Advertisement

ರೈತರು-ಸೈನಿಕರು ಎರಡು ಕಣ್ಣಿದ್ದಂತೆ

11:35 AM Mar 06, 2020 | |

ಹೊನ್ನಾಳಿ: ರೈತರು ಹಾಗೂ ಸೈನಿಕರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದು ಚಲನಚಿತ್ರ ನಟ ಶಿವರಾಜಕುಮಾರ್‌ ಹೇಳಿದರು.

Advertisement

ಒಡೆಯರ್‌ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಹಿರೇಕಲ್ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೃಷಿಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ರೈತರು ಯಾವುದೇ ಕಾರಣಕ್ಕೂ ಧೃತಿಗೆಟ್ಟು ಪ್ರಾಣಕ್ಕೆ ಕುತ್ತು ತಂದುಕೊಳ್ಳಬಾರದು. ಸಾವು ಎಲ್ಲದಕ್ಕೂ ಪರಿಹಾರವಲ್ಲ ಎಂದು ಧೈರ್ಯ ಹೇಳಿದರು.

ಅಪ್ಪಾಜಿ 70ರ ದಶಕದಲ್ಲಿ ಬಂಗಾರದ ಮನುಷ್ಯ ಚಿತ್ರದಲ್ಲಿ ನಟಿಸಿ ವಿದ್ಯಾವಂತರು ಹಳ್ಳಿಕಡೆ ಮುಖ ಮಾಡುವಂತೆ ಮಾಡಿದ್ದರು. ಕೃಷಿ ನಂಬಿ ಬದುಕಬೇಕೆಂದು ಹೇಳಿದ್ದರೆಂದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಆರಂಭದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಹೇಗೆ ಆಯೋಜಿಸುವುದು ಎಂದು ಚಿಂತಾಕ್ರಾಂತನಾಗಿದ್ದೆ. ಆದರೆ ಇಲ್ಲಿ ಸೇರಿರುವ ಜನಸ್ತೋಮ ನೋಡಿದರೆ ಇದೊಂದು ಅದ್ಭುತ ಕಾರ್ಯಕ್ರಮವಾಗಿದೆ ಎಂದು ಭಾವಿಸುತ್ತೇನೆ ಎಂದರು.

ಹಿಂದಿನ ಲಿಂ| ಗುರುಗಳಾದ ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಬಗ್ಗೆ ನಮ್ಮ ತಂದೆಯವರಿಗೆ ಅಪಾರ ಗೌರವ ಇದೆ. ಗುರುಗಳ ಆಶಯದಂತೆ ಈಗಿನ ಗುರುಗಳು ನಡೆದುಕೊಂಡು ಕೃಷಿಮೇಳ ಹಮ್ಮಿಕೊಂಡಿದ್ದಾರೆ ಎಂದರು. ಹಿರೇಕಲ್ಮಠ ಆಧ್ಯಾತ್ಮಿಕ ನೆಲೆಬೀಡಾಗಿ ಇಂದು ದಕ್ಷಿಣ ಕಾಶಿ ಎನಿಸಿಕೊಂಡಿದೆ. ರೈತರು ಪ್ರಾತ್ಯಕ್ಷಿಕೆ ಸೇರಿದಂತೆ ಇತರೆ ಎಲ್ಲಾ ವಿಚಾರಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಎಲ್ಲರ ಸಹಕಾರದಿಂದ ರಾಜ್ಯಮಟ್ಟದ ಕೃಷಿಮೇಳ ಯಶಸ್ಸು ಕಾಣಲಿ ಎನ್ನುವುದೇ ನಮ್ಮ ಗುರಿ. ಪ್ರತಿ ವರ್ಷ ಕೃಷಿಮೇಳ ಹಮ್ಮಿಕೊಂಡು ರೈತರ ಬದುಕಿಗೆ ಸಹಾಯ ಮಾಡುವ ಆಶಯ ನಮ್ಮದಾಗಿದೆ ಎಂದರು.

Advertisement

ಬೀದರ್‌ ಸಂಸದ ಭಗವಂತ ಖೂಬಾ ಮಾತನಾಡಿ, ರಾಜ್ಯಮಟ್ಟದ ಕೃಷಿಮೇಳ ಆಯೋಜಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಇಂತಹ ಮೆಗಾ ಮೇಳ ಆಯೋಜಿಸಿರುವ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕಾಶೀ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು. ಹಿರೇಕಲ್ಮಠದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಟ್ಟೇಹಳ್ಳಿ ಕಬ್ಬಿಣಕಂತಿ ಮಠದ ಶ್ರೀಗಳು ನೇತೃತ್ವ ವಹಿಸಿದ್ದರು.

ಯೋಗಗುರು ಬಾಬಾ ರಾಮದೇವ ಸಮಾರಂಭ ಉದ್ಘಾಟಿಸಿ ಯೋಗ ಪ್ರದರ್ಶಿಸಿದರು. ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಜಿ.ಪಂ, ತಾ.ಪಂ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next