ಹಾವೇರಿ: ಹೊಸ ಬರಹಗಾರರಿಗೆ ಉತ್ತೇಜನ ಕೊಡುವ ಉದ್ದೇಶದಿಂದ ‘ಸಂಕ್ರಮಣ ಸಾಹಿತ್ಯ ಬಳಗ’ ಆರಂಭಗೊಂಡಿದ್ದು ಇಲ್ಲಿಯ ಸರಕಾರಿ ನೌಕರರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಲೇಖಕ ಪ್ರೊ| ಚಂದ್ರಶೇಖರ ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂಪಾ, ಇಂದು ಸಂಪರ್ಕ ಸಾಧನೆಗಳು ಹೆಚ್ಚಾಗಿವೆ. ಆದರೆ, ಮಾನವೀಯ ಸಂಬಂಧಗಳು ಮಾತ್ರ ಕಡಿಮೆಯಾಗುತ್ತಿವೆ. ತಾತ್ಕಾಲಿಕ ಸುಖ ಮತ್ತು ಪ್ರಸಿದ್ಧಿ ಕೊಡುವ ವಾಟ್ಸಪ್, ಫೇಸ್‌ಬುಕ್ ಗಳಿಗಿಂತ ಮುದ್ರಣ ಸಾಹಿತ್ಯ ಕೈಗೆ ಸಿಗಬೇಕು. ಇದಕ್ಕಾಗಿ ‘ಸಂಕ್ರಮಣ ಸಾಹಿತ್ಯ ಬಳಗ’ ನಾಡಿನಲ್ಲಿ ಹೊಸ ಹಾಗೂ ದೊಡ್ಡ ವೇದಿಕೆಯಾಗಲಿದೆ ಎಂದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಳಗ ಆರಂಭವಾಗಲಿದ್ದು ಈಗಾಗಲೇ ಗದಗ, ಹಾವೇರಿ ಹಾಗೂ ದಾವಣಗೆರೆಯಲ್ಲಿ ಪ್ರಾರಂಭವಾಗಿವೆ. ಕೇವಲ 10 ಬರಹಗಾರರು ಇದ್ದರೆ ಸಾಕು, ತಿಂಗಳಿಗೊಂದು ಕಾರ್ಯಕ್ರಮ ಜರುಗಿಸಬೇಕು. ಪುಸ್ತಕ ಚರ್ಚೆ, ವಿಮರ್ಶೆ ಹಾಗೂ ಸಮಕಾಲೀನ ಸಾಂಸ್ಕೃತಿಕ ಸಂದರ್ಭದ ಬಗ್ಗೆ ಚರ್ಚೆ ನಡೆಯಬೇಕೆಂದು ಚಂಪಾ ಹೇಳಿದರು.
ಬಹು ಮುಖ್ಯವಾಗಿ ಯುವ ಬರಹಗಾರರ ಪುಸ್ತಕಗಳ ಪ್ರಕಟಣೆ ಮತ್ತು ವಿತರಣೆ ವ್ಯವಸ್ಥೆಯನ್ನು ‘ಸಂಕ್ರಮಣ ಸಾಹಿತ್ಯ ಬಳಗ’ ವಹಿಸಿ ಕನಿಷ್ಠ 300 ಪ್ರತಿಗಳನ್ನು ನಾಡಿನ ಎಲ್ಲ ಘಟಕಗಳಿಗೆ ಮಾರಾಟದ ರೂಪದಲ್ಲಿ ತಲುಪಿಸಲಾಗುವುದು ಎಂದರು. 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡ ಡಾ| ಚಂದ್ರಶೇಖರ ಕಂಬಾರ ಕುರಿತು ಮಾತನಾಡಿದ ಚಂಪಾ, ಕಂಬಾರರು ಒಬ್ಬ ಹಳ್ಳಿ ಮೂಲದಿಂದ ಬಂದ ಸಹಜ ಸಾಹಿತಿ. ತಮ್ಮ ಕಾವ್ಯ ನಾಟಕ ಕಾದಂಬರಿಗಳಲ್ಲಿ ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಜನಪದ ಸತ್ವದ ಮೂಲಕ ಸೂರೆಗೊಂಡವರು ಎಂದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಕಲಾವಿದ ಕರಿಯಪ್ಪ ಹಂಚಿನಮನಿಯವರನ್ನು ಸನ್ಮಾನಿಸಲಾಯಿತು. ಪ್ರೊ| ಧರಣೇಂದ್ರ ಕರಕುರಿ, ಡಾ| ಜೆ.ಜಿ. ದೇವಧರ, ಪ್ರಕಾಶ ಮನ್ನಂಗಿ, ರೇಣುಕಾ ಗುಡಿಮನಿ, ವೈ.ಬಿ. ಆಲದಕಟ್ಟಿ ಹಾಗೂ ಸಿದ್ದಾಪುರದ ಗಂಗಾಧರ ಕೊಳಗಿ ಮಾತನಾಡಿದರು.
ಸಮಾರಂಭದಲ್ಲಿ ಡಾ| ವಿ.ಪಿ. ದ್ಯಾಮಣ್ಣನವರ, ಸಿ.ಆರ್. ಮಾಳಗಿ, ಪರಿಮಳಾ ಜೈನ, ಸಿದ್ದುಮತಿ ನೆಲವಿಗಿ, ಮಲ್ಲಿಕಾರ್ಜುನ ಹಿಂಚಿಗೇರಿ, ಸಿ.ಎ. ಕೂಡಲಮಠ, ಎಸ್. ಆರ್. ಹಿರೇಮಠ, ಸಿ.ಎಸ್. ಮರಳಿಹಳ್ಳಿ, ವಿ.ಎಂ. ಪತ್ರಿ, ಮಾಲತೇಶ ಅಂಗೂರ, ಜಿ.ಎಂ. ಓಂಕಾರಣ್ಣನವರ ಮುಂತಾದವರು ಪಾಲ್ಗೊಂಡಿದ್ದರು.
‘ಸಂಕ್ರಮಣ ಸಾಹಿತ್ಯ ಬಳಗ’ ಸಂಚಾಲಕರನ್ನಾಗಿ ಕೃಷ್ಣಾ ಜವಳಿ, ವಾಗೀಶ ಹೂಗಾರ ಹಾಗೂ ಪುಷ್ಪಾ ಶಲವಡಿಮಠ ಅವರನ್ನು ಆಯ್ಕೆ ಮಾಡಲಾಯಿತು. ಲೇಖಕಿ ರಾಜೇಶ್ವರಿ ಸಾರಂಗಮಠ ಸ್ವಾಗತಿಸಿದರು. ಪೃಥ್ವಿರಾಜ ಬೆಟಗೇರಿ ನಿರ್ವಹಿಸಿದರು. ವಾಗೀಶ ಹೂಗಾರ ವಂದಿಸಿದರು.