Advertisement

ಅಭಿವೃದ್ಧಿ ಹಣ ವಾಪಸ್ಸಾದ್ರೂ ಕೇಳ್ಳೋರಿಲ್ಲ ?

03:29 PM Nov 27, 2019 | Naveen |

„ಜೀಯು, ಹೊನ್ನಾವರ
ಹೊನ್ನಾವರ:
ಇಲ್ಲಿ ನೂರಾರು ಎಕರೆ ಜಮೀನನ್ನು ಆಂಧ್ರದಿಂದ ಬಂದವರೊಬ್ಬರು ಬಂದರು ಅಭಿವೃದ್ಧಿ ಹೆಸರಿನಲ್ಲಿ ಪಡೆದಿದ್ದಾರೆ. ಪರಂಪರೆ ಮತ್ತು ಯಾಂತ್ರೀಕೃತ ಮೀನುಗಾರರು ತಮ್ಮ ಬೋಟ್‌ ನೊಂದಿಗೆ ಹೋಗಿಬರುವ ಸಮುದ್ರ ಬಾಯಿ (ಸೀ ಮೌಥ್‌) ಸಹ ಇವರ ಪಾಲಾಗಿದೆ. ಇದರ ಅಭಿವೃದ್ಧಿಗೆ ಬಂದ ದುಡ್ಡು ವಾಪಸ್ಸಾಗಿದೆ. ಒಣಮೀನು ವ್ಯವಹಾರ ನಿಂತು ಹೋಗಿದೆ. ಬಂದರು ಅಭಿವೃದ್ಧಿ ಮಾತ್ರ ಆರಂಭವಾಗಿಲ್ಲ ಅನ್ನುತ್ತಾರೆ ಮೀನುಗಾರರು.

Advertisement

ರಾಮತೀರ್ಥ ನಗರದ ಪ್ರತಿಷ್ಠೆ ಸಂಕೇತವಾಗಿತ್ತು. ಪ್ರಾಚ್ಯವಸ್ತು ಇಲಾಖೆಯ ಪರವಾನಿಗೆ ಇಲ್ಲದೇ ಸುತ್ತಮುತ್ತಲಿನ ಜಾಗ ಮಾರಾಟವಾಗಿ ಹತ್ತೆಂಟು ಕೊಳವೆ ಬಾವಿ ಕೊರೆದು ರಾಮತೀರ್ಥ ಒಣಗುವಂತಾಗಿದೆ. ಲಕ್ಷ್ಮಣ ತೀರ್ಥ ಪತ್ತೆಯೇ ಇಲ್ಲದಂತಾಗಿದೆ. ವಾಹನ ನಿಲುಗಡೆ ಜಾಗದಲ್ಲೆಲ್ಲಾ ಕಟ್ಟಡಗಳೆದ್ದು ವಾಹನ ನಿಲ್ಲಿಸಲು ಅಧಿಕೃತ ಸ್ಥಳವೇ ಇಲ್ಲದಾಗಿದೆ. ಉಪ ಅಂಚೆಕಚೇರಿಗಳೆಲ್ಲಾ ಮುಚ್ಚಿಹೋಗಿ 10ಕಿಮೀ ಸುತ್ತಳತೆ ನಗರಕ್ಕೆ ಒಂದೇ ಅಂಚೆ ಕಚೇರಿ ಇದ್ದು ಚತುಷ್ಪಥದಿಂದ ಮುಕ್ಕಾಗಿ ಕೂತಿದೆ. ಮೇಲ್‌ ಸೇತುವೆಯ ಕೂಗು ಹಾಗೇ ಉಳಿದುಕೊಂಡಿದೆ. ನಗರದ ಮಧ್ಯೆ, ಆಸುಪಾಸು ಇರುವ ಭೂಮಿ ಮಧ್ಯವರ್ತಿಗಳ ಪಾಲಾಗಿದೆ.

ನಗರದಲ್ಲಿ ಗುಂಟೆಗೆ 50ಲಕ್ಷ, ಆಸುಪಾಸಿನಲ್ಲಿ ಗುಂಟೆಗೆ 25ಲಕ್ಷ. ಪ್ರಾಮಾಣಿಕವಾಗಿ ದುಡಿಯುವವ ಮೂರು ತಲೆಮಾರು ಕಷ್ಟಪಟ್ಟರೂ ಮನೆಕಟ್ಟಲಾಗದು. ಬಂದರು ಪ್ರದೇಶದ ಬಹುಪಾಲು ಮತ್ತು ರಸ್ತೆಬದಿಯೆಲ್ಲಾ ಗೂಡಂಗಡಿ ಪಾಲಾಗಿದೆ. ಇವರು ಮಾರುವ ಆಹಾರದ ಸುರಕ್ಷತೆ ದೃಢಪಡಿಸುವವರಿಲ್ಲ. ಪಪಂ ಸೊಳ್ಳೆಯ ಮದ್ದು ಹೊಡೆಯಲು, ನಾಯಿ ನಿಯಂತ್ರಿಸಲು ದಶಕಗಳು ಕಳೆದುಹೋದವು. ಸೊಳ್ಳೆ ಕಚ್ಚುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರ ಪ್ರಕಾರ ನಿತ್ಯ ಬರುವ 25 ಜ್ವರ ಪೀಡಿತರಲ್ಲಿ 15ಜನಕ್ಕೆ ಡೆಂಘೀ ಇರುತ್ತದೆ. ನಾವು ಹೇಳುವುದಿಲ್ಲ, ಔಷಧ ಕೊಡುತ್ತೇವೆ. ನಶೀಬವಂತರು ಇಲ್ಲೇ ಗುಣವಾಗುತ್ತಾರೆ, ಇಲ್ಲ ಮಣಿಪಾಲಕ್ಕೆ ಹೋಗಿಬರುತ್ತಾರೆ. ಡಾಕ್ಟರೂ ಸತ್ಯಹೇಳುವಂತಿಲ್ಲ. ವಾಹನ ಸಂಚಾರ ನಿಯಂತ್ರಿಸುವ ಪೊಲೀಸರು ಎಲ್ಲೂ ಕಾಣುವುದಿಲ್ಲ. ಹಾದಿಬದಿಗೆ ಬೊಲೆರೋ, ಟೆಂಪೋ ಸಾಲು. ಎಡಬಲ ಸಂಬಂಧವಿಲ್ಲದೇ ನುಗ್ಗಿ ಮುಂದೆ ಹೋದವನೇ ಸವಾರ ಶೂರ.

ಶರಾವತಿ ಒಡಲು ಬರಿದಾಗುತ್ತಿವೆ. ಶರಾವತಿ ಎಡಬಲದವರೇ ಅನಧಿಕೃತ ರೇತಿ ಸಾಗಾಣಿಕೆ ಹೀರೋಗಳು. ಶರಾವತಿ ತೀರದಲ್ಲಿ ಬಿಕಾಸ್‌ ತಾರಿ ಮತ್ತು ಬಂದರು ಎರಡೇ ತಂಗುದಾಣಗಳಿದ್ದವು. ಈಗ ಎಡಬಲದಂಡೆಗಳಲ್ಲಿ 50ಕ್ಕೂ ಹೆಚ್ಚು ಬಂದರುಗಳು ರೇತಿ ಸಾಗಾಣಿಕೆಗೆ ಅನುಕೂಲ ಮಾಡಿಕೊಡುತ್ತವೆ. ಹೊಳೆಬದಿಗೆ ಸ್ವಂತ ಭೂಮಿಯಲ್ಲಿ ರಸ್ತೆಮಾಡಲು ಕೊಟ್ಟವನಿಗೆ ಮಗಳ ಮದುವೆಗೆ ಸಾಕಾಗುವಷ್ಟು ದುಡ್ಡು. ಶರಾವತಿ ಎಡಬಲದಂಡೆಯ 35ಕಿಮೀ ವ್ಯಾಪ್ತಿಯಲ್ಲಿ ಇರುವ ನೂರಾರು ಮನೆಗಳ ಶೌಚಾಲಯವೂ ಶರಾವತಿ ಕೊಳಕು ಮಾಡುತ್ತಿವೆ.
ನಗರದ ಹೋಟೇಲ್‌ಗ‌ಳು, ಆಸ್ಪತ್ರೆಗಳು ಕೈಜೋಡಿಸಿವೆ. ಶರಾವತಿ ರಕ್ಷಿಸಿ ಅಭಿಯಾನದವರಿಗೆ ಇದು ಗೊತ್ತಿಲ್ಲವೇ ? ಅರಸಾಮಿ ಕೆರೆ, ಶೆಟ್ಟಿಕೆರೆ ಕುರಿತು ತುಂಬ ಮಾತುಗಳು ಕೇಳಿ ಬಂದವು. ಇವುಗಳ ನೀರು ಮುಟ್ಟಿದರೆ ಕೆರೆತ ಆರಂಭವಾಗುತ್ತದೆ.

Advertisement

ಬಸ್‌ ಸ್ಟ್ಯಾಂಡ್ ಎದುರು ವಾಕರಿಕೆ ಬರುವಂತೆ ಕೆಟ್ಟ ವಾಸನೆ. ಒಂದು ಬಸ್‌ಸ್ಟ್ಯಾಂಡ್ ಇದ್ದರೆ 5 ಟೆಂಪೋ ಸ್ಟ್ಯಾಂಡ್ ಗಳಿವೆ. ಇವು ಶರಾವತಿ ಸರ್ಕಲ್‌ನಲ್ಲಿ ಪೈಪೋಟಿ ನಡೆಸಿ ಬಸ್ಸುಗಳು ಸುಲಭದಲ್ಲಿ ಮುಂದೆ ಹೋಗಲು ಬಿಡುವುದಿಲ್ಲ. ಭಟ್ಕಳದಿಂದ ಬಂದ ಟೆಂಪೋಗಳು ನೇರ ಸರ್ಕಲ್‌ ಮಧ್ಯೆ ಬಂದು ನಿಂತು ಜನರನ್ನು ಇಳಿಸಿ, ಕುಮಟಾ ಟೆಂಪೋ ಹತ್ತಿಸುತ್ತವೆ. ಜನ ದಾಟಿ ಹೋಗಲು ಪರದಾಡಬೇಕು. ಸುತ್ತಲೂ ಇರುವ ನಾಲ್ಕು ಶಿಕ್ಷಣ ಸಂಸ್ಥೆಗಳಿಗೆ ಸಾವಿರಾರು ವಿದ್ಯಾರ್ಥಿಗಳು ಸುತ್ತಿಬಳಸಿ ಹೋಗುತ್ತಾರೆ. ಕೋರ್ಟ್‌ ಮಾರ್ಗದಲ್ಲಿ
ಟೆಂಪೋಗಳು ಬದಿಗೆ ನಿಂತು ಬಸ್‌ಗೆ ಮಾತ್ರ ಸ್ಥಳ ನೀಡುತ್ತವೆ. ಮಕ್ಕಳಿಗೆ ನಿತ್ಯ ಅಪಾಯ ಎದುರಾಗುತ್ತದೆ.

ಒಳರಸ್ತೆಗಳೆಲ್ಲಾ ಹೊಂಡ ಬಿದ್ದಿವೆ, ಒಳಚರಂಡಿ ಕಾಮಗಾರಿ ಮುಗಿದಿಲ್ಲ. ಮಿನಿವಿಧಾನಸೌಧ ಫರ್ನಿಚರ್‌ಗೆ, ಉದ್ಘಾಟಕರಿಗೆ ಕಾದುಕೂತಿದೆ. ಪ್ರಭಾತನಗರದಲ್ಲಿ ಹಗಲು-ರಾತ್ರಿ ಬೀಡಾಡಿ ದನಗಳು ಅಟ್ಟಿಸಿಕೊಂಡು ಬರುತ್ತವೆ. ಪ್ರಭಾತನಗರದ ಯಾವ ಉಪರಸ್ತೆಗೂ ನಾಮಫಲಕವಿಲ್ಲ. ಹಗಲು ದಿಕ್ಕು ತಪ್ಪುತ್ತದೆ. ಸಾರ್ವಜನಿಕ ಶೌಚಾಲಯಗಳು ನಾರುತ್ತವೆ.

ಮೂರು ದಶಕದ ಹಿಂದೆ ಹೊನ್ನಾವರ ಪಪಂ ರಾಜ್ಯಕ್ಕೆ ಮಾದರಿಯಾಗಿತ್ತು. ನಗರದಲ್ಲಿ ಸುಂದರವಾದ ಒಳ್ಳೆಯ ಸ್ಥಳಬೇಕಾದರೆ ಸ್ಮಶಾನಕ್ಕೆ ಹೋಗಬೇಕು. ಅಲ್ಲಿ ರಾಜ್ಯಕ್ಕೆ ಮಾದರಿಯ ವ್ಯವಸ್ಥೆ ಮಾಡಲಾಗಿದೆ. ನಗರ ನರಕವಾಗುವ ಮೊದಲು ಜನ ಆಲೋಚಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next