ಹುಬ್ಬಳ್ಳಿ: ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಗ್ಯಾಂಗ್ ನ ಓರ್ವನಿಗೆ ಪೊಲೀಸರು ಏರಡು ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಗಾಯಾಳುಗಳು ಸದ್ಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಾಲಾ ವೆಂಕಟೇಶ್ವರ ಉರುಫ್ ಕಲ್ಯಾಣ ಕುಮಾರ ಎಂಬಾತನೇ ಪೊಲೀಸರಿಗೆ ಸಿಕ್ಕಿಬಿದ್ದ ನಟೋರಿಯಸ್ ದರೋಡೆಕೋರ.
ಈತ ಹಾಗೂ ಮೂರ್ನಾಲ್ಕು ಜನರ ತಂಡವು ಶುಕ್ರವಾರ (ಡಿ.28) ತಡರಾತ್ರಿ ಧಾರವಾಡ ತಾಲೂಕಿನ ನವಲೂರಿನ ಹೊರವಲಯದಲ್ಲಿರುವ ವಿಕಾಸ್ ಕುಮಾರ್ ಎಂಬುವರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸುತ್ತಿದ್ದಾಗ, ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಯು ಸ್ಥಳಕ್ಕೆ ತೆರಳಿದಾಗ ದರೋಡೆಕೋರರು ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಪಿಎಸ್‌ಐ ಪ್ರಮೋದ್ ಅವರು ಪಾಲಾ ವೆಂಕಟೇಶ್ವರಗೆ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಪಿಎಸ್‌ಐ ಮತ್ತು ಸಿಬ್ಬಂದಿ ಗಾಯಗೊಂಡಿದ್ದು, ಎಲ್ಲರೂ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕೆಎಂಸಿಆರ್‌ಐ ಆಸ್ಪತ್ರೆಗೆ ಹು-ಧಾ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ಕೊಟ್ಟು ಗಾಯಾಳು ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನವಲೂರಿನಲ್ಲಿ ವಿಕಾಸ ಕುಮಾರ ಎಂಬುವವರ ಮನೆಗೆ ದರೋಡೆಕೋರರು ನುಗ್ಗಿ ದರೋಡೆಗೆ ಪ್ರಯತ್ನ ಪಟ್ಟಿದ್ದಾರೆ. ಈ ವೇಳೆ ರೌಂಡ್ಸ್‌ನಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಏಕಾಏಕಿ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಪಟ್ಟಿದ್ದರು. ಆಗ ನಟೋರಿಯಸ್ ಪಾಲಾ ವೆಂಕಟೇಶ್ವರ ಎಂಬಾತನ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿಯಲಾಗಿದೆ. ಈತನೊಂದಿಗೆ ಮೂರನಾಲ್ಕು ಜನ ಬಂದಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಗೊತ್ತಾಗಿದೆ ಎಂದರು.
ಜೂನ್ 6ರಂದು ಇದೇ ವ್ಯಕ್ತಿ ನವಲೂರಿನಲ್ಲಿ ಅಶೋಕ ಕದಂ ಎಂಬುವರ ಮನೆಗೆ ನುಗ್ಗಿ, ಕಲ್ಲಿನಿಂದ ಬಾಗಿಲು ಒಡೆದು ಮನೆಯಲ್ಲಿದ್ದ ದಂಪತಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದರು. ಅದೇ ಪ್ರಕರಣದ ಆರೋಪಿ ಈತ ಎಂಬುದು ಕೂಡ ಈಗ ತಿಳಿದು ಬಂದಿದೆ. ಈತನ ಮೇಲೆ ಆಂಧ್ರದ ಕರಾವಳಿ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ 82ಕ್ಕೂ ಹೆಚ್ಚು ಇಂತಹುದೆ ಪ್ರಕರಣಗಳು ದಾಖಲಾಗಿವೆ. ಸ್ಟೂವರ್ಟ್ ಪುರಂ ಗ್ಯಾಂಗ್‌ನಲ್ಲಿ ಈತ ಗುರುತಿಸಿಕೊಂಡಿದ್ದ. ಇವರ ಅಪ್ಪ, ಅಜ್ಜ ಸೇರಿ ವಂಶಾವಳಿಯಾಗಿ ದರೋಡೆಕೋರರು ಆಗಿದ್ದಾರೆ. ಪರಾರಿಯಾದ ಇನ್ನುಳಿದವರ ಪತ್ತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.