ಹುಬ್ಬಳ್ಳಿ: ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿ ಮೂವರು ಬಾಲಕಿಯರು ಆಕಸ್ಮಿಕವಾಗಿ ಇಂಗು ಗುಂಡಿಯಲ್ಲಿ ಬಿದ್ದಿದ್ದು, ಇದರಲ್ಲಿ ಒಬ್ಬ ಬಾಲಕಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಘಟನೆಯಲ್ಲಿ ಮೂಲತಃ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕು ಯರಂಗಳಿ ಗ್ರಾಮದ, ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಇಲ್ಲಿನ ಗಿರಣಿಚಾಳದ ತ್ರಿಶಾ ಪರಶುರಾಮ ಯರಂಗಳಿ (10) ಮೃತಪಟ್ಟಿದ್ದಾಳೆ.
ಇನ್ನಿಬ್ಬರು ಸಹೋದರಿಯರಾದ ಕಾವ್ಯಾ (14) ಮತ್ತು ಕೃತಿಕಾ (8)ಅವರು ಅಂಗವಿಕಲ ಸುರೇಶ ಅರಕೇರಿ ಮತ್ತು ವಾಯು ವಿಹಾರಿಗಳ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ. ಉದ್ಯಾನದ ಆವರಣದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಮಳೆ ನೀರು ಕೊಯ್ಲು ಸಲುವಾಗಿ ಇಂಗುಗುಂಡಿ ತೆರೆಯಲಾಗಿದ್ದು, ಅದರಲ್ಲಿ ಮಳೆ ನೀರು ನಿಂತು ಹೊಂಡವಾಗಿದೆ.
ಸೋಮವಾರ ಬೆಳಗ್ಗೆ ಗಿರಣಿಚಾಳದ 5-6 ಬಾಲಕಿಯರು ಇಂದಿರಾ ಗಾಜಿನ ಮನೆ ಉದ್ಯಾನವನ ಆವರಣದಲ್ಲಿ ಆಟವಾಡುತ್ತಲಿದ್ದಾಗ ಆಕಸ್ಮಾತ್ ಆಗಿ ಕಾಲು ಜಾರಿ ಬಿದ್ದಿದ್ದಾರೆ. ಇದನ್ನು ಕಂಡ ಸಹ ಗೆಳತಿಯರು ಅವರನ್ನು ಕಾಪಾಡುವಂತೆ ಕಿರುಚಾಡಿದ್ದಾರೆ.
ಇದನ್ನೂ ಓದಿ: ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕೋದು; ಇದ್ದಾಗ ಭ್ರಷ್ಟಾಚಾರ ಮಾಡೋದು ‘ಕೈ’ ಕೆಲಸ: ಕಟೀಲ್ ಕಿಡಿ
ಇದನ್ನು ಕೇಳಿದ ವಾಯುವಿಹಾರಕ್ಕೆಂದು ಬಂದಿದ್ದ ಕೆಲವರು ಹಾಗೂ ಅಂಗವಿಕಲ ಸುರೇಶ ಅರಕೇರಿ ತಕ್ಷಣವೇ ಇಂಗುಗುಂಡಿಯ ನೀರಿಗೆ ಇಳಿದು ಕಾವ್ಯಾ ಮತ್ತು ಕೃತಿಕಾಳನ್ನು ರಕ್ಷಿಸಿದ್ದಾರೆ. ಇನ್ನೊಬ್ಬಳು ಮುಳುಗಿದ್ದಾಳೆಂದು ಬಾಲಕಿಯರು ತಿಳಿಸಿದಾಗ ತ್ರಿಶಾಳನ್ನು ಪತ್ತೆ ಮಾಡಿ ಹೊರಗೆ ಕರೆದುಕೊಂಡು ಬಂದಾಗ, ಅವಳು ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿದ್ದಳು.
ಕಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಭೇಟಿ ನೀಡಿ ವೀಕ್ಷಿಸಿದರಲ್ಲದೆ ಮೃತಪಟ್ಟ ಬಾಲಕಿಯ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಾಲಕಿಯರನ್ನು ರಕ್ಷಿಸಿದ ಸುರೇಶಗೆ ಕೃತಜ್ಞತೆ ಸಲ್ಲಿಸಿದರು.