Advertisement

ಕಿವಿಯೊಳಗೆ ನೀರು ಹೋದರೆ ಕಡೆಗಣಿಸದಿರಿ…

01:20 PM Sep 01, 2021 | Team Udayavani |

ಸ್ನಾನಕ್ಕೆ ಹೋಗಿದ್ದಿರಿ. ಕಿವಿಯೊಳಗೆ ನೀರು ಹೋಯಿತು. “ಗೊಯ್‌’ ಎಂಬ ಶಬ್ದ. ನಡೆಯುವಾಗ “ಧನ್‌..ಧನ್‌’ ಎಂದಂತೆ.. ಏನೋ ಕಿರಿಕಿರಿ! ಕುಣಿಯುತ್ತಲೇ ಬಚ್ಚಲು ಮನೆಯಿಂದ ಹೊರಗೆ ಬಂದಿರಿ. ಆದರೆ ನೀರು ಕಿವಿಯಿಂದ ಹೊರಗೆ ಬರಲಿಲ್ಲ!

Advertisement

ಸಾಮಾನ್ಯವಾಗಿ ಸ್ನಾನ ಮಾಡುವಾಗ, ಸ್ವಿಮ್ಮಿಂಗ್‌ ಮಾಡಿದ ಅನಂತರ ಈ ಸ್ಥಿತಿ ಉಂಟಾಗುತ್ತದೆ. ಹೀಗೆ ಹೊಕ್ಕ ನೀರು ಒಂದು ದಿನ, ಕಡೆಗಣಿಸಿದರೆ ಐದು ದಿನಗಳವರೆಗೆ, ವಾರಗಟ್ಟಲೆ, ತಿಂಗಳುಗಟ್ಟಲೆ ಕೂಡ ಇರಬಲ್ಲದು. ದೀರ್ಘಾವಧಿ ಕಡೆಗಣಿಸಿ ಬಿಟ್ಟರೆ ಸೋಂಕು ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಕಿವಿಯೊಳಗೆ ಕಿಲ್ಬಿಷ (ಇಯರ್‌ ವ್ಯಾಕ್ಸ್‌) ತುಂಬಿಕೊಂಡಿದ್ದರಂತೂ ಅಪಾಯ ಖಚಿತ.

ನೀರು ಹೊಕ್ಕಿದ್ದರೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಸೋಂಕಾದರೆ ತಲೆನೋವು, ದವಡೆ ನೋವು, ತುರಿಕೆ, ತಲೆಸುತ್ತು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಇನ್ನೂ ಮುಂದುವರಿದು ಕಿವಿಯಲ್ಲಿ ತೇವಾಂಶ ಹೆಚ್ಚಿ, ಕಿವಿ ತಮಟೆ ದುರ್ಬಲ ಗೊಳ್ಳಬಹುದು. ಹಾಗಾಗಿ ನೀರು ಹೊಕ್ಕ ತತ್‌ಕ್ಷಣ ಹೊರತೆಗೆಯಬೇಕು ಎಂಬುದು ತಜ್ಞರ ಸಲಹೆ.

ಏನು ಪರಿಹಾರ?
ನೀರೇನೋ ಕಿವಿಯೊಳಗೆ ಸಲೀಸಾಗಿ ಹೋಗುತ್ತದೆ. ಆದರೆ ಹೊರಬರುವುದು ನಿಧಾನ. ಪ್ರಿವೆನ್ಶ ನ್‌ ಈಸ್‌ ಬೆಟರ್‌ ದ್ಯಾನ್‌ ಕ್ಯೂರ್‌ ಎಂಬಂತೆ ಕಿವಿಯೊಳಗೆ ನೀರು ಹೋಗದಂತೆ ನೋಡಿಕೊಳ್ಳುವುದು ಉತ್ತಮ. ಆದರೂ ಒಂದೊಮ್ಮೆ ಹೊಕ್ಕಾಗ ಕೆಲವೊಂದು ವಿಧಾನಗಳು ಪ್ರಯೋಜನಕಾರಿ.

ಕುಪ್ಪಳಿಸುವುದು
ಒಂಟಿ ಕಾಲಿನಲ್ಲಿ ನಿಂತು ಯಾವ ಕಿವಿಗೆ ನೀರು ಹೊಕ್ಕಿದೆಯೋ ಆ ಕಡೆ ತಲೆ ಓರೆಯಾಗಿಸಿ (ಆ ಕಿವಿ ನೆಲದ ಕಡೆಗೆ ಇರುವಂತೆ) ಕುಪ್ಪಳಿಸಬೇಕು. ಕುಪ್ಪಳಿಸುವುದು ಸಾಧ್ಯವಿಲ್ಲ ಎನ್ನುವವರು ನೀರು ಹೊಕ್ಕ ಕಿವಿಯ ವಿರುದ್ಧ ದಿಕ್ಕಿನಿಂದ ತಲೆಯ ಭಾಗಕ್ಕೆ ಅಂಗೈಯಿಂದ ಮೆಲ್ಲಗೆ ತಟ್ಟಬೇಕು (ನೀರು ಹೊಕ್ಕ ಕಿವಿ ನೆಲದ ಕಡೆಗಿರಬೇಕು). ಸಾಮಾನ್ಯವಾಗಿ ಈ ವಿಧಾನ ಪ್ರಯೋಜನಕಾರಿ.

Advertisement

ಮಲಗಿಕೊಳ್ಳುವುದು
ಯಾವ ಕಿವಿಗೆ ನೀರು ಹೊಕ್ಕಿದೆಯೋ ಆ ಕಿವಿ ನೆಲದ ಕಡೆಗಿರುವಂತೆ ಮಲಗಿ ಕೊಂಡು ನೀರು ಇಳಿದು ಹೋಗುವಂತೆ ಮಾಡಬಹುದು.

ವ್ಯಾಕ್ಯೂಮ್‌
ಹೀಗೇ ಮಲಗಿಕೊಂಡು ಅಂಗೈಯಿಂದ ಕಿವಿಯನ್ನು ಮುಚ್ಚಿ ನಿರ್ವಾತ ಉಂಟುಮಾಡಿ ಮತ್ತೆ ಅಂಗೈ ತೆಗೆದು ನೀರು ಹೊರ ಬರುವಂತೆ ಮಾಡಬಹುದು.

ಆಕಳಿಸುವುದು
ಆಕಳಿಸಿದಾಗ ಕಿವಿ ಹಿಗ್ಗಿದಂತಾಗಿ ನೀರು ಹೊರಬರುವ ಸಾಧ್ಯತೆ ಇರುತ್ತದೆ.

ವಲ್ಸಾಲ್ವಾ ಮ್ಯಾನ್ಯೂವರ್‌
ಒಂದು ದೀರ್ಘ‌ ಉಸಿರು ಎಳೆದುಕೊಂಡು, ಬಾಯಿ ಮುಚ್ಚಿ, ಮೂಗನ್ನು ಕೈಯಿಂದ ಮುಚ್ಚಿ ಹಿಡಿದುಕೊಂಡು ಕಿವಿಗಳ ಮೂಲಕ ಗಾಳಿಯನ್ನು ಹೊರ ಬಿಡಲು ಪ್ರಯತ್ನಿಸಬೇಕು. ಬಹುತೇಕ ಸಂದರ್ಭ ಈ ವಿಧಾನದಲ್ಲಿ ಅಂತಿಮವಾಗಿ ಸಮಸ್ಯೆಗೆ ಪರಿಹಾರ ದೊರಕಬಹುದು. ಕಿವಿಯಲ್ಲಿ ವ್ಯಾಕ್ಸ್‌ ಇದ್ದರೆ ನೀರು ಸುಲಭವಾಗಿ ಹೊರಬರಲು ಕಷ್ಟವಾಗಬಹುದು. ಹಾಗೆಂದು ಕಿವಿಗೆ ಕೀ, ಪೆನ್‌, ಬೆರಳು ಇತ್ಯಾದಿ ಹಾಕಿ ಕೊಳ್ಳಬಾರದು.

ಹಾಗಾದಾಗ, ಕಿವಿಯ ಮೂಳೆಗೆ ಗಾಯವಾಗಿ ವೃಣವಾಗಿ ಮತ್ತಷ್ಟು ತೊಂದರೆಯಾಗುವ ಸಾಧ್ಯತೆಯೂ ಇರುತ್ತದೆ. ಆಗ ಮೊದಲು ಆ ಗಾಯ ಗುಣಪಡಿಸಿ ಅನಂತರ ವ್ಯಾಕ್ಸ್‌, ಅಥವಾ ಅದರಿಂದ ಉಂಟಾದ ಸೋಂಕಿಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅದಷ್ಟು ಮುಗಿಯುವರೆಗೆ ನಿಮ್ಮ ಸುಖ ನಿದ್ದೆ ದೂರವಾಗಬಹುದು. ಸಮಸ್ಯೆ ಆ ಮಟ್ಟದ್ದು ಎಂದಾದರೆ ಶೀಘ್ರ ವೈದ್ಯರನ್ನು ಕಾಣುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next