Advertisement

3ನೇ ಅಲೆ ನಿರ್ವಹಣೆ ಹೇಗೆ? ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕಳಪೆ ಆಹಾರ

03:34 PM Aug 19, 2021 | Team Udayavani |

ಚಾಮರಾಜನಗರ: ಕೋವಿಡ್‌ ಮೂರನೇ ಅಲೆ ಬರಬಹುದೆಂದು ಎಲ್ಲರೂ ಆತಂಕಗೊಂಡಿದ್ದಾರೆ. ಏತನ್ಮಧ್ಯೆ, ಜಿಲ್ಲೆಯ ಕೋವಿಡ್‌ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಿಮೆ ಸಂಖ್ಯೆಯ ರೋಗಿಗಳಿಗೆ ಕಳಪೆ ಆಹಾರ ನೀಡಿಕೆ, ವಾಹನ ಸೌಲಭ್ಯ ನೀಡುತ್ತಿಲ್ಲ. ಇನ್ನು ಮೂರನೇ ಅಲೆ ಹೇಗೆ ಎದುರಿಸುತ್ತಾರೆ ಎಂದು ರೋಗಿಗಳು ಪ್ರಶ್ನಿಸುತ್ತಿದ್ದಾರೆ.

Advertisement

ತಾಲೂಕಿನ ಸಂತೆಮರಹಳ್ಳಿಯ ಬಿಲ್ವಿದ್ಯೆ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ. ರೋಗಿಗಳಿಗೆ ಇಲಾಖಾ ವಾಹನ ಸೌಲಭ್ಯ ನೀಡಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ. ಪ್ರಸ್ತುತ ಈ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 25ರಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಈ ಸೀಮಿತ ಸಂಖ್ಯೆಯ ರೋಗಿಗಳಿಗೆ ಸಹ ಉತ್ತಮವಾದ ಆಹಾರ ನೀಡುತ್ತಿಲ್ಲ ಎಂದು ರೋಗಿಗಳು ದೂರಿದ್ದಾರೆ.

ಗುಣಮಟ್ಟವಿಲ್ಲದ ಆಹಾರ ಪೂರೈಕೆ ಮಾತ್ರವಲ್ಲದೇ, ಕೊಡುವ ಆಹಾರವನ್ನೂ ಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಕೇವಲ 4 ಇಡ್ಲಿಯನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಇದು ಕೆಲವರಿಗೆ ಸಾಕಾಗುತ್ತದೆ. ಇನ್ನು ಕೆಲವರಿಗೆ ಈ ಪ್ರಮಾಣ ಸಾಲುವುದಿಲ್ಲ ಎಂದು ರೋಗಿಯೊಬ್ಬರು ದೂರಿದರು. ಆಹಾರವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಪ್ಯಾಕ್‌ ಮಾಡಿ ಪೂರೈಸಲಾಗುತ್ತಿದೆ. ಇದರಲ್ಲಿ ಎಲ್ಲ ರೋಗಿಗಳಿಗೂ ಒಂದೇ ಪ್ರಮಾಣದ
ಆಹಾರ ಹಾಕಲಾಗಿರುತ್ತದೆ. ಒಬ್ಬರಿಗೆ ಕಡಿಮೆ ಅಗತ್ಯವಿರುತ್ತದೆ,ಇನ್ನೊಬ್ಬರಿಗೆ ಸ್ವಲ್ಪ ಜಾಸ್ತಿ ಬೇಕಾಗಿರುತ್ತದೆ. ಕಡಿಮೆ ತಿನ್ನುವವರು ವ್ಯರ್ಥ ಮಾಡಬೇಕಾಗುತ್ತದೆ. ಹೀಗಾಗಿ ಆಹಾರವನ್ನು  ಪಾತ್ರೆಯಲ್ಲಿ ತಂದು ಬಫೆ ಮಾದರಿಯಲ್ಲಿ ವಿತರಿಸಿದರೆ ಈ ಸಮಸ್ಯೆ ಇರುವುದಿಲ್ಲ ಎಂದು ರೋಗಿಯೊಬ್ಬರು ತಿಳಿಸಿದರು.

ಇದನ್ನೂ ಓದಿ:ಕ್ರೆಡಿಟ್ ಕಾರ್ಡ್‌ ವಿತರಣೆಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ಆರ್ ಬಿ ಐ ಅನುಮತಿ..!?

ಹೊಟ್ಟೆ ಉರಿ: ನಾವು ಮನುಷ್ಯರಲ್ಲವೇ? ಇಂಥಕಳಪೆ ಆಹಾರ ಪೂರೈಸಲಾಗುತ್ತಿದೆ. ಆಹಾರಕ್ಕೆ ಸೋಡಾ ಬೆರೆಸಲಾಗುತ್ತದೆ. ಹೊಟ್ಟೆ ಉರಿ ಬರುತ್ತದೆ. ರೋಗಿಗಳು ಬರುತ್ತಾರೆಂದು ಎಂಥ ಆಹಾರವನ್ನಾದರೂ ಕೊಡಬಹುದೇ? ಎಂದು ಮಲೆ ಮಹದೇಶ್ವರ ಬೆಟ್ಟದಿಂದ ಬಂದು ದಾಖಲಾಗಿರುವ ರೋಗಿಯೊಬ್ಬರು ಆರೋಪಿಸಿದರು. ಸರ್ಕಾರ ಕೋವಿಡ್‌ ರೋಗಿಗಳ ಆಹಾರಕ್ಕಾಗಿ ನಿಗದಿತ ಅನುದಾನ ನೀಡುತ್ತಿದೆ. ಅದರಲ್ಲಿ ರೋಗಿಗಳಿಗೆ ಪೌಷ್ಟಿಕವಾದ, ಉತ್ತಮ ಆಹಾರ ನೀಡಬೇಕು. ಆದರೆ ಇಲ್ಲಿ ಕಳಪೆ ಆಹಾರ ನೀಡಲಾಗುತ್ತದೆ. ಈಗ ಕಡಿಮೆ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದೇವೆ. ಇಷ್ಟು ಜನರಿಗಾದರೂ ಉತ್ತಮ ಆಹಾರ ನೀಡ ಬೇಡವೇ ಎಂದು ತಾಲೂಕಿನ ಅರಕಲವಾಡಿ ಗ್ರಾಮದ ರೋಗಿಯೊಬ್ಬರು ಪ್ರಶ್ನಿಸುತ್ತಾರೆ.

Advertisement

ರೋಗಿಗಳನ್ನು ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿದರೆ ಮಾತ್ರ ಆರೋಗ್ಯ ಇಲಾಖೆ ವಾಹನದಲ್ಲಿಕೋವಿಡ್‌ ಕೇರ್‌ ಸೆಂಟರ್‌ಗೆ ಕರೆದುಕೊಂಡು ಹೋಗಲಾಗುತ್ತಿದೆ. ಗ್ರಾಮಗಳಲ್ಲಿ ತಪಾಸಣೆ ಮಾಡಿಸಿದವರು, ತಾವೇ ಬರಬೇಕು. ಸೋಂಕಿತರು ಎಂಬ ಕಾರಣಕ್ಕೆ ಬೇರೆಯವರು ಕರೆದುಕೊಂಡು ಹೋಗಲು ಹಿಂಜರಿಯುತ್ತಾರೆ. ಸೋಂಕಿತರು ಅವರ ಮನೆಯವರ ಜೊತೆ ವಾಹನದಲ್ಲಿ ಬಂದರೆ, ಅವರಿಗೂ ಸೋಂಕು ತಗುಲುವುದಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಕೋವಿಡ್‌ ಕೇರ್‌ ಸೆಂಟರ್‌ನಿಂದ ಡಿಸ್‌ಚಾರ್ಜ್‌ ಮಾಡಿದ ರೋಗಿಗಳನ್ನು ಅವರ ಊರಿಗೆ ಇಲಾಖೆ ವಾಹನದಲ್ಲಿ ಕರೆದೊಯ್ಯುತ್ತಿಲ್ಲ. ನಾವು 100 ಕಿ.ಮೀ. ದೂರದ ಮಲೆ ಮಹದೇಶ್ವರ ಬೆಟ್ಟದಿಂದ ಬಂದಿದ್ದೇವೆ. ಬರುವಾಗ ಆಶಾ ಕಾರ್ಯಕರ್ತೆಯರು ಆತುರಾತುರವಾಗಿ ಬಂದು ಬಿಟ್ಟೆವು. ಹಣ ಕೂಡ ತಂದಿಲ್ಲ. ಮಹಿಳೆಯರು ಕೂಡ ಬಂದಿದ್ದಾರೆ. ಈಗ ವಾಪಸ್‌ ಹೋಗಲು ನಮ್ಮ ಬಳಿ ಬಸ್‌ ಚಾರ್ಜ್‌ ಇಲ್ಲ. ಜೊತೆಗೆ ನಾವು ಕೋವಿಡ್‌ನಿಂದ ಈಗ ಚೇತರಿಸಿಕೊಳ್ಳುತ್ತಿದ್ದೇವೆ. ಸಾರ್ವಜನಿಕ ವಾಹನಗಳಾದ ಬಸ್‌ಗಳಲ್ಲಿ ಪ್ರಯಾಣಿಸುವುದು ಬೇರೆ ಪ್ರಯಾಣಿಕರ ಆರೋಗ್ಯ ದೃಷ್ಟಿಯಿಂದ ಸರಿಯಾದುದಲ್ಲ. ನಾವುಊರಿಗೆ ಹೋಗಲು ವಾಹನ ನೀಡುವುದಿಲ್ಲವಂತೆ. ಇದು ನ್ಯಾಯವೇ? ಎಂದು ಮಲೆ ಮಹದೇಶ್ವರ ಬೆಟ್ಟದ ರೋಗಿ ಯೊಬ್ಬರು ಅಳಲು ತೋಡಿಕೊಂಡರು. ಹಾಗಾಗಿ ಕೋವಿಡ್‌ ಸೋಂಕು ದೃಢಪಟ್ಟ ರೋಗಿಗಳನ್ನು ಕರೆತರಲು ಗುಣಮುಖರಾದ ಬಳಿಕ ವಾಪಸ್‌ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಬೇಕೆಂದು ರೋಗಿಗಳು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next