನೀಡಬೇಕಾಗಿದೆ. ಈ ಸಮುದಾಯ ಸಾಮಾಜಿಕ ಒಳಿತಿಗಾಗಿ ಮತ್ತು ಸರ್ವರ ಶ್ರೇಯಸ್ಸನ್ನು ಬಯಸುವುದಕ್ಕೆ ಒತ್ತು ನೀಡಿದ್ದರು ಎಂದು ಹೇಳಿದರು.
ಆದರೆ ಇಂದು ವಿವಿಧ ಕಾರಣಗಳಿಗೆ ಆರೋಪಗಳು ಎದುರಿಸುವ ಪರಿಸ್ಥಿತಿ ಸೃಷ್ಠಿಯಾಗಿದೆ. ಯಾವುದೇ ಆಕ್ಷೇಪಗಳು ಎದುರಾದರು ಸತ್ಯ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಮಾಜಕ್ಕೆ ಒಳ್ಳೆತನ ಸಾರುವಲ್ಲಿ ಕೈ ಜೋಡಿಸೋಣ ಎಂದರು.
ಕರ್ನಾಟಕ ಕಲಾಶ್ರೀ ವಿದ್ವಾನ್ ಸಿ.ಎ.ನಾಗರಾಜ್ ಗೌರವ ಸ್ವೀಕರಿಸಿ ಮಾತನಾಡಿ, ಬ್ರಾಹ್ಮಣ ಸಮಾಜ ಸರ್ವ ವರ್ಗಕ್ಕೂ ಅಕ್ಷರ ಕಲಿಸಿ ಜ್ಞಾನವಂತರನ್ನಾಗಿಸಿ ಸಾಮಾಜಿಕ ಗುರು ಆಗಿದ್ದೇವೆ. ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡು ಕರ್ತವ್ಯ ನಿರ್ವಹಿಸಿ ಇಂದಿಗೂ ಗೌರವದ ಬದುಕು ನಡೆಸಿ ಸಮಾಜಮುಖಿ ಚಿಂತನೆಗೆ ಬ್ರಾಹ್ಮಣ ಸಮುದಾಯ ಸಮಸಮಾಜಕ್ಕೆ ಒತ್ತು ನೀಡಿದೆ ಎಂದರು.
ಗೌರವ: ವಿಪ್ರ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದೆ.
ವಿಪ್ರ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಸತ್ಯವತಿ ಮಾತನಾಡಿ, ಕಳೆದ 13 ವರ್ಷಗಳಿಂದ ಸಂಘ ವಿವಿಧ ಚಟುವಟಿಕೆ ನಡೆಸುವ ಮೂಲಕ ಸಮುದಾಯದ ಮಹಿಳೆಯರ ಅಭಿವೃದ್ದಿಗೆ ಪೂರಕವಾಗಿದೆ. ಅಲ್ಲದೆ ಸಾಲ-ಸೌಲಭ್ಯ ಕಲ್ಪಿಸುತ್ತಿದೆ. ಸದಸ್ಯರ ಪ್ರಾಮಾಣಿಕತೆಯಿಂದ ಸಂಘವು ಲಾಭದಲ್ಲಿ ಮುನ್ನಡೆಯುತ್ತಿದ್ದು, ಬರುವ ಲಾಭಾಂಶವನ್ನು ಪ್ರತಿವರ್ಷ ವಿತರಿಸಲಾಗುತ್ತಿದೆ. ಸಂಘದ ವತಿಯಿಂದ ಪ್ರತಿ ವರ್ಷ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರನ್ನು ಗೌರವಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಸ್ಕರ್ ವಿ ಭಟ್ ವಹಿಸಿದ್ದರು. ಕಾರ್ಯದರ್ಶಿ ಕಮಲಾ ಪ್ರಾಸ್ತಾವಿಕ ಮಾತ ಮಾತುಳನ್ನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯರಾವ್, ಕಾರ್ಯದರ್ಶಿ ನಾಗರಾಜ್ ಇದ್ದರು.