Advertisement

ನರಕದ ದ್ವಾರವನ್ನು ಭೂಲೋಕದಲ್ಲಿಯೇ ಮುಚ್ಚುವುದು ಹೇಗೆ?

03:30 AM Oct 06, 2018 | |

ಕಾಮ, ಕ್ರೋಧ ಮತ್ತು ಲೋಭಗಳು ಜೀವನದಲ್ಲಿ ಅಗತ್ಯವಾದ ಸಂಗತಿಗಳೇ ಅಲ್ಲ. ಆದರೆ ಇವು ಮೂರನ್ನು ಬಿಟ್ಟವರು ಈ ಕಲಿಯುಗದಲ್ಲಿ ಸಿಗಲಾರರು. ಆದರೆ ಈ ಮೂರನ್ನು ಎಲ್ಲರೂ ತ್ಯಜಿಸಿ ಬದುಕಿದಲ್ಲಿ ಯಾರೂ ನರಕವನ್ನು ಸೇರಲಾರರು ಅಲ್ಲದೆ ಭುವಿಯೇ ಸ್ವರ್ಗವಾಗುತ್ತದೆ. 

Advertisement

ಮಾನವನು ಈ ಭೂಲೋಕದಲ್ಲಿ ತಾನು ಹೇಗೇ ಬದುಕಿರಲಿ, ಸತ್ತ ಬಳಿಕ ತನಗೆ ಸ್ವರ್ಗ ಸಿಗಬೇಕೆಂದು ಬಯಸುತ್ತಾನೆ. ನರಕವನ್ನು ಯಾರೂ ಅಪೇಕ್ಷಿಸುವುದಿಲ್ಲ. ಸತ್ತ ಬಳಿಕ ದೇಹ ಉಳಿಯುವುದಿಲ್ಲ. ಆತ್ಮ ಎಲ್ಲಿ ಹೋಗುತ್ತದೆಂಬುದು ಕಾಣುವುದಿಲ್ಲ. ಸ್ವರ್ಗನರಕಗಳ ನಂಬಿಕೆಯಿಂದಾಗಿ ಈ ದೇಹವನ್ನು ತ್ಯಜಿಸಿದ ಆತ್ಮ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತದೆಂದು ನಮ್ಮಷ್ಟಕ್ಕೆ ನಾವೇ ತೀರ್ಮಾನಿಸುತ್ತೇವೆ. ಆದರೆ,  ಆ ನರಕವನ್ನು ಕನಸಿನಲ್ಲಿಯೂ ಎಣಿಸುವುದಿಲ್ಲ. ನರಕ ಸೇರದಂತಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಆದರೆ ಸ್ವರ್ಗ-ನರಕದ ತೀರ್ಮಾನವಾಗುವುದೇ ನಾವು ಬದುಕಿದ ರೀತಿನೀತಿಗಳಿಂದ. ಭಗವದ್ಗೀತೆಯ ಹದಿನಾರನೆಯ ಅಧ್ಯಾಯವಾದ ದೈವಾಸುರ ಸಂಪದ ವಿಭಾಗಯೋಗದಲ್ಲಿ ನರಕದ ದ್ವಾರಗಳಾವುವು? ಎಂಬುದಕ್ಕೆ ಶ್ರೀ ಹೀಗೆ ಕೃಷ್ಣ ಹೇಳುತ್ತಾನೆ.

ತ್ರಿವಿಧಂ ನರಕಸ್ಯೆàದಂ ದ್ವಾರಂ ನಾಶನಮಾತ್ಮನಃ|
ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತŒಯಂ ತ್ಯಜೇತ…|| ಶ್ಲೋಕ 21||

ಇದರರ್ಥ:  ನರಕಕ್ಕೆ ಮೂರು ಮುಖ್ಯವಾದ ದ್ವಾರಗಳಿವೆ. ಅವುಗಳೇ ಕಾಮ, ಕ್ರೋಧ ಮತ್ತು ಲೋಭ. ಆತ್ಮದ ಅವನತಿಗೆ ಕಾರಣವಾಗುವ ಇವನ್ನು ತ್ಯಜಿಸಿ ಬಾಳಿದರೆ ಮಾತ್ರ ಸ್ವರ್ಗ ಸೇರಲು ಸಾಧ್ಯ.

ಅಂದರೆ, ನರಕದ ಬಾಗಿಲು ಭೂಲೋಕದಲ್ಲಿಯೇ ಇದೆ ಎಂದಾಯಿತು. ಕಾಮ, ಕ್ರೋಧ ಮತ್ತು ಲೋಭಗಳೇ ಮುಖ್ಯವಾದ ಬಾಗಿಲುಗಳು ಎಂದಾದರೆ, ಅವುಗಳ ಕೀಲಿಕೈ ನಮ್ಮ ಬಳಿಯೇ ಇದೆ. ಹಾಗಾಗಿ, ನರಕದ ಬಾಗಿಲು ನಮಗೆ ಗೋಚರವೇ ಆಗದಂತೆ ನಾವು ಮಾಡಬಹುದಾಗಿದೆ. ಭೂಲೋಕದಲ್ಲಿದ್ದುಕೊಂಡೇ, ಅಂದರೆ, ನಮ್ಮ ಜೀವಿತಾವಧಿಯಲ್ಲಿದೆಯೇ ನಾವೇ ನರಕದ ಬಾಗಿಲನ್ನು ಮುಚ್ಚಿಬಿಡಬಹುದು.

Advertisement

ಆದರೆ, ಕಾಮ, ಕ್ರೋಧ ಮತ್ತು ಲೋಭವನ್ನು ಬಿಡುವುದು ಅಷ್ಟು ಸುಲಭವಲ್ಲ. ಮನುಷ್ಯನ ಜೀವನವನ್ನು ಹಾಳು ದಾರಿಗೆ ತಳ್ಳುವ ಸಂಗತಿಗಳೂ ಕೂಡ ಇವುಗಳೇ ಆಗಿವೆ. ಕಾಮ ಎಂಬುದು ಕ್ರೋಧಕ್ಕೂ ಲೋಭಕ್ಕೂ ಮೂಲ. ಕಾಮಾತುರಾಣಾಂ ನರುಚಿಂ ನ ವೇದಾ ನ ಲಜ್ಜಾ.. ಎಂಬ ಮಾತಿದೆ. ಕಾಮದ ಅಡಿಯಾಳಾದವನು ಎಂತಹ ಕೆಟ್ಟ ಕೆಲಸಕ್ಕೂ ಹೇಸುವುದಿಲ್ಲ. ಇನ್ನು, ಕ್ರೋಧವೂ ನಮ್ಮ ಜೀವನವನ್ನು ಅಡಿಮೇಲು ಮಾಡಿಬಿಡುತ್ತದೆ. ಕ್ರೋಧ ಅಥವಾ ಕೋಪದಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಅನಾಹುತಗಳೇ ಹೆಚ್ಚು. ಲೋಭತನದಿಂದ ನಾವು ಸಂಕುಚಿತರಾಗುತ್ತಲೇ ಹೋಗುತ್ತೇವೆ. ಯಾವುದು ನಮ್ಮದಲ್ಲವೋ ಅದೆಲ್ಲವೂ ನಮ್ಮದೆಂಬ ಭ್ರಮೆಯಲ್ಲಿಯೇ ಬದುಕುತ್ತಿರುತ್ತೇವೆ. ಇದರಿಂದ ಸ್ವಹಿತವೂ ಲೋಕಹಿತವೂ ಕೆಡುವುದಕ್ಕೆ ಕಾರಣರಾಗುತ್ತೇವೆ. ಶ್ರೀ ಕೃಷ್ಣ ಈ ಮೂರನ್ನು ತ್ಯಜಿಸುವುವ ಮೂಲಕ ಆತ್ಮವನ್ನು ಶುದ್ಧವಾಗಿಸಿಕೊಳ್ಳಬಹುದು ಎನ್ನುತ್ತಾನೆ. ಇವುಗಳೇ ನರಕದ ದ್ವಾರವಾಗಿರುವುದರಿಂದ ಇವುಗಳಿಂದಾಗಿ ನಾವು ಮಾಡುವ ಅನಾಚಾರಗಳು ನಮ್ಮನ್ನು ನೇರವಾಗಿ ನರಕದೆಡೆಗೆ ಒಯ್ಯುತ್ತವೆಂಬುದು ಇದರ ಒಳಾರ್ಥ.

ಕಾಮ, ಕ್ರೋಧ ಮತ್ತು ಲೋಭಗಳು ಜೀವನದಲ್ಲಿ ಅಗತ್ಯವಾದ ಸಂಗತಿಗಳೇ ಅಲ್ಲ. ಆದರೆ ಇವು ಮೂರನ್ನು ಬಿಟ್ಟವರು ಈ ಕಲಿಯುಗದಲ್ಲಿ ಸಿಗಲಾರರು. ಆದರೆ ಈ ಮೂರನ್ನು ಎಲ್ಲರೂ ತ್ಯಜಿಸಿ ಬದುಕಿದಲ್ಲಿ ಯಾರೂ ನರಕವನ್ನು ಸೇರಲಾರರು ಅಲ್ಲದೆ ಭುವಿಯೇ ಸ್ವರ್ಗವಾಗುತ್ತದೆ. ನಿಸ್ವಾರ್ಥದಿಂದ ಕೂಡಿದ ಬದುಕಿನ ಮಾರ್ಗಗಳನ್ನು ಅಳವಡಿಸಿಕೊಂಡಾಗ ಇವು ಮೂರನ್ನು ಸುಲಭವಾಗಿ ತ್ಯಜಿಸಬಹುದು.

ನರಕ ಸ್ವರ್ಗಗಳು ಬದುಕಿಗೆ ನೀತಿಯ ದಾರಿಯನ್ನು ಅನುಸರಿಸಿ ಎಂಬುದನ್ನು ಎಚ್ಚರಿಸಲು ಇರುವಂಥದ್ದು. ಆದರೆ ನಾವು ಅನೀತಿಯ ದಾರಿಯನ್ನೇ ತುಳಿಯತ್ತ ಸ್ವರ್ಗಕ್ಕಾಗಿ ಹಂಬಲಿಸುವುದರಲ್ಲಿ ಅರ್ಥವಿಲ್ಲ.

ವಿಷ್ಣುಭಟ್ಟ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next