Advertisement

ಬಾಣಂತಿ, ಮಗುವನ್ನು ಊರು ತಲುಪಿಸಿ ಮಾನವೀಯತೆ ಮೆರೆದ ಸಾರಿಗೆ ಸಂಸ್ಥೆ ಸಿಬ್ಬಂದಿ

06:32 PM Aug 02, 2021 | Nagendra Trasi |

ಮುದ್ದೇಬಿಹಾಳ: ಮುದ್ದೇಬಿಹಾಳದಿಂದ ತಮ್ಮೂರು ನಾರಾಯಣಪುರಕ್ಕೆ ಹೋಗಲು ಬಸ್‌ ಇಲ್ಲದೇ ಬಸ್‌ ನಿಲ್ದಾಣದಲ್ಲಿ ಉಳಿದುಕೊಂಡಿದ್ದ ಬಾಣಂತಿ ಮತ್ತು ಮಗುವನ್ನು ಅವರೂರಿಗೆ ಮುಟ್ಟಿಸುವ ಮಾನವೀಯ ಕೆಲಸವನ್ನು ಸಾರಿಗೆ ಇಲಾಖೆ ಸಿಬ್ಬಂದಿ ಶನಿವಾರ ರಾತ್ರಿ ಮಾಡಿರುವ ಘಟನೆ ಇಲ್ಲಿ ನಡೆದಿದೆ. ತನಗೆ ಡ್ಯೂಟಿ ಇಲ್ಲದಿದ್ದರೂ ಹೆಚ್ಚುವರಿ ಡ್ಯೂಟಿ ಮಾಡಿ ಮಗು ಹಾಗೂ ತಾಯಿಯನ್ನು ಊರು ತಲುಪಿಸಿ ಮಾನವೀಯತೆ ಮೆರೆದ ಚಾಲಕ ರಾಚಪ್ಪ ಹೂಗಾರನ ಬಗ್ಗೆ ಇಲ್ಲೆಲ್ಲ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಶನಿವಾರ (ಜು. 31) ರಾತ್ರಿ 10 ಗಂಟೆ ಸಮಯ. ಬಸ್‌ ನಿಲ್ದಾಣದಲ್ಲಿ ಒಂದೂವರೆ ತಿಂಗಳ ಆರಾಮ ಇಲ್ಲದ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತನ್ನ ಗಂಡ ಹಾಗೂ ತಾಯಿ ಜೊತೆ ಕುಳಿತಿದ್ದ ಶಂಕ್ರಮ್ಮ ನಾಲತವಾಡಗೆ ತನ್ನೂರು ನಾರಾಯಣಪುರ ಮುಟ್ಟುವ ಚಿಂತೆ ಕಾಡುತ್ತಿತ್ತು. ಕೊರೊನಾ ಕಾರಣದಿಂದ ರಾತ್ರಿ 9:30ಕ್ಕೆ ಮುದ್ದೇಬಿಹಾಳ ಘಟಕದಿಂದ ನಾರಾಯಣಪುರವರೆಗೆ ಹೋಗುತ್ತಿದ್ದ ವಸ್ತಿ ಬಸ್‌ ರದ್ದಾಗಿದೆ. ನಂತರ ರಾತ್ರಿಯೇ ಹೋಗುತ್ತಿದ್ದ ಸೊಲ್ಲಾಪುರ ರಾಯಚೂರು ಬಸ್‌ ಸಹ ರದ್ದಾಗಿದ್ದರಿಂದ ಮಗು ಸಮೇತ ಬಸ್‌ ನಿಲ್ದಾಣದಲ್ಲಿಯೇ ಕಳೆಯಬೇಕಾದ ಸ್ಥಿತಿ.

ವಿಷಯ ಗೊತ್ತಾಗುತ್ತಿದ್ದಂತೆಯೇ ಘಟಕ ವ್ಯವಸ್ಥಾಪಕ ರಾಹುಲ್‌ ಹೊನಸೂರೆ ಅವರಿಗೆ ಹಸಿರು ತೋರಣ ಬಳಗದ ಸದಸ್ಯ ಮಹಾಬಲೇಶ್ವರ ಗಡೇದ ಫೋನ್‌ ಮಾಡಿ ಬಾಣಂತಿ ಹಾಗೂ ಮಗುವನ್ನು ಅವರೂರಿಗೆ ಕಳಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ರಾಹುಲ್‌ ಹೊನಸೂರೆ ಅವರು ರಾತ್ರಿಯ ವೇಳೆ ಘಟಕದಲ್ಲಿ ಕರ್ತವ್ಯದ ಮೇಲಿದ್ದ ನಿಯಂತ್ರಣಾಧಿಕಾರಿ ನಿಂಗಣ್ಣ ತಳವಾರ ಅವರಿಗೆ ಸಾಧ್ಯವಾದಷ್ಟೂ ಪ್ರಯತ್ನ ಮಾಡಿ ಯಾವುದಾದರೂ ಬಸ್‌ ಮಾಡಿ ಕಳುಹಿಸುವಂತೆ ಸೂಚಿಸಿದರು.

ತಣ್ಣನೆ ಗಾಳಿ ಬೀಸುತ್ತ ಚಳಿಯಲ್ಲಿ ಚಡಪಡಿಸುತ್ತಿದ್ದ ಮಗುವನ್ನು ಕಂಡಾಕ್ಷಣ ನಿಂಗಣ್ಣ ತಳವಾರ ಅವರು ತಡ ಮಾಡದೇ ಅವರಿವರನ್ನು ವಿಚಾರಿಸುತ್ತ ನಡೆದರು. ಹೊರಗಿನಿಂದ ಬಂದು ವಸ್ತಿ ಮಾಡಿರುವ ಬಸ್‌ನವರು ಈ ಕೆಲಸ ಮಾಡಲು ಒಪ್ಪುವುದಿಲ್ಲ ಸರ್‌, ನಮ್ಮ ಡಿಪೋದವರೇ ಇದನ್ನು ಮಾಡಬೇಕು ಎಂದು ಅಲ್ಲಿಗೆ ಬೇರೆ ಕಡೆ ಒಪ್ಪಂದದ ಮೇಲೆ (ಸಿಸಿ) ಹೊರಟಿದ್ದ ಆರ್‌.ಎಸ್‌. ಹೂಗಾರ ಅವರನ್ನು ಒಪ್ಪಿಸಿದ ತಳವಾರ ಅವರು ಸ್ವತಃ ಬಾಣಂತಿ ಸಮೇತ ಬಸ್‌ಗಾಗಿ ಕಾಯುತ್ತಿದ್ದ 13 ಜನರಿಗೆ ತಾವೇ ಟಿಕೇಟ್‌ ಕೊಟ್ಟು ಊರು ತಲುಪಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

ರಾತ್ರಿ 8:30ರ ನಂತರ ನಾಲತವಾಡ, ವೀರೇಶ ನಗರ, ನಾರಾಯಣಪುರಕ್ಕೆ ಹೋಗುವವರಿಗೆ ಮೊದಲು ಇದ್ದ 9:30ರ ನಾರಾಯಣಪುರ ವಸ್ತಿ ಬಸ್‌ ಮತ್ತೆ ಶುರು ಮಾಡಬೇಕು. ಇದರಿಂದ ವ್ಯಾಪಾರ ವಹಿವಾಟು ಮುಗಿಸಿ ಊರಿಗೆ ಹೋಗುವವರಿಗೆ ಅನುಕೂಲ ಆಗುತ್ತದೆ.
ಶರಣು ಚಿನಿವಾರ, ನಾಲತವಾಡ ನಿವಾಸಿ

Advertisement

ವಿಜಯಪುರದಿಂದ ನಾಲತವಾಡಕ್ಕೆ ಹೋಗಬೇಕೆಂದಿದ್ದ ನಮಗೆ ಹತ್ತೇ ನಿಮಿಷದಲ್ಲಿ ನಮ್ಮೂರಿಗೆ ಹೋಗುವ ಬಸ್‌ ತಪ್ಪಿತು. ನಾವೇನು ಎಲ್ಲಿಯಾದರೂ ವಾಸ್ತವ್ಯ ಮಾಡಬಹುದಿತ್ತು, ಆದರೆ ಬಡ ಬಾಣಂತಿ ಮತ್ತು ಮಗುವಿನ ಸ್ಥಿತಿ ಬೇರೆಯಾಗಿತ್ತು. ಅವರ ಸ್ಥಿತಿ ನೋಡಿ ಅಪ ರಾತ್ರಿಯಲ್ಲಿಯೂ ಬಸ್‌ ಅನುಕೂಲ ಮಾಡಿದ ಘಟಕ ವ್ಯವಸ್ಥಾಪಕರಿಗೂ, ನಿಯಂತ್ರಣಾ ಧಿಕಾರಿಗಳಿಗೆ ಹಾಗೂ ಚಾಲಕರ ಕೆಲಸ ಮಾಡಿದ ರಾಚಪ್ಪ ಹೂಗಾರ ಅವರಿಗೂ ಪುಣ್ಯ ಬರಲಿ.
ಬಸಣ್ಣ ಮೇಗಲಮನಿ,
ಬಟ್ಟೆ ವ್ಯಾಪಾರಸ್ಥರು, ನಾಲತವಾಡ

ಕೊರೊನಾ ಸಂಬಂಧ ಬಹಳಷ್ಟು ಬಸ್‌ಗಳನ್ನು ರದ್ದು ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ನಾರಾಯಣಪುರಕ್ಕೆ ವಸ್ತಿ ಬಸ್‌ ಆರಂಭಿಸುತ್ತೇವೆ.
ರಾಹುಲ್‌ ಹೊನಸೂರೆ,
ಘಟಕ ವ್ಯವಸ್ಥಾಪಕ, ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next