ಬೆಂಗಳೂರು: ಕೊರೊನಾ ವೈರಸ್ ವ್ಯಾಪಿಸುತ್ತಿರುವ ಬೆನ್ನಲ್ಲೇ ಸ್ಯಾನಿಟೈಸರ್‌ಗಳಿಗೆ ಏಕಾಏಕಿ ಭಾರೀ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಗಳಲ್ಲಿ “ಪಡಿತರ’ ರೂಪದಲ್ಲಿ ಪೂರೈಸಲಾಗುತ್ತಿದ್ದು, ಒಬ್ಬರಿಗೆ ಗರಿಷ್ಠ 2-3 ಎಂಬ ನಿರ್ಬಂಧ ವಿಧಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ಮಾರುಕಟ್ಟೆಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ (ಕೈ-ನೈರ್ಮಲ್ಯಕಾರಕ ದ್ರವ ಪದಾರ್ಥ) ಪೂರೈಕೆಗಿಂತ ಬೇಡಿಕೆ ಹತ್ತಾರುಪಟ್ಟು ಹೆಚ್ಚಿದೆ. ಹೀಗಾಗಿ ಅಭಾವ ಸೃಷ್ಟಿ ಆಗದಿರಲಿ ಎಂಬ ಕಾರಣಕ್ಕೆ ಗ್ರಾಹಕರಿಗೆ ಖರೀದಿ ಮೇಲೆ ಅಲಿಖೀತ ನಿರ್ಬಂಧ ವಿಧಿಸಲಾಗುತ್ತಿದೆ.
“ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ಬೇಡಿಕೆಯಲ್ಲಿ ಹತ್ತುಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಬೇಕಾಬಿಟ್ಟಿ ಖರೀದಿಗೆ ನಿರ್ಬಂಧ ವಿಧಿಸಲಾಗಿದೆ. ದೊಡ್ಡ ಮಾರುಕಟ್ಟೆಗಳಲ್ಲಿ 500 ಮಿಲಿ ಲೀಟರ್ ಗಾತ್ರದ ಸ್ಯಾನಿಟೈಸರ್‌ಗಳನ್ನು ಒಬ್ಬರಿಗೆ 2-3 ಬಾಟಲಿ ಮಾತ್ರ ನೀಡುವಂತೆ ವಿತರಕರಿಗೆ ಮನವಿ ಮಾಡಲಾಗಿದೆ. ಅನಗತ್ಯ ದಾಸ್ತಾನು ತಪ್ಪಿಸಲು ಹೀಗೆ ಹೇಳಲಾಗಿದೆ’ ಎಂದು ದಿ ಹಿಮಾಲಯ ಡ್ರಗ್ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫಿಲಿಪ್ ಹೆಡನ್
“ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಸೂಪರ್ ಮಾರ್ಕೆಟ್, ಬಿಗ್‌ಬಜಾರ್ ಸೇರಿದಂತೆ ದೊಡ್ಡ ಮಳಿಗೆಗಳಲ್ಲಿ ಸಮರ್ಪಕ ಪೂರೈಕೆಯೇ ಆಗುತ್ತಿಲ್ಲ. ಹಾಗಿದ್ದರೂ ಕೇವಲ 2 ತಾಸುಗಳಲ್ಲಿ ಖಾಲಿ ಆಗುತ್ತಿವೆ. ಹೀಗಾಗಿ ಸಗಟು ರೂಪದಲ್ಲಿ ಕೊಂಡೊಯ್ಯಲು ಸ್ಯಾನಿಟೈಸರ್‌ಗಳ ಲಭ್ಯತೆಯೇ ಇಲ್ಲ. ಮಾರಾಟ ಮಾಡುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಕೆಲವು ಔಷಧ ಅಂಗಡಿಗಳಲ್ಲಿ ಒಬ್ಬರಿಗೆ 1 ಎಂಬ ನಿಯಮ ಹಾಕಿಕೊಂಡಿವೆ. ಈ ಸಂಬಂಧ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಬೇಡಿಕೆ ಮತ್ತು ಪೂರೈಕೆ ಪ್ರಮಾಣ ಆಧರಿಸಿ ಸ್ವತಃ ನಾವೇ ಹೀಗೆ ಸೂಚಿಸುತ್ತಿದ್ದೇವೆ. ಅನಗತ್ಯ ದಾಸ್ತಾನು ತಪ್ಪಿಸುವುದು ಇದರ ಮುಖ್ಯ ಉದ್ದೇಶ ಎಂದು ನಗರದ ದೊಡ್ಡ ಮಳಿಗೆಗಳು ಮತ್ತು ಔಷಧ ಅಂಗಡಿ ಮಾಲಿಕರು ಮಾಹಿತಿ ನೀಡಿದರು.
ಮಾರುಕಟ್ಟೆಯಲ್ಲಿ ಸದ್ಯ ಸ್ಯಾನಿಟೈಸರ್ ತಯಾರಿಕೆ ಮತ್ತು ಪೂರೈಕೆ ಮಾಡುವ ಪ್ರಮುಖ ಕಂಪನಿಗಳು ಹಿಮಾಲಯಾ, ಡೆಟಾಲ್ ಹಾಗೂ ಲೈಫ್ಬಾಯ್. ಈ ಮೂರೂ ಕಂಪನಿಗಳು ಗರಿಷ್ಠ ಉತ್ಪಾದನೆ ಮಾಡುತ್ತಿದ್ದರೂ, ಬೇಡಿಕೆ ತಲುಪಲು ಸಾಧ್ಯವಾಗುತ್ತಿಲ್ಲ. ಹಿಮಾಲಯ ಒಂದೇ ಕಂಪನಿ ಒಂದು ಲಕ್ಷ ಬಾಟಲ್ ಉತ್ಪಾದಿಸಿದರೆ, ಕೇವಲ 3-4 ತಾಸುಗಳಲ್ಲಿ ಖಾಲಿ ಆಗುತ್ತಿವೆ. ಈ ಮೊದಲು ಖಾಲಿಯಾಗಲು 10 ದಿನ ಹಿಡಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಕಂಪನಿಗಳ ಉತ್ಪನ್ನಗಳಿಗೂ ಬೇಡಿಕೆ ಬಂದಿದ್ದು, ಆದರೂ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ.
ದರ ದುಪ್ಪಟ್ಟು: ಬೇಡಿಕೆ ಹಿನ್ನೆಲೆಯಲ್ಲಿ ಸ್ಯಾನಿಟೈಸರ್‌ಗಳ ಬೆಲೆಯೂ ಏರಿಕೆಯಾಗಿದೆ. ಯಾವುದೇ ಕಂಪನಿಯ 50 ಎಂ.ಎಲ್. ಸ್ಯಾನಿಟೈಸರ್ ಬಾಟಲ್‌ಗೆ 50ರಿಂದ 60 ರೂ. ಇತ್ತು. ಈಗ ಅದರ ಬೆಲೆ 80ರಿಂದ 90 ರೂ. ಆಗಿದೆ. 80 ಬಾಟಲ್‌ಗಳಿಗೆ ಬೇಡಿಕೆ ಇಡಲಾಗಿತ್ತು. ಆ ಪೈಕಿ 50 ಪೂರೈಕೆ ಆಗಿದ್ದು, ಕೆಲವೇ ಹೊತ್ತಿನಲ್ಲಿ ಖಾಲಿ ಆಗಿದೆ. ಹೀಗಾಗಿ ಗ್ರಾಹಕರಿಗೆ “ನೋ ಸ್ಟಾಕ್’ ಎಂದು ಹೇಳಿ ಕಳುಹಿಸಲಾಗುತ್ತಿದೆ ಎಂದು ರಾಜಾಜಿನಗರದ ಶ್ರೀವೆಂಕಟೇಶ್ವರ ಮೆಡಿಕಲ್ಸ್ ಮಾಲಿಕರು ತಿಳಿಸುತ್ತಾರೆ. “ನಗರದಲ್ಲಿ 117 ಮೋರ್ ಸೂಪರ್ ಮಾರುಕಟ್ಟೆ ಶಾಖೆಗಳಿವೆ. ಅಲ್ಲೆಲ್ಲಾ ಇಂತಿಷ್ಟು ಎಂಬಿಕ್ಯು ಎಂದು ನಿಗದಿಪಡಿಸಲಾಗಿರುತ್ತದೆ.
ಉದಾಹರಣೆಗೆ 50 ಎಂಎಲ್‌ನ 10 ಬಾಟಲ್ ಪ್ರತಿ ಶಾಖೆಗೆ ವಿತರಿಸಲು ವಿತರಕರಿಗೆ ಸೂಚಿಸಲಾಗಿರುತ್ತದೆ. ಅದರಲ್ಲಿ 5 ಮಾರಾಟವಾದರೂ, ಮರುದಿನವೇ 10 ಬಂದು ಬಿದ್ದಿರುತ್ತಿದ್ದವು. ಆದರೆ, ಈಗ ಹೆಚ್ಚೆಂದರೆ 4 ಬಾಟಲ್ ಬರುತ್ತಿವೆ. ಜತೆಗೆ ಸ್ವಂತ ಬ್ರ್ಯಾಂಡ್‌ನ 8-10 ಪೂರೈಕೆ ಆಗುತ್ತಿದ್ದು, ಕೆಲವೇ ಹೊತ್ತಿನಲ್ಲಿ ಖಾಲಿ ಆಗುತ್ತಿವೆ. ಭೇಟಿ ನೀಡುವ ಗ್ರಾಹಕರು “ಸ್ಟಾಕ್ ಇಲ್ಲ’ ಎಂದು ಹೇಳಿದಾಗ, ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ’ ಎಂದು ಬಾಗಲುಗುಂಟೆ ಮೋರ್ ಸೂಪರ್ ಮಾರುಕಟ್ಟೆಯ ಉಗ್ರಾಣ ವ್ಯವಸ್ಥಾಪಕಿ (ಸ್ಟೋರ್ ಮ್ಯಾನೇಜರ್) ಛಾಯಾ ಅಸಹಾಯಕತೆ ವ್ಯಕ್ತಪಡಿಸಿದರು. ಆನ್‌ಲೈನ್ ಮಾರು ಕಟ್ಟೆ ಯಲ್ಲಿ ಸ್ಯಾನಿಟೈಸರ್‌ಗಳು ಲಭ್ಯ ಇವೆ. ಆದರೆ, ಅವು ನಿಮ್ಮನ್ನು ತಲುಪಲು ಕನಿಷ್ಠ 3 ದಿನಗಳಾಗುತ್ತಿದೆ. ಪ್ರತಿಷ್ಠಿತ ಕಂಪನಿಯ ಸ್ಯಾನಿಟೈಸರ್‌ಗಳು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ.
ಟೈಲರ್‌ಗೂ ಬಂತು ಬೇಡಿಕೆ!: ಮುಖಗವಸುಗಳಿಗೆ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬಟ್ಟೆ ಹೊಲಿಯುವ ಟೈಲರ್‌ಗಳಿಗೆ ಕೆಲ ಗ್ರಾಹಕರು ಈ ಮುಖಗವಸುಗಳಿಗೆ ದುಂಬಾಲು ಬೀಳುತ್ತಿದ್ದಾರೆ!. ನಗರದ ದಾಸರಹಳ್ಳಿ, ಯಶವಂತಪುರ, ಸುತ್ತಲಿನ ಊರುಗಳಲ್ಲಿ ಸ್ಥಳೀಯ ಟೈಲರ್‌ಗಳಿಗೆ ಮಾಸ್ಕ್ ಹೊಲಿದುಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ. ಅದರಂತೆ ಸಾಮಾನ್ಯ ಬಟ್ಟೆಗಳಿಂದ ಟೈಲರ್ ತಯಾರಿಸಿ, ಪೂರೈಕೆ ಮಾಡುತ್ತಿರುವುದು ಕಂಡುಬರುತ್ತಿದೆ.
* ವಿಜಯಕುಮಾರ ಚಂದರಗಿ