Advertisement
ನಿತ್ಯ ಜನಸಂದಣಿ ಇರುವ ಮತ್ತು ಬೆಳೆಯುತ್ತಿರುವ ಕುಕ್ಕೆ ಕ್ಷೇತ್ರಕ್ಕೆ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಆಸುಪಾಸಿನಲ್ಲಿ ಹೆಚ್ಚಿನ ಸಂಖ್ಯೆಯ ಜನವಸತಿ ಪ್ರದೇಶಗಳೂ ಇವೆ. ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಮೊದಲು ಬರುವುದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ!
ನಗರದಿಂದ 3 ಕಿ.ಮೀ. ದೂರದ ಪರ್ವತಮುಖಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. 1997ರಲ್ಲಿ ಇಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ದಾಖಲೆಯಲ್ಲಿ 4.2 ಎಕ್ರೆ ಜಾಗವಿರುವುದು ಕಂಡು ಬರುತ್ತಿದೆ. ಇವು ಕೆಲ ಖಾಸಗಿ ವ್ಯಕ್ತಿಗಳ ಒತ್ತುವರಿಯಿಂದ ಅವರ ಪಾಲಾಗಿ ಈಗ 3 ಎಕ್ರೆ ಜಾಗ ಉಳಿದಿದೆ. ಕಾಯಿಲೆಗಳು ಬಂದರೆ, ಅವಘಡಗಳು ಸಂಭವಿಸಿದರೆ ರೋಗಿಗಳನ್ನು ಇಲ್ಲಿಗೆ ಕರೆತಂದರೂ ಅವರಿಗೆ ಬೇಕಾದ ಚಿಕಿತ್ಸೆ ಸಿಗುವುದಿಲ್ಲ. ಮತ್ತೆ ಬೇರೆ ಆಸ್ಪತ್ರೆಗೆ ಸಾಗಿಸಬೇಕು. ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ. ಇತರ ಸಿಬಂದಿ ಕೊರತೆಯೂ ಇದೆ. ತತ್‌ಕ್ಷಣಕ್ಕೆ ಚಿಕಿತ್ಸೆ ದೊರಕಲು ಬೇಕಿರುವ ವ್ಯವಸ್ಥೆಗಳಿಲ್ಲ. ಔಷಧ ದಾಸ್ತಾನಿದ್ದರೂ 6 ಬೆಡ್ ವ್ಯವಸ್ಥೆ ಮಾತ್ರವಿದ್ದು, ಈಗ ಇಬ್ಬರಷ್ಟೇ ಒಳರೋಗಿಗಳಾಗಿ ದಾಖಲಾಗಲು ಸಾಧ್ಯವಿದೆ. ಹೆರಿಗೆ ಇತ್ಯಾದಿಗಳಿಗೆ ತಂಗುವ ವ್ಯವಸ್ಥೆ ಇಲ್ಲಿಲ್ಲ. ರಾತ್ರಿ ಹೊತ್ತಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಪ್ರಾಣದ ಮೇಲಿನ ಆಸೆ ಬಿಡಬೇಕಷ್ಟೇ. ಏಕೆಂದರೆ, ಹೆಚ್ಚಿನ ಚಿಕಿತ್ಸೆಗೆ ಹಾಗೂ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಬೇರೆ ಊರಿಗೆ ಸಾಗಿಸಲು ಹಲವು ತಾಸುಗಳು ಹಿಡಿಯುತ್ತಿವೆ.
Related Articles
ಆಸ್ಪತ್ರೆಗೆ ಪೂರ್ಣಾಕಾಲಿಕ ವೈದ್ಯಾಧಿಕಾರಿ ಇದ್ದರೂ ಅವರಿಗೆ ಹೆಚ್ಚುವರಿಯಾಗಿ ಎರಡು ದಿನ ಕಡಬ ಆಸ್ಪತ್ರೆ ಜವಾಬ್ದಾರಿ ಇದೆ. ಸ್ಟಾಫ್ ನರ್ಸ್-1, ಹಿರಿಯ ಮಹಿಳಾ ಸಹಾಯಕಿ- 1, ಕಿರಿಯ ಆರೋಗ್ಯ ಸಹಾಯಕಿ-7, ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಗ್ರೂಪ್ ಡಿ ಸಿಬಂದಿ-1 ಹುದ್ದೆ ಕರ್ತವ್ಯದಲ್ಲಿದ್ದಾರೆ. ಪುರುಷ ಸಹಾಯಕರ 2 ಹುದ್ದೆಗಳು ಖಾಲಿ ಇವೆ. ಇತ್ತೀಚೆಗೆ ಡಿ ಗ್ರೂಪ್ ಹುದ್ದೆಯಲ್ಲಿದ್ದವರು ನಿವೃತ್ತರಾಗಿದ್ದು, ಅದೀಗ ಖಾಲಿ ಇದೆ. ಆಸ್ಪತ್ರೆಗೆ 108 ಆ್ಯಂಬುಲೆನ್ಸ್ ಅಲ್ಲದೆ ಪ್ರತ್ಯೇಕ ಆ್ಯಂಬುಲೆನ್ಸ್‌ನ ವ್ಯವಸ್ಥೆಯೂ ಇದೆ.
Advertisement
ಸುಬ್ರಹ್ಮಣ್ಯ, ಯೇನೆಕಲ್ಲು, ಬಳ್ಪ, ಕೇನ್ಯ, ಐನೆಕಿದು, ಹರಿಹರ, ಬಾಳುಗೋಡು ಸಹಿತ 7 ಉಪಕೇಂದ್ರಗಳಿವೆ. ಅದರಲ್ಲಿ ಐನೆಕಿದು, ಹರಿಹರ, ಬಾಳುಗೋಡುವಿನಲ್ಲಿ ಕಟ್ಟಡ ರಚಿಸಲು ಜಾಗ ಗೊತ್ತು ಮಾಡಲಾಗಿದ್ದರೂ ಕಟ್ಟಡ ನಿರ್ಮಾಣವಾಗಿಲ್ಲ. ಹೋಬಳಿ ಕೇಂದ್ರ ಪಂಜದಲ್ಲಿ ಸಮುದಾಯ ಕೇಂದ್ರವಿದೆ.
ಜನತೆಯಿಂದ ಆಸ್ಪತ್ರೆ ದೂರಮೊದಲು ತೀರಾ ಹಿಂದುಳಿದ ಪ್ರದೇಶವಾದ ಈ ನಗರ ಇತ್ತೀಚೆಗೆ ಅಭಿವೃದ್ಧಿ ಹೊಂದುತ್ತಿದೆ. ಹೃದಯ ಭಾಗದಲ್ಲಿದ್ದ ಆರೋಗ್ಯ ಕೇಂದ್ರವನ್ನು ಪೇಟೆಯಿಂದ 3 ಕಿ.ಮೀ. ದೂರದ ಪರ್ವತಮುಖೀ ಎಂಬಲ್ಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿಗೆ ರೋಗಿಗಳು ಬರುತ್ತಿಲ್ಲ. ಈ ಆಸ್ಪತ್ರೆ ಹೊರತುಪಡಿಸಿ ಖಾಸಗಿ ವೈದ್ಯಕೀಯ ಕೇಂದ್ರವೊಂದು ಇಲ್ಲಿದೆ. ನಾಗರಿಕರ ಮೌನ
ದೇಗುಲದಿಂದ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ಆದಾಯವಿದೆ. ಸರಕಾರವೂ ಮಠ ಮಂದಿರಗಳಿಗೆ ಕೋಟಿಗಟ್ಟಲೆ ಹಣ ನೀಡುತ್ತದೆ. ಆದರೆ ಧಾರ್ಮಿಕ ಕೇಂದ್ರಗಳ ಜನರ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ನಗರದಲ್ಲಿ 24 ಗಂಟೆಗಳ ಸೇವೆ ನೀಡುವ ಚಿಕಿತ್ಸಾ ವ್ಯವಸ್ಥೆಯ ಅಗತ್ಯವಿದೆ. ಆಧುನಿಕ ಉಪಕರಣ, ಸೌಕರ್ಯಗಳಿರುವ ಆಸ್ಪತ್ರೆ ಬೇಕಿದೆ. ಈ ಬಗ್ಗೆ ಸಾರ್ವಜನಿಕರೂ ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ. ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ
ಆಸ್ಪತ್ರೆಯ ಕೆಲವೊಂದು ಕೊರತೆ ನಿವಾರಿಸಲು ಇಲಾಖೆ ಮುಂದಾಗಿದೆ. 20 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ, ವಾರ್ಡ್ ನಿರ್ಮಾಣ ಇನ್ನಿತರ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಮೇಲ್ದರ್ಜೆಗೆ ಏರಿಸುವ ವಿಚಾರ ಸರಕಾರ ಮಟ್ಟದಲ್ಲಿ ನಿರ್ಧರಿಸುವಂಥಹದ್ದು. ಲಭ್ಯ ಸವಲತ್ತು ಬಳಸಿ ಉತ್ತಮ ಸೇವೆ ನೀಡಲು ಸಿಬಂದಿ ಶ್ರಮಿಸುತ್ತಿದ್ದಾರೆ.
–ಡಾ| ಸುಬ್ರಹ್ಮಣ್ಯ,
ಸುಳ್ಯ ತಾಲೂಕು ವೈದ್ಯಾಧಿಕಾರಿ ಬಾಲಕೃಷ್ಣ ಭೀಮಗುಳಿ