ಬೆಂಗಳೂರು: ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ನೀಡಲಾಗಿದ್ದ ಮೇ 31ರ ಗಡುವನ್ನು ಜೂನ್ 12ರ ವರೆಗೆ ವಿಸ್ತರಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಹೈಕೋರ್ಟ್ ಆದೇಶದನ್ವಯ ಹೆಚ್ಚುವರಿಯಾಗಿ 12 ದಿನಗಳ ಅವಕಾಶ ಸಿಕ್ಕಿದೆ. ಜೂ. 12ರ ಬಳಿಕ ಅವಧಿ ವಿಸ್ತರಣೆ ಅಥವಾ ಇತರ ಯಾವುದೇ ಕ್ರಮಗಳು ಹೈಕೋರ್ಟ್ ಆದೇಶ ಅಥವಾ ಸರಕಾರದ ನಿರ್ಧಾರಗಳನ್ನು ಅವಲಂಬಿಸಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೇ 31ರ ವರೆಗೆ ನಿಗದಿಪಡಿಸಲಾಗಿದ್ದ ಗಡುವನ್ನು ವಿಸ್ತರಿಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಬಿಎನ್‌ಡಿ ಎನರ್ಜಿ ಲಿ. ಕಂಪೆನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆಯು ಜೂ.11ಕ್ಕೆ ನಿಗದಿಯಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದರು. ಹಾಗಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದ ವಾಹನಗಳ ವಿರುದ್ಧ ಜೂ.12ರ ವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೂಚಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿದ್ದು, ಇನ್ನೂ ಒಂದೂವರೆ ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದು ಬಾಕಿ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.