ನವದೆಹಲಿ: ಬಹುನಿರೀಕ್ಷೆಯ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಪಂದ್ಯಾವಳಿ ಸುದೀರ್ಘ 7 ವರ್ಷಗಳ ಬಳಿಕ ಆರಂಭವಾಗಲಿದೆ. ಮೊದಲ ಸಲ ವನಿತೆಯರಿಗೆ ಅವಕಾಶ ನೀಡಲಾಗಿದೆ.
ಪುರುಷರ ಹಾಗೂ ವನಿತಾ ವಿಭಾಗದ ಸ್ಪರ್ಧೆಗಳೆರಡೂ ಬಹುತೇಕ ಏಕಕಾಲಕ್ಕೆ ನಡೆಯಲಿವೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ಡಿ.28ಕ್ಕೆ ಸ್ಪರ್ಧೆಗಳು ಆರಂಭವಾಗಲಿವೆ.
ಪುರುಷರ ವಿಭಾಗದಲ್ಲಿ 8 ತಂಡಗಳಿದ್ದರೆ, ವನಿತಾ ವಿಭಾಗದಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ. ಪುರುಷರ ಪಂದ್ಯಾವಳಿ ರೂರ್ಕೆಲಾದಲ್ಲಿ, ವನಿತೆಯರ ಸ್ಪರ್ಧೆ ರಾಂಚಿಯಲ್ಲಿ ನಡೆಯಲಿದೆ. ಜ.26ಕ್ಕೆ ವನಿತೆಯರ ಫೈನಲ್ ಹಾಗೂ ಫೆ.1ಕ್ಕೆ ಪುರುಷರ ಫೈನಲ್ ನಡೆಯಲಿದೆ. ಇದಕ್ಕಾಗಿ ಒಟ್ಟು 35 ದಿನಗಳನ್ನು ಮೀಸಲಿಡಲಾಗಿದೆ. ಪಂದ್ಯಾವಳಿಗಾಗಿ ಹಾಕಿ ಆಟಗಾರರ ಹರಾಜು ಪ್ರಕ್ರಿಯೆ ಅ. 13ರಿಂದ 15ರ ತನಕ ನಡೆಯಲಿದೆ. ಆಟಗಾರರ ಮೂಲ ಹರಾಜು ಬೆಲೆಯನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. 2 ಲಕ್ಷ ರೂ., 5 ಲಕ್ಷ ರೂ. ಹಾಗೂ 10 ಲಕ್ಷ ರೂ.
ಫ್ರಾಂಚೈಸಿಗಳು
ಪುರುಷರ ವಿಭಾಗದ ಫ್ರಾಂಚೈಸಿಗಳೆಂದರೆ, ಚೆನ್ನೈ-ಚಾರ್ಲ್ಸ್ ಗ್ರೂಪ್, ಲಕ್ನೋ-ಯದು ನ್ಪೋರ್ಟ್ಸ್, ಪಂಜಾಬ್-ಜೆಎಸ್‌ಡಬ್ಲ್ಯು ನ್ಪೋರ್ಟ್ಸ್, ವೆಸ್ಟ್ ಬೆಂಗಾಲ್-ಶ್ರಾಚಿ ನ್ಪೋರ್ಟ್ಸ್, ಡೆಲ್ಲಿ-ಎಸ್‌ಜಿ ನ್ಪೋರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್, ಒಡಿಶಾ-ವೇದಾಂತ್ ಲಿಮಿಟೆಡ್, ಹೈದರಾಬಾದ್-ರೀಸೊಲ್ಯೂಟ್ ನ್ಪೋರ್ಟ್ಸ್, ರಾಂಚಿ-ನವೋಯಮ್ ನ್ಪೋರ್ಟ್ಸ್ ವೆಂಚರ್ ಪ್ರೈ.ಲಿ.
ವನಿತಾ ತಂಡಗಳ ಫ್ರಾಂಚೈಸಿಗಳೆಂದರೆ, ಹರಿಯಾಣ-ಜೆಎಸ್‌ಡಬ್ಲ್ಯು ನ್ಪೋರ್ಟ್ಸ್, ವೆಸ್ಟ್ ಬೆಂಗಾಲ್-ಶ್ರಾಚಿ ನ್ಪೋರ್ಟ್ಸ್, ಡೆಲ್ಲಿ-ಎಸ್‌ಜಿ ನ್ಪೋರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್, ಒಡಿಶಾ-ನವೋಯಮ್ ನ್ಪೋರ್ಟ್ಸ್ ವೆಂಚರ್ ಪ್ರೈ.ಲಿ. ಉಳಿದೆರಡು ತಂಡಗಳ ಫ್ರಾಂಚೈಸಿ ಮಾಲಕರನ್ನು ಮತ್ತೆ ಹೆಸರಿಸಲಾಗುವುದು.
ಪ್ರತೀ ಫ್ರಾಂಚೈಸಿ 24 ಆಟಗಾರರನ್ನು ಹೊಂದಿದ್ದು, ಇದರಲ್ಲಿ ಕನಿಷ್ಠ 16 ಮಂದಿ ಭಾರತೀಯ ಆಟಗಾರರಾಗಿರಬೇಕು. ಭಾರತದ 4 ಮಂದಿ ಜೂನಿಯರ್ ಆಟಗಾರರನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕು. ಗರಿಷ್ಠ 8 ಮಂದಿ ಅಂತಾರಾಷ್ಟ್ರೀಯ ಆಟಗಾರರಿಗೆ ಅವಕಾಶವಿದೆ.