ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಲಿಂಗಾಯತ ಧರ್ಮ ಮಹಾಸಭೆ ವತಿಯಿಂದ ಇಲ್ಲಿನ ಸಂಸದರ ಕಚೇರಿ ಮುಂಭಾಗದಲ್ಲಿ ಶನಿವಾರ ಹೋರಾಟ ನಡೆಸಿ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ನಿಟ್ಟಿನಲ್ಲಿ ನ್ಯಾ| ನಾಗಮೋಹನದಾಸ ಅವರ ವರದಿಯನ್ನು ಕೇಂದ್ರ ಸರಕಾರ ಪುರಸ್ಕರಿಸಬೇಕು. ಈ ನಿಟ್ಟಿನಲ್ಲಿ ಸಂಸದರು ಕೇಂದ್ರ ಸರಕಾರ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ ಹೋರಾಟಗಾರರು, ಈ ವಿಚಾರದಲ್ಲಿ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿ 4-5 ತಿಂಗಳು ಗತಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಧರ್ಮದ ವಿಚಾರದಲ್ಲಿ ಕೇಂದ್ರ ಸರಕಾರ ರಾಜಕಾರಣ ಮಾಡಬಾರದು. ಸಂವಿಧಾನಿಕ ಮಾನ್ಯತೆ ನೀಡುವ ಮೂಲಕ ಅಲ್ಪಸಂಖ್ಯಾತ ವರ್ಗಕ್ಕೆ ದೊರೆಯುವ ಸೌಲಭ್ಯಗಳನ್ನು ಲಿಂಗಾಯತರಿಗೆ ನೀಡುವಂತೆ ಒತ್ತಾಯಿಸಿದರು.
ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಾಗಿಲ್ಲ. ಇದೊಂದು ಪಕ್ಷಾತೀತ ಹೋರಾಟವಾಗಿದ್ದು, ಲಿಂಗಾಯತ ಧರ್ಮದ ಉನ್ನತಿ ಹಾಗೂ ಅಭಿವೃದ್ಧಿಗಾಗಿ ನಡೆಯತ್ತಿರುವ ಹೋರಾಟವಾಗಿದೆ. ಈ ಕುರಿತು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿ ಹಾಗೂ ನ್ಯಾ| ನಾಗಮೋಹನದಾಸ ವರದಿಯನು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಆದರೆ ಈ ವಿಚಾರದಲ್ಲಿ ಕೇಂದ್ರ ಸರಕಾರ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿಲ್ಲ. ಸಲ್ಲಿಸಿರುವ ಶಿಫಾರಸ್ಸಿನ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕೇಂದ್ರ ಸರಕಾರ ಶಿಫಾರಸ್ಸಿಗೆ ಕೂಡಲೇ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರ ಎಂ.ವಿ.ಗೊಂಗಡಶೆಟ್ಟರ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಎಂದು ಮಾನ್ಯತೆ ನೀಡುವುದರಿಂದ ಅಲ್ಪಸಂಖ್ಯಾತ ವರ್ಗಕ್ಕೆ ದೊರೆಯುವ ಸೌಲಭ್ಯಗಳು ದೊರೆಯುವುದರಿಂದ ಸಾಕಷ್ಟು ಅನುಕೂಲ ದೊರೆಯಲಿವೆ. ಈ ಕುರಿತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಂಸದರ ಕಚೇರಿಗಳ ಮುಂದೆ ಹೋರಾಟ ನಡೆಸಲಾಗುತ್ತಿದೆ. ನಮ್ಮ ಹೋರಾಟ ಕುಂದಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಹೋರಾಟ ನಡೆಯುತ್ತಿರುವುದರಿಂದ ಎಲ್ಲರೂ ಒಂದೆಡೆ ಸೇರಿಲ್ಲ. ಹಿಂದೆ ಇದ್ದ ಎಲ್ಲಾ ನಾಯಕರು, ಸ್ವಾಮೀಜಿಗಳು ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು. ಸಂಸದ ಪ್ರಹ್ಲಾದ ಜೋಶಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ನಿಮ್ಮ ಮನವಿಗೆ ಪೂರಕವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಕಳುಹಿಸುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯ ದಳ, ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಧರ್ಮ ಮಹಾಸಭಾ, ಬಸವ ಸಂಘಟನೆಗಳ ಪ್ರಮುಖರಾದ ಲೋಕೇಶ ಕೊರವಿ, ಪ್ರಭು ಶೆಟ್ಟರ, ವಿನಯ ಪರಮಾಧಿ, ಎಸ್.ಬಿ.ಜೋಡಳ್ಳಿ, ತಾರಾದೇವಿ ವಾಲಿ, ಸುರೇಶ ಪರಮಶೆಟ್ಟಿ, ಶಿವಲೀಲಾ ಕುದರಿ, ಬಸವರಾಜ ಲಿಂಗಶೆಟ್ಟರ, ಎಸ್.ವಿ.ಕೊಟಗಿ, ಸಿದ್ದರಾಮಣ್ಣ ನಡಕಟ್ಟಿ, ಗೌರಮ್ಮ ನಾಡಗೌಡರ ಇನ್ನಿತರರಿದ್ದರು.