Advertisement

ಹುಬ್ಬಳ್ಳಿ: ಗ್ರಾಮೀಣ ವಿವಿ ಸ್ವಗ್ರಾಮ ಫೆಲೋಶಿಪ್‌

12:08 PM Nov 02, 2022 | Team Udayavani |

ಹುಬ್ಬಳ್ಳಿ: ಗ್ರಾಮ ಸಬಲೀಕರಣ, ಸ್ವಾವಲಂಬಿ ಬದುಕಿನ ಚಿಂತನೆಗಳ ಜತೆಗೆ ಗ್ರಾಮ ಭಾರತಕ್ಕೆ ಬಲ ತುಂಬುವ ಮಹತ್ವಾಕಾಂಕ್ಷೆ ಹೊಂದಿರುವ “ಸ್ವಗ್ರಾಮ ಫೆಲೋಶಿಪ್‌’ಗೆ ಗದುಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಬುಧವಾರ ಚಾಲನೆ ನೀಡುತ್ತಿದೆ.

Advertisement

ಗ್ರಾಮೀಣ ಬದುಕಿನ ಸಮಷ್ಟಿ ಅಭಿವೃದ್ಧಿ ಪರಿಕಲ್ಪನೆ, ಭವಿಷ್ಯದ ಸುಸ್ಥಿರತೆ ಚಿಂತನೆ ಹೊಂದಿರುವ ದೇಶದ ಮೊದಲ ಗುಂಪು ಫೆಲೋಶಿಪ್‌ ಇದಾಗಿದೆ. ಮೂರು ವರ್ಷಗಳ ಈ ಫೆಲೋಶಿಪ್‌ ಅನ್ನು ಅಕಾಡೆಮಿಕ್‌ ದೃಷ್ಟಿ ಹೊರತಾಗಿ ವಿವಿಧ ಕ್ಷೇತ್ರಗಳ ಸಾಧಕರು, ಸಾಧಕ ರೈತರು, ತಜ್ಞರು, ಸಂಘಟಕರು, ವೃತ್ತಿಪರರು, ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿ, ಅಭಿಪ್ರಾಯ, ಸಲಹೆ-ಸೂಚನೆ ಕ್ರೋಢಿಕರಿಸಿ ದೀರ್ಘಾವಧಿ ಚಿಂತನೆಯೊಂದಿಗೆ ರೂಪಿಸಲಾಗಿದೆ.

ಏನಿದು ಫೆಲೋಶಿಪ್‌?: ಗ್ರಾಮಗಳು ಉಳಿದರೆ ಭಾರತ ಉಳಿದೀತು ಎಂಬ ಪರಿಕಲ್ಪನೆಯಡಿ ಆತ್ಮನಿರ್ಭರತೆ ಒತ್ತಿನೊಂದಿಗೆ ಸ್ವಾವಲಂಬಿ ಗ್ರಾಮಗಳ ಬಲವರ್ಧನೆ, ಗ್ರಾಮ ವಿಕಾಸ ನಿಟ್ಟಿನಲ್ಲಿ ಗ್ರಾಮಸ್ಥರೇ ಚಿಂತಿಸಿ, ಸಮಾಲೋಚಿಸಿ, ನಿರ್ಣಯಿಸಿ ಕ್ರಿಯಾನ್ವಯಗೊಳಿಸುವ ಪ್ರಕ್ರಿಯೆಯೇ ಈ ಫೆಲೋಶಿಪ್‌ನ ಮೂಲ ಆಶಯವಾಗಿದೆ.

ಗ್ರಾಮೀಣ ವಿವಿ ಇದಕ್ಕಾಗಿ ವಿವಿಧ ಮಾದರಿಗಳನ್ನು ರೂಪಿಸಲು, ಯೋಜನೆ-ಚಿಂತನೆಗಳನ್ನು ಕೈಗೊಳ್ಳಲು ಯೂತ್‌ ಫಾರ್‌ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಪ್ರಜ್ಞಾಪ್ರವಾಹ, ಕುವೆಂಪು ವಿವಿಯ ಅಬ್ದುಲ್‌ ನಜೀರ್‌ಸಾಬ್‌ ಅಧ್ಯಯನ ಪೀಠ ಸಹಯೋಗದೊಂದಿಗೆ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.

ಅವಧಿ ಎಷ್ಟು?: ಮೂರು ವರ್ಷಗಳ (2022-2025) ಸ್ವಗ್ರಾಮ ಫೆಲೋಶಿಪ್‌ ಗ್ರಾಮ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮ ಅಭಿವೃದ್ಧಿಯ ಮಾದರಿಗಳನ್ನು ರೂಪಿಸುವ, ಸಹಕಾರ ಮನೋಭಾವದಡಿ ಸ್ವಾವಲಂಬಿ ಗ್ರಾಮ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಲವು ಪ್ರಯೋಗಳನ್ನು ಮಾಡುವ ಮೂಲಕ ಫಲಿತಾಂಶವನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಣೆಯಾಗುವಂತೆ ಮಾಡುವ ಮಹದಾಸೆಯನ್ನು ಹೊಂದಿದೆ. ಮುಖ್ಯವಾಗಿ ಸಮಗ್ರ ಗ್ರಾಮೀಣ ವಿಕಾಸದ ಪರಿಕಲ್ಪನೆ ಚೌಕಟ್ಟು, ಸಾಧನೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಉತ್ತೇಜನ ನೀಡಲಿದೆ.

Advertisement

ಗುಂಪು ಮಾದರಿಯ ಫೆಲೋಶಿಪ್‌ ಸ್ವ ಆಧಾರಿತ ಗ್ರಾಮ ಅಭಿವೃದ್ಧಿ ಮಾದರಿ ನಿರ್ಮಾಣಕ್ಕೆ ಯತ್ನಿಸುವ ವೇದಿಕೆಯಾಗಿದೆ. ಗ್ರಾಮೀಣ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಯತ್ನಿಸುವ ಪ್ರತಿಯೊಂದು ತಂಡಕ್ಕೂ ಅಗತ್ಯ ಮಾರ್ಗದರ್ಶನ, ಜ್ಞಾನ, ಕೌಶಲ, ಸಲಹೆಗಳನ್ನು ನೀಡಲಾಗುತ್ತದೆ. ಗ್ರಾಮದಲ್ಲಿ ಪರಿವರ್ತನೆ, ಸಹಕಾರ, ಸಮಷ್ಟಿ ಚಿಂತನೆ, ಭವಿಷ್ಯದ ಪರಿಕಲ್ಪನೆಯನ್ನು ಮನವರಿಕೆ ಮಾಡುವ ವಾಸ್ತವಿಕ ನೆಲೆಗಟ್ಟಿನಲ್ಲಿ ಇದೆಲ್ಲವುಗಳನ್ನು ಅನುಷ್ಠಾನಕ್ಕೆ ಪ್ರಮಾಣಿಕವಾಗಿ ಯತ್ನಿಸುವ, ಜನತೆ ಸ್ವಯಂ ಸಂತೋಷದಿಂದ ಪಾಲ್ಗೊಳ್ಳುವಿಕೆ, ಪಾಲುದಾರರನ್ನಾಗಿಸುವ ಯತ್ನವನ್ನು ಸ್ವಗ್ರಾಮ ಫೆಲೋಶಿಪ್‌ ಮಾಡಲಿದೆ.

ಭವಿಷ್ಯದ ಸುಸ್ಥಿರ-ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣ ನಿಟ್ಟಿನಲ್ಲಿ “ಸ್ವಗ್ರಾಮ ಫೆಲೋಶಿಪ್‌’ ದೇಶದಲ್ಲಿಯೇ ಹೊಸ ಪ್ರಯೋಗ. ಗ್ರಾಮಕ್ಕಾಗಿ ಏನಾದರೂ ಮಾಡಬೇಕು ಎಂದುಕೊಂಡವರಿಗೆ ನಿರಂತರ ಅಭಿವೃದ್ಧಿ, ಹೊಸತನ ಚಿಂತನೆ, ಸಮಗ್ರ ಅಭಿವೃದ್ಧಿ ಪರಿಕಲ್ಪನೆಗಳ ಪ್ರಯೋಗ-ಅನುಷ್ಠಾನಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಇದಾಗಿದೆ.
ವಿಷ್ಣುಕಾಂತ ಚಟಪಲ್ಲಿ, ಕುಲಪತಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next