Advertisement

ಹುಬ್ಬಳ್ಳಿ: ಹಸುವಿನ ಕರುವಿಗೆ ಕೃತಕ ಕಾಲು ಯಶಸ್ವಿ ಜೋಡಣೆ

04:30 PM Feb 06, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ರೈಲುಗೆ ಸಿಲುಕಿ ಹಿಂದಿನ ಕಾಲು ಕಳೆದುಕೊಂಡಿದ್ದ ಆಕಳ ಕರುವಿಗೆ ಕೃತಕ ಕಾಲು ಜೋಡಣೆ ಮೂಲಕ, ಕರು ಮತ್ತೆ ನಾಲ್ಕು ಕಾಲಗಳೊಂದಿಗೆ ನಡೆದಾಡುವಂತೆ ಮಾಡಲಾಗಿದೆ.

Advertisement

ಜೈನ್‌ ಯುವ ಸಂಘಟನೆಯ ಮಹಾವೀರ ಲಿಂಬ್‌ ಸೆಂಟರ್‌ ಕೃತಕ ಕಾಲು ಜೋಡಿಸಿದ್ದು, ಕರು ದತ್ತು ಪಡೆದು ಪೋಷಣೆಗೂ ಮುಂದಾಗಿದೆ. ಇಲ್ಲಿನ ಅಭಿನವ ನಗರದಲ್ಲಿರುವ ವಿಶ್ವಹಿಂದೂ ಪರಿಷದ್‌ ಉತ್ತರ ಪ್ರಾಂತದ ಗೋಶಾಲೆಯಲ್ಲಿ ಆಶ್ರಯ ಪಡೆದಿರುವ ಕರುವಿಗೆ ಸೋಮವಾರ ಕೃತಕ ಕಾಲು ಜೋಡಿಸಲಾಯಿತು.

ಮಹಾವೀರ ಲಿಂಬ್‌ ಕೇಂದ್ರದ ಮಹೇಂದ್ರ ಸಿಂಘಿ ಮಾತನಾಡಿ, ಇಂದು ನಮಗೆ ಹಸುವಿನ ಕರುವಿಗೆ ಕೃತಕ ಕಾಲು ಜೋಡಣೆ ಅವಕಾಶ ಸಿಕ್ಕಿದೆ. ಈ ಹಿಂದೆ ನಾವು ಕುದುರೆಯೊಂದಕ್ಕೆ ಕೃತಕ ಕಾಲು ಜೋಡಣೆ ಮಾಡಿದ್ದೆವು. ಆನೆಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ ಎಂದು ಕೇಳಿದ್ದೆ. ಆದರೆ ಆಕಳ ಕರುವಿಗೆ ಕೃತಕ ಕಾಲು ಜೋಡಣೆ ಇದೇ ಮೊದಲು ಎನ್ನಿಸುತ್ತಿದೆ ಎಂದರು.

ಒಂದು ಕೃತಕ ಕಾಲು ತಯಾರಿಗೆ 7-8 ಸಾವಿರ ರೂ.ಗಳ ವೆಚ್ಚವಾಗುತ್ತದೆ. ದಾನಿಗಳ ನೆರವಿನೊಂದಿಗೆ ಬಡವರಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ಮಾಡುತ್ತಿದ್ದೇವೆ. ದಾನಿಗಳು 15 ಸಾವಿರ ರೂ. ನೀಡಿದರೆ 15 ವರ್ಷಗಳವರೆಗೆ ವರ್ಷಕ್ಕೆ ಒಬ್ಬರಿಗೆ ಅವರ ಹೆಸರಲ್ಲಿ ಕೃತಕ ಕಾಲು ಜೋಡಣೆ ಮಾಡಲಾಗುವುದು. ಕೃತಕ ಕಾಲು ಜೋಡಣೆ ಕರುವನ್ನು ದತ್ತು ಪಡೆದು ಅದರ ಪೋಷಣೆಗೆ ಮುಂದಾಗುತ್ತೇವೆ ಎಂದರು.

ಮಹಾವೀರ ಲಿಂಬ್‌ ಕೇಂದ್ರದ ಎಂ.ಎಚ್‌ .ನಾಯ್ಕರ್‌ ಮಾತನಾಡಿ, ಕರು ಜಾರದಂತೆ, ನಡೆದಾಗ ನೋವಾಗದ ರೀತಿ ಎಚ್ಚರಿಕೆ ವಹಿಸಿ ಕೃತಕ ಕಾಲು ತಯಾರಿಸಲಾಗಿದೆ. ಒಂದು ವರ್ಷದ ನಂತರ ಕರುವಿನ ಕಾಲಿನಲ್ಲಿ ಬದಲಾವಣೆ ಆಗಲಿದ್ದು, ಆಗ ಮತ್ತೆ ಕೃತಕ ಕಾಲಿನ ಗಾತ್ರ ಬದಲಾಯಿಸಬೇಕಾಗುತ್ತದೆ ಎಂದರು.

Advertisement

ವಿಶ್ವ ಹಿಂದೂ ಪರಿಷದ್‌ ಉತ್ತರ ಪ್ರಾಂತ ಕಾರ್ಯದರ್ಶಿ ಗೋವರ್ಧನರಾವ್‌ ಮಾತನಾಡಿ, ಕಳೆದ 8 ವರ್ಷಗಳಿಂದ ವಿಎಚ್‌ಪಿ ಗೋಶಾಲೆ ನಡೆಸುತ್ತಿದೆ. ಇಲ್ಲಿ ದೇಸಿ ಹಸು ಮಾತ್ರ ಸಾಕಲಾಗುತ್ತಿದೆ. ಗೋಶಾಲೆಯಲ್ಲಿ 24 ಹಸು ಹಾಗೂ ಕರುಗಳಿವೆ. ಹಾವೇರಿ ಜಿಲ್ಲೆ ಇನಾಮ ಲಕಮಾಪುರ ಬಳಿ ಸುಮಾರು 200 ಹಸುಗಳಿರುವ ಗೋಶಾಲೆಯನ್ನು ವಿಎಚ್‌ಪಿ ನಿರ್ವಹಿಸುತ್ತಿದೆ ಎಂದರು. ಗೋಶಾಲೆ ಉಸ್ತುವಾರಿ ಆನಂದ ಸಂಗಮ, ಜಿ.ಗೌತಮ, ಬಿ.ಸುನೀಲ, ಸುಭಾಸ ಡಂಕ್‌, ರಮೇಶ ಕದಂ, ವಿಜಯ ಕ್ಷೀರಸಾಗರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next