ಹುಣಸೂರು: ಖಾಸಗಿ ಪೈನಾನ್ಸ್ ನವರ ಕಿರುಕುಳಕ್ಕೆ ಹೆದರಿದ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸಮೀಪದ ಕಿರಿಜಾಜಿ ಗ್ರಾಮದಲ್ಲಿ ನ.28ರ ಗುರುವಾರ ನಡೆದಿದೆ.
ಕಿರಿಜಾಜಿ ಗ್ರಾಮದ ಸಣ್ಣಕಾಳಯ್ಯ ಅವರ ಪತ್ನಿ ಸುಶೀಲ (50) ಸಾವನ್ನಪ್ಪಿದವರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಸುಶೀಲಮ್ಮ ಅವರು ಮಹಿಳಾ ಸಂಘದ ಸದಸ್ಯರಾಗಿದ್ದು, ಸಂಘದ ವತಿಯಿಂದ ಖಾಸಗಿ ಮೈಕ್ರೊ ಪೈನಾನ್ಸ್ ನಲ್ಲಿ 40 ಸಾವಿರ ಸಾಲ ಪಡೆದಿದ್ದರು. ಸಾಲದ ಕಂತಿನ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ನ.29 ರಂದು ಪಾವತಿಸುವುದಾಗಿ ತಿಳಿಸಿದ್ದರು.
ಖಾಸಗಿ ಮೈಕ್ರೋ ಪೈನಾನ್ಸ್ ಕಂಪನಿಯ ಸಾಲ ವಸೂಲಿಗಾರ ಉಮೇಶ್, ತನ್ನ ಮೂವರು ಸ್ನೇಹಿತರೊಡಗೂಡಿ ಅವಕಾಶ ನೀಡಲು ಸಾಧ್ಯವಿಲ್ಲ. ಈಗಲೇ ಪಾವತಿಸುವಂತೆ ನ. 28ರ ಗುರುವಾರ ಮಧ್ಯಾಹ್ನ ಸುಮಾರು 3ರ ವೇಳೆ ಮನೆಯ ಮುಂದೆ ಗಲಾಟೆ ಮಾಡಿದ್ದ ವೇಳೆ ಮನೆಯಲ್ಲಿದ್ದ ಸೊಸೆ ಹಾಗೂ ಬೀದಿಯವರು ಗಲಾಟೆ ನೋಡಿದ್ದರು.
ಸಾಲ ತೀರಿಸಲು 1 ದಿನ ಕಾಲಾವಕಾಶ ಕೇಳಿದರೂ ನೀಡದೆ ಗಲಾಟೆ ಮಾಡಿದ್ದರಿಂದ ಮರ್ಯಾದೆಗೆ ಹೆದರಿದ ಸುಶೀಲಮ್ಮ ಮನೆಯ ಕೊಣೆಯೊಂದರ ಬಾಗಿಲು ಹಾಕಿಕೊಂಡು ಕೀಟನಾಶಕ ಕಾಳು ಸೇವಿಸಿ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಪಕ್ಕದ ಮನೆಯವರು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಸಂಬಂಧ ನಗರ ಠಾಣೆಯಲ್ಲಿ ಫೈನಾನ್ಸ್ ಕಂಪನಿಯ ಉಮೇಶ್ ಸೇರಿದಂತೆ ನಾಲ್ವರ ವಿರುದ್ದ ಪುತ್ರ ನವೀನ್ ದೂರು ನೀಡಿದ್ದಾರೆ.