ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಹೊಸದೇನಲ್ಲ. ಆದರೆ, ಹುಡುಗಿಯರೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಗಳ ಉದಾಹರಣೆ ಕೊಂಚ ಕಡಿಮೆ ಅನ್ನಬಹುದು. ಬಂದಿದ್ದರೂ, ಇತ್ತೀಚೆಗೆ ನಾಯಕಿಯರ ಚಿತ್ರಗಳು ಬಂದಿಲ್ಲ. ಆ ಸಾಲಿಗೆ ಈಗ “ವುಮೆನ್ಸ್ ಡೇ’ ಸೇರಿದೆ. ಇಲ್ಲಿ ಐವರು ನಾಯಕಿರಿದ್ದಾರೆ. ಹಾಗಂತ, ಅವರೆಲ್ಲರಿಗೂ ನಾಯಕರು ಇರುತ್ತಾರೆಯೇ ಎಂಬ ಪ್ರಶ್ನೆ ಎದುರಾಗೋದು ಸಹಜ. ಅದಕ್ಕೆ ಚಿತ್ರದಲ್ಲೇ ಉತ್ತರ ಸಿಗಲಿದೆ ಎಂಬುದು ಚಿತ್ರತಂಡದ ಹೇಳಿಕೆ.
ಅಂದಹಾಗೆ, ಚಿತ್ರೀಕರಣ ಪೂರ್ಣಗೊಂಡು, ಈಗ ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚೆಗೆ ಚಿತ್ರದ ಬಗ್ಗೆ ಮಾಹಿತಿ ಕೊಡಲೆಂದೇ ನಿರ್ದೇಶಕ ಈಶ, ತಮ್ಮ ತಂಡದೊಂದಿಗೆ ಆಗಮಿಸಿದ್ದರು. ಇದ್ದದ್ದು ಎಂಟು ಮಂದಿ, ಎಲ್ಲರೂ ಒಂದೊಂದು ನಿಮಿಷ ಮಾತನಾಡಿ ಮುಗಿಸಿದರು. ಕೇವಲ ಹತ್ತೇ ನಿಮಿಷದಲ್ಲಿ ಪತ್ರಿಕಾಗೋಷ್ಠಿಗೂ ತೆರೆಬಿತ್ತು. ಆದರೆ, ಹತ್ತು ನಿಮಿಷದ ಮಾತುಗಳನ್ನು ಕೇಳ್ಳೋಕೆ, ಪತ್ರಕರ್ತರು ಕಾದಿದ್ದು ಬರೋಬ್ಬರಿ ಎರಡೂವರೆ ತಾಸು!
ಮೊದಲು ಮಾತಿಗೆ ನಿಂತದದ್ದು ನಿರ್ದೇಶಕ ಈಶ, “ಚಿತ್ರದ ಶೀರ್ಷಿಕೆಗೂ ಮಹಿಳಾ ದಿನಾಚರಣೆಗೂ ಸಂಬಂಧವಿಲ್ಲ. ಆದರೆ, ಇದು ಹೆಣ್ಣುಮಕ್ಕಳ ಕುರಿತಾದ ಕಥೆ. ಐವರು ನಾಯಕಿಯರ ನಡುವೆ ನಡೆಯುವಂತಹ ಸನ್ನಿವೇಶಗಳೇ ಚಿತ್ರದ ಜೀವಾಳ. ಸಿಟಿಯಲ್ಲಿರುವ ಐವರು ಹೆಣ್ಣುಮಕ್ಕಳು ಹಳ್ಳಿಗೆ ಬಂದಾಗ ನಡೆಯುವಂತಹ ವಿಚಿತ್ರ ಅನುಭವಗಳು ಚಿತ್ರದ ಹೈಲೈಟ್. ಐವರು ನಾಯಕಿಯರು ಒಂದು ಘಟನೆಯಲ್ಲಿ ಸಿಲುಕುತ್ತಾರೆ. ಅದರಿಂದ ಹೇಗೆ ಹೊರಬರುತ್ತಾರೆ ಎಂಬುದು ಸಸ್ಪೆನ್ಸು. ಇನ್ನು, ಇದೊಂದು ಪುನರ್ಜನ್ಮದ ಕಥೆ. ಮೊದಲರ್ಧ ಒಂದು ರೀತಿಯ ಕಥೆ ಸಾಗಿದರೆ, ದ್ವಿತಿಯಾರ್ಧ ಇನ್ನೊಂದು ರೀತಿಯ ಕಥೆ ತೆರೆದುಕೊಳ್ಳುತ್ತದೆ. ಸಾಗರ ಸುತ್ತಮುತ್ತ ಚಿತ್ರೀಕರಣವಾಗಿದೆ ಎನ್ನುತ್ತಾರೆ ಅವರು.
ಆರ್.ಜಿ.ಗೌಡ ಈ ಚಿತ್ರದ ನಿರ್ಮಾಪಕರು. ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು “ಗೌರ್°ಮೆಂಟ್’ ಎಂಬ ಚಿತ್ರ ಮಾಡಿದ್ದರು. “ಪುನರ್ಜನ್ಮದ ಕಥೆಯಲ್ಲಿ ಸಾಕಷ್ಟು ತಿರುವುಗಳಿವೆ. ಸಾಯಿಕುಮಾರ್ ಇಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಎ’ ಸರ್ಟಿಫಿಕೆಟ್ ನೀಡಿದೆ. ಕಾರಣ, ಇಲ್ಲಿ ಹಾರರ್ ಸ್ಪರ್ಶವೂ ಇದೆ. ಆ ಕಾರಣದಿಂದ ಎ ಪ್ರಮಾಣ ಪತ್ರ ನೀಡಿದೆ’ ಎನ್ನುತ್ತಾರೆ ಅವರು.
ಚಿತ್ರದಲ್ಲಿ ನಟಿಸಿರುವ ಸನಿಹ, ಸುಹಾನ, ಸ್ನೇಹಾ ನಾಯರ್ ತಮ್ಮ ಪಾತ್ರಗಳ ಕುರಿತು ಮಾತನಾಡಿದರು. ಎಲ್ಲರಿಗೂ ಈ ಚಿತ್ರ ಹೊಸ ಅನುಭವ ಕಟ್ಟಿಕೊಟ್ಟಿದೆ ಎಂಬುದು ಅವರ ಮಾತು. ಚಿತ್ರದಲ್ಲಿ ನಟಿಸಿರುವ ರಿಪ್ಪು ರಾಮ್ ಸಿಂಗ್ ಕೂಡ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡಿದ್ದು, ಟಪ್ಪಾಂಗುಚ್ಚಿ, ಕ್ಲಾಸಿಕಲ್ ಹಾಡುಗಳು ಇಲ್ಲಿವೆ. ಕನ್ನಡ ಗಾಯಕರೇ ಇಲ್ಲಿ ಧ್ವನಿಗೂಡಿಸಿದ್ದಾರೆ. ಆನಂದಪ್ರಿಯ, ಮುನಿಸ್ವಾಮಿ ಗೀತೆ ರಚಿಸಿದ್ದಾರೆ ಅಂತ ಹೇಳಿಕೊಳ್ಳುವ ಹೊತ್ತಿಗೆ ಪತ್ರಿಕಾಗೋಷ್ಠಿಗೆ ತೆರೆಬಿತ್ತು.