ಹೊನ್ನಾಳಿ: ಹಸಿವು ಮುಕ್ತ ಕರ್ನಾಟಕ ರಾಜ್ಯ ನಿರ್ಮಾಣ ನಮ್ಮ ಸರ್ಕಾರದ ಗುರಿಯಾಗಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ಬಡವರು ಯಾರೂ ಹಸಿದು ಮಲಗಬಾರದು ಎಂಬುದು ಈ ಯೋಜನೆಯ ಉದ್ದೇಶ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದ ನೂತನ ನ್ಯಾಯಬೆಲೆ ಅಂಗಡಿ ಉದ್ಘಾಟನಾ ಸಮಾರಂಭದಲ್ಲಿ ಅವರುಮಾತನಾಡಿದರು. ಬಿಪಿಎಲ್ ಕಾರ್ಡ್‌ಗೆ 30 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಯೂನಿಟ್ ಪದ್ಧತಿ ಜಾರಿಗೊಳಿಸಿ ಪ್ರತಿ ಯುನಿಟ್‌ಗೆ 5 ಕೆ.ಜಿ. ನೀಡಲಾಗುತ್ತಿದೆ.
ಆದರೆ, ಪ್ರಸ್ತುತ ಬರಗಾಲದ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಪ್ರಮಾಣದ ಅಕ್ಕಿ ಜನತೆಗೆ ಅಗತ್ಯ ಎಂಬುದನ್ನು ಮನಗಂಡು ಏಪ್ರಿಲ್ ತಿಂಗಳಿಂದ ಪ್ರತಿ ಯೂನಿಟ್‌ಗೆ 8 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ಸಿಎಂ ಸಿದ್ಧರಾಂಯ್ಯ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎಂದು ವಿವರಿಸಿದರು. ಸೊರಟೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮ ಸಂಘ ಎಂಬ ಜಿಲ್ಲಾ ಪ್ರಶಸ್ತಿಗೆ ಭಾಜನವಾಗಿರುವುದು ಸಂತಸದ ವಿಷಯ.
ಸರ್ಕಾರ ಈ ಸಂಘಗಳಿಗೆ ಅಧಿಕ ಆರ್ಥಿಕ ನೆರವು ನೀಡುತ್ತಿದೆ. ಎಲ್ಲಾ ರೈತರಿಗೂ ಸಂಘ ಬೆಳೆ ಸಾಲ ನೀಡಬೇಕು. ಇದರಿಂದ ರೈತರ ಪರಿಸ್ಥಿತಿ ಸುಧಾರಿಸುತ್ತದೆ. ರೈತರೂ ಸಕಾಲದಲ್ಲಿ ಸಾಲ ಮರುಪಾವತಿಗೆ ಮುಂದಾಗಬೇಕು. ಆಗ ಮಾತ್ರ ಸಹಕಾರ ಸಂಘಗಳು ಬದುಕಿ ಉಳಿಯಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಬೀರಪ್ಪ, ಮುಖಂಡರಾದ ಜಿ. ಹನುಮಂತಪ್ಪ, ಡಿ. ಹನುಮಂತಪ್ಪ, ಜಿ. ಬಸವರಾಜಗೌಡ, ಸೊರಟೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೊಗ್ಗಾಳಿ ಹನುಮಂತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೊರಟೂರು ಗ್ರಾಪಂ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಉಪಾಧ್ಯಕ್ಷೆ ರೂಪಾ, ಸೊರಟೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಶಾಂತಮ್ಮ ಜೆ. ನಾಗೇಂದ್ರಪ್ಪ, ನಿರ್ದೇಶಕರಾದ ಜೆ.ಜಿ. ಶ್ರೀನಿವಾಸ್, ಕೆ.ಪಿ. ಚನ್ನಪ್ಪ, ಟಿ. ನಾಗರಾಜ್, ಎಂ.ಎಸ್. ಗೋಪಿನಾಥ್, ಸುನಿತಾ ಶಿವಾಜಿರಾವ್, ಮುಖಂಡರಾದ ಬಸವನಗೌಡ, ದೊಗ್ಗಾಳಿ ಆನಂದಪ್ಪ, ಸಿದ್ದಪ್ಪ, ಹೊನ್ನಾಳಿ ಪಿಎಸ್‌ಐ ಎನ್.ಸಿ. ಕಾಡದೇವರ, ನ್ಯಾಮತಿ ಪಿಎಸ್‌ಐ ತಿಪ್ಪೇಸ್ವಾಮಿ ಮತ್ತಿತರರಿದ್ದರು.