ನವದೆಹಲಿ: ಅಪ್ಪನಿಗೆ ಎಂಟು ಗಂಟೆಗಳ ಕೆಲಸವಾದರೆ, ಅಮ್ಮನಿಗೆ 24 ಗಂಟೆಗಳ ಕೆಲಸ. ಆದರೆ ಅಪ್ಪನ ಕೆಲಸಕ್ಕೆ ಹಣ ಕೊಟ್ಟರೆ, ಅಮ್ಮನ ಕೆಲಸಕ್ಕೆ ಹಣವೂ ಇಲ್ಲ, ಆ ಕಾರ್ಯಕ್ಕೆ ಮೆಚ್ಚುಗೆಯೂ ಇಲ್ಲ!
ಇದು ಸದ್ಯ ಭಾರತವಷ್ಟೇ ಅಲ್ಲ, ಇಡೀ ಜಗತ್ತಿನಲ್ಲೇ ಕಾಣುವ ಲಿಂಗ ತಾರತಮ್ಯ ನೀತಿ. ಇದನ್ನು ಹೋಗಲಾಡಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಶಾಲೆಗಳಲ್ಲಿ ಕಡ್ಡಾಯವಾಗಿ ಗೃಹ ವಿಜ್ಞಾನ ಅಥವಾ ಹೋಮ್‌ಸೈನ್ಸ್ ಕಲಿಕೆಗೆ ಶಿಫಾರಸು ಮಾಡಿದೆ. ರಾಷ್ಟ್ರೀಯ ಮಹಿಳಾ ನೀತಿ, 2017 ಕರಡನ್ನು ಸಿದ್ಧಪಡಿಸಲಾಗಿದ್ದು, ಇದಕ್ಕೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಯನ್ನೂ ನೀಡಿದೆ.
ಮಕ್ಕಳಿಗೆ ಚಿಕ್ಕಂದಿನಿಂದಲೇ ಮನೆಯೊಳಗಿನ ಕೆಲಸದ ಬಗ್ಗೆ ಅರಿವು ಮೂಡಿಸಿ, ಲಿಂಗ ತಾರತಮ್ಯ ಹೋಗಲಾಡಿಸುವುದು ಹೋಮ್ ಸೈನ್ಸ್ ಅಳವಡಿಕೆಯ ಉದ್ದೇಶ. ಇದನ್ನು ಶಾಲೆಗಳಲ್ಲಿನ ಬಾಲಕರು ಮತ್ತು ಬಾಲಕಿಯರು ಕಡ್ಡಾಯವಾಗಿ ಕಲಿಯಲೇಬೇಕು ಎಂದು ಶಿಫಾರಸು ಮಾಡಲಾಗಿದೆ. ಇದಕ್ಕಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಶಾಲಾ ಪಠ್ಯಕ್ರಮವನ್ನು ಪುನರ್ ರಚಿಸಲಿ ಎಂದಿದೆ. ಇದರ ಜತೆಯಲ್ಲೇ ದೈಹಿಕ ಶಿಕ್ಷಣವೂ ಕಡ್ಡಾಯವಾಗಿ ಇರಬೇಕು ಎಂದು ಹೇಳಿದೆ.
ಈ ಮಧ್ಯೆ, ದುಡಿಯುವ ಹೆಣ್ಣು ಮಕ್ಕಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಸಮಾನ ವೇತನ, ತೆರಿಗೆಯಲ್ಲಿ ವಿನಾಯಿತಿ ಕೊಡಬೇಕು. ಅಲ್ಲದೆ, ಕೇವಲ ಮಹಿಳೆಯರಷ್ಟೇ ಕೆಲಸ ಮಾಡುವ ಸಂಸ್ಥೆಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ, ಕಾರ್ಪೊರೇಟ್ ಸಂಸ್ಥೆಗಳು, ವಾಣಿಜ್ಯ ವಲಯಗಳು ಮತ್ತು ವಸತಿ ಸಂಕೀರ್ಣಗಳಲ್ಲಿ ಕಡ್ಡಾಯವಾಗಿ ಮಗುವಿನ ಪಾಲನೆ ಮತ್ತು ಪೋಷಣೆ ಕೇಂದ್ರ(ಡೇ ಕೇರ್)ಗಳನ್ನು ಸ್ಥಾಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಶಾಲಾ ವಾಹನಗಳಿಗೆ ಮಹಿಳೆಯರನ್ನೇ ಚಾಲಕಿಗಳನ್ನಾಗಿ ಮಾಡಿದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಪ್ಪಿಸಬಹುದು ಎಂದು ಹೇಳುತ್ತಿದೆ ಈ ಕರಡು ಪ್ರಸ್ತಾಪ.