ಹೊನ್ನಾವರ: ಹೊನ್ನಾವರ-ಕುಮಟಾ ಮಧ್ಯೆ ಸಹ್ಯಾದ್ರಿ ಮಡಿಲಲ್ಲಿರುವ ಚಂದಾವರದ ಸಂತ್ ಫ್ರಾನ್ಸಿಸ್ ಚರ್ಚಿನ ವಾರ್ಷಿಕ ಹಬ್ಬ (ಫೆಸ್ಟ್) ಡಿ. 3ರಂದು ನಡೆಯಲಿದೆ. ಅಂದು ನಾಡಿನ ನಾನಾಭಾಗದಿಂದ ಬಂದ ಸರ್ವಧರ್ಮಿಯರು ಮೊಂಬತ್ತಿ ಬೆಳಗಿ ಪ್ರಾರ್ಥಿಸುತ್ತಾರೆ. ಪ್ರಾರ್ಥನೆ ಈಡೇರಿದ್ದಕ್ಕೆ ನಮಿಸುತ್ತಾರೆ. ಗೆಳೆಯರ, ಬಂಧುಗಳ ಮನೆಯಲ್ಲಿ ಉಳಿದು, ಉಂಡು ಸಂತೋಷ ಹಂಚಿಕೊಳ್ಳುತ್ತಾರೆ.
ಜಗವೆಲ್ಲ ಗೆದ್ದು ತನ್ನ ಆತ್ಮವನ್ನು ಕಳೆದುಕೊಂಡರೆ ಅದರಿಂದ ಏನು ಲಾಭ ಎಂಬ ಏಸುಕ್ರಿಸ್ತರ ವಾಣಿಯಿಂದ ಆಕರ್ಷಿತರಾದ ಸ್ಪೇನ್ ದೇಶದ ಸಂತ್ ಫ್ರಾನ್ಸಿಸ್ ಝೇವಿಯರ್ ಅಲ್ಲಿ ತತ್ವ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು. ಲೌಕಿಕ ಬದುಕಿಗೆ ಬೆನ್ನುಹಾಕಿ ಮನುಕುಲದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಅವರು 11 ಸಾವಿರ ಮೈಲಿ ದೂರ ಪ್ರಯಾಣಮಾಡಿ ಗೋವೆಗೆ ಬಂದಿದ್ದರು.
ಸಂತ್ ಫ್ರಾನ್ಸಿಸ್ ಝೇವಿಯರ್ ಹಡಗಿನಲ್ಲಿ ಚೀನಾಕ್ಕೆ ಹೊರಟಿದ್ದಾ ಮಾಕ್ವಾ ಎಂಬ ದ್ವೀಪದಲ್ಲಿ ಕಠಿಣ ಜ್ವರ ಪೀಡಿತರಾಗಿ 1552ರಲ್ಲಿ ದೈವಾದೀನರಾದರು. ಹಡಗಿನ ನಾವಿಕರು ಅಲ್ಲಿಯೇ ಅವರ ದೇಹವನ್ನು ಸಮಾಧಿ ಮಾಡಿದ್ದರು. ಕೆಲವು ತಿಂಗಳ ನಂತರ ನಾವಿಕರು ಮರಳಿ ಬರುವಾಗ ದ್ವೀಪದಲ್ಲಿ ಹಡಗು ನಿಲ್ಲಿಸಿ ಸಮಾಧಿಯನ್ನು ತೆರೆದಾಗ ಅವರ ಪಾರ್ಥಿವ ಶರೀರ ಯಥಾಸ್ಥಿತಿ ಇತ್ತು. ಅದನ್ನು ಮೇಲೆತ್ತಿ ಗೋವಾಕ್ಕೆ ತಂದ ನಾಗರಿಕರು ಬೋಮ್ ಜೀಸಸ್ ದೇವಾಲಯಕ್ಕೆ ಒಪ್ಪಿಸಿದ್ದರು. ಅಲ್ಲಿ ಅವರ ಪಾರ್ಥಿವ ಶರೀರ ಇಂದೂ ಇದೆ. ಅವರ ಒಂದು ಉಗುರು ಚಂದಾವರ ಚರ್ಚಿನಲ್ಲಿದೆ.
ಸಂತ ಫ್ರಾನ್ಸಿಸ್ ಝೇವಿಯರ್ ಅವರನ್ನು ಪ್ರಾರ್ಥಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಗೋವಾದಲ್ಲಿ ನಡೆಯುವ ಹಬ್ಬಕ್ಕೆ ಜಗತ್ತಿನ ನಾನಾಭಾಗದ ಜನ ಸೇರುತ್ತಾರೆ. 1678ರಲ್ಲಿ ಚಂದಾವರದಲ್ಲಿ ಕ್ರೈಸ್ತ ದೇವಾಲಯ ಇತ್ತು. ಸಂತ್ ಫ್ರಾನ್ಸಿಸ್ ಝೇವಿಯರ್ ಅವರಲ್ಲಿ ಪ್ರಾರ್ಥನೆಮಾಡಿಕೊಂಡ ಮಿರ್ಜಾನಿನ ಮೀನುಗಾರರೊಬ್ಬರಿಗೆ ಹೇರಳ ಮೀನು ದೊರಕಿತ್ತು. ಆತನ ಕುಟುಂಬ ಅಭಿವೃದ್ಧಿಯಾಯಿತು. ಆತ ಸಂತರ ಮೂರ್ತಿಯನ್ನು ಚಂದಾವರ ಚರ್ಚ್‌ಗೆ ನೀಡಿದ್ದ.
1934ರಲ್ಲಿ ಗೋವಾ ಚರ್ಚ್‌ನಿಂದ ಸಂತ ಫ್ರಾನ್ಸಿಸ್ ಝೇವಿಯರ್ ಅವರ ಉಗುರನ್ನು ಚಂದಾವರ ಚರ್ಚ್‌ಗೆ ತರಲಾಯಿತು. ಅದನ್ನು ಈಗಲೂ ಕರಂಡಕದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಆದ್ದರಿಂದ ಚಂದಾವರ ಚರ್ಚ್‌ಗೆ ಇಷ್ಟಾರ್ಥ ಈಡೇರಿಸುವ ಚರ್ಚ್ ಎಂಬ ಹೆಸರು ಬಂದಿದ್ದು ಸಮಾಜದ ನಾನಾಸ್ತರದ, ಜಾತಿ ಧರ್ಮಗಳ ಜನ ಬಂದು, ಮೊಂಬತ್ತಿ ಬೆಳಗಿ ಹೋಗುತ್ತಾರೆ. ಫೆಸ್ಟ್‌ಗಾಗಿ ವಿಶೇಷ ಬಸ್ಸುಗಳನ್ನು ಕುಮಟಾ- ಹೊನ್ನಾವರದಿಂದ ಚಂದಾವರಕ್ಕೆ ಬಿಡಲಾಗುತ್ತದೆ. ಸೋಮವಾರ ದಿನವಿಡೀ ಚಂದಾವರದಲ್ಲಿ ಸಂಭ್ರಮ, ರಾತ್ರಿ ಮನರಂಜನೆಯಿದೆ.
ಗಡ್ಡೆ ಗೆಣಸು ಮಾರಾಟ ಜೋರು
ಚಂದಾವರದಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಹಿಂದು ಸಹಿತ ಎಲ್ಲ ಧರ್ಮ, ಜಾತಿಯವರಿದ್ದಾರೆ. ಈ ಹಬ್ಬವನ್ನು ಅವರು ಬಹುಪಾಲು ಒಟ್ಟಾಗಿಯೇ ಆಚರಿಸುತ್ತಾರೆ. ಚಂದಾವರ ಸೀಮೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರು ಈ ಪ್ರದೇಶದಲ್ಲಿ ಮಾತ್ರ ಬೆಳೆಯುವ ಕೆಸುವು, ಗೆಣಸು, ಗುಟ್ಟಗೆಣಸು, ಮತ್ತು ಹಲವಾರು ಜಾತಿಯ ಗಡ್ಡೆ, ಗೆಣಸುಗಳನ್ನು ಅಂದುಮಾತ್ರ ಮಾರಾಟಕ್ಕೆ ತರುತ್ತಾರೆ. ಹೊನ್ನಾವರದ ಮಲಬಾರ ಬೇಕರಿಯವರು ಚಂದಾವರ ಪೇಸ್ತಿನ ನೆನಪಿಗಾಗಿ ವಿಶೇಷ ರೀತಿಯ ಬಿಸ್ಕತ್ತುಗಳನ್ನು ತಯಾರಿಸುತ್ತಾರೆ. ಬೇರೆಲ್ಲೂ, ಬೇರಾವ ದಿನವೂ ಈ ಗಡ್ಡೆ, ಗೆಣಸುಗಳು, ಬಿಸ್ಕತ್ತುಗಳು ಮಾರಾಟಕ್ಕೆ ಸಿಗುವುದಿಲ್ಲ.
ಜೀಯು ಹೊನ್ನಾವರ