Advertisement

ಹಿರಿಯಡಕ-ಪರ್ಕಳ ಸಂಪರ್ಕ ರಸ್ತೆ ದುರವಸ್ಥೆ: ದುರಸ್ತಿ ಅಗತ್ಯ

03:30 AM Nov 20, 2018 | Team Udayavani |

ಉಡುಪಿ: ಹಿರಿಯಡಕ-ಪರ್ಕಳ ಸಂಪರ್ಕದ ಸುಮಾರು 7 ಕಿ.ಮೀ. ರಸ್ತೆಯಲ್ಲಿ ಹೊಂಡ ಗುಂಡಿಗಳು ನಿರ್ಮಾಣಗೊಂಡು ದಿನನಿತ್ಯ ಇಲ್ಲಿ ಅಪಘಾತ ಸಂಭವಿಸುತ್ತಿದ್ದು, ಅದೆಷ್ಟೋ ಜೀವಗಳು ಬಲಿಯಾಗಿವೆ. ರಸ್ತೆ ರಿಪೇರಿಗೆ ನಿತ್ಯ ಪ್ರಯಾಣಿಕರು ಆಗ್ರಹಿಸಿದ್ದಾರೆ.

Advertisement

ಅತಿ ಹೆಚ್ಚು ವಾಹನ ದಟ್ಟಣೆ
ಹಿರಿಯಡಕ-ಪರ್ಕಳ ರಸ್ತೆ ಬಹುತೇಕ ಭಾಗಗಳಲ್ಲಿ ತಿರುವು ಮತ್ತು ಉಬ್ಬು-ತಗ್ಗುಗಳಿದ್ದು, ವಾಹನ ಚಾಲಕರು ಸ್ವಲ್ಪಮಟ್ಟಿನ ಅಜಾಗರೂಕತೆ ತೋರಿಸಿದರೂ ವಾಹನ ರಸ್ತೆಯನ್ನು ಬಿಟ್ಟು ಕೆಳಗಿಳಿಸುವ ಸಾಧ್ಯತೆ ಜಾಸ್ತಿಯಿದೆ. ಹಿರಿಯಡಕದಿಂದ ಉಡುಪಿ ಸಂಪರ್ಕದ 13 ಕಿ.ಮೀ. ರಸ್ತೆ ಪ್ರತಿನಿತ್ಯ ರಾತ್ರಿ 10.45ರವರೆಗೆ ಸರ್ವಿಸ್‌ ಬಸ್‌ ಸೇರಿದಂತೆ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಮಣಿಪಾಲ-ಉಡುಪಿಗೆ ಉದ್ಯೋಗ ಮತ್ತು ಶಾಲಾ-ಕಾಲೇಜುಗಳಿಗೆ ಬೆಳಗ್ಗೆ ತೆರಳುವ ಮತ್ತು ಸಂಜೆ ಮನೆಗೆ ಬರುವ ಸಮಯವಾದುದರಿಂದ ಈ ರಸ್ತೆ ನಿರಂತರ ವಾಹನ ದಟ್ಟಣೆಯಿಂದ ಕೂಡಿದೆ. ಮಣಿಪಾಲದಿಂದ ಹಿರಿಯಡಕ ಕಡೆಗೆ ಬರುವ ವಾಹನಗಳು ಒಂದನ್ನೊಂದು ಹಿಂದಿಕ್ಕುವ ಭರದಲ್ಲಿ ರಸ್ತೆಯಲ್ಲಿ ವಾಹನಗಳು ಜಾಮ್‌ ಆಗುತ್ತವೆ. ಇದೇ ವೇಳೆ ಎದುರಿನಿಂದ ವೇಗವಾಗಿ ಬರುವ ವಾಹನಗಳು ನಿಯಂತ್ರಣ ಕಳೆದುಕೊಂಡು ಸಾಕಷ್ಟು ಅಪಘಾತಗಳು ಸಂಭವಿಸಿವೆ.

ರಸ್ತೆಯ ಅಂಚು ಮಾಯ!
ಹಿರಿಯಡಕ ಪೇಟೆ ಭಾಗದಲ್ಲಿ ಅಲ್ಲಲ್ಲಿ ರಸ್ತೆಯ ಮಧ್ಯೆ, ಹಿರಿಯಡಕ ಪೊಲೀಸ್‌ ಠಾಣೆಗೆ ತೆರಳುವ ರಸ್ತೆ ಮಧ್ಯೆ, ಓಂತಿಬೆಟ್ಟು, ಆತ್ರಾಡಿ ಭಾಗಗಳ ರಸ್ತೆ ಮಧ್ಯೆ ಅಲ್ಲಲ್ಲಿ ಬೃಹದಾಕಾರದ ಹೊಂಡಗಳು ನಿರ್ಮಾಣಗೊಂಡಿವೆ. ಇಲ್ಲಿನ ರಸ್ತೆಯ ಉದ್ದಕ್ಕೂ ರಸ್ತೆಯ ಅಂಚು ಸಂಪೂರ್ಣ ಕಿತ್ತು ಹೋಗಿದ್ದು, ದ್ವಿಚಕ್ರವಾಹನಗಳು ವಾಹನ ಹಿಂದಿಕ್ಕುವ ಭರದಲ್ಲಿ ಕೆಳಗಿಳಿದರೆ ಮೇಲೇರಲು ಹರಸಾಹಸ ಪಡಬೇಕಾಗುತ್ತದೆ. ಅಲ್ಲದೆ ಗಡಿಬಿಡಿಯಲ್ಲಿ ಕೆಳಗಿಳಿಸಿದರೆ ನಿಯಂತ್ರಣ ತಪ್ಪಿ ಬೀಳಲೇಬೇಕಾದ ದುಸ್ಥಿತಿಯಿದೆ. ರಸ್ತೆಯ ಎಡಪಾರ್ಶ್ವದಲ್ಲಿ ಚರಂಡಿಯೇ ಇಲ್ಲ. ಬಲಪಾರ್ಶ್ವದಲ್ಲಿರುವ ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ಮಲೆಗಾಲದಲ್ಲಿ ನೀರು ಹರಿಯದೆ ರಸ್ತೆಯ ಅಂಚು ಮಾಯವಾಗಿದೆ. ಓಂತಿಬೆಟ್ಟು, ಮದಗ ಭಾಗದ ರಸ್ತೆಯ ಇಕ್ಕೆಡೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲ್ಪಟ್ಟಿದೆ. ಇಲ್ಲಿ ಪಾದಚಾರಿಗಳಿಗೆ ನಡೆಯಲು ಫ‌ುಟ್‌ಪಾತ್‌ ಇಲ್ಲದೆ ಜೀವ ಕೈಯಲ್ಲಿ ಹಿಡಿದುಕೊಂಡು ಮೈಯೆಲ್ಲಾ ಕಣ್ಣಾಗಿ ನಡೆದಾಡಬೇಕು. ಇಲ್ಲವಾದರೆ ಜೀವವನ್ನೇ ತೆರಬೇಕಾದ ಪರಿಸ್ಥಿತಿ ಇಲ್ಲಿದೆ. ಇಷ್ಟೆಲ್ಲ ಸಮಸ್ಯೆಗಳಿಂದ ಕೂಡಿದ ಈ ರಸ್ತೆ ಕಾಮಗಾರಿಯ ಬಗ್ಗೆ ಸಂಬಂಧಪಟ್ಟವರು ಶೀಘ್ರ ಗಮನಹರಿಸಬೇಕಾಗಿದೆ ಎಂದು ನಿತ್ಯ ಪ್ರಯಾಣಿಕರು ಆಗ್ರಹಿಸಿದ್ದಾರೆ.

87.6 ಕಿ.ಮೀ. ದೀರ್ಘ‌ ಪಥ ಮೇಲ್ದರ್ಜೆಗೆ
ಪರ್ಕಳ – ದೇವಿನಗರ ಪ್ರೌಢಶಾಲೆಯಿಂದ ಕರಾವಳಿ ಜಂಕ್ಷನ್‌ ವರೆಗೆ 10 ಕಿ.ಮೀ. ಸುಸಜ್ಜಿತ ಕಾಂಕ್ರಿಟೀಕರಣ ಚತುಷ್ಪಥ ರಾ.ಹೆ.ಯಾಗಿ ಮೇಲ್ದರ್ಜೆಗೇರಲಿದ್ದು, ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ತೀರ್ಥಹಳ್ಳಿಯಿಂದ ಉಡುಪಿ ಕರಾವಳಿ ಜಂಕ್ಷನ್‌ ವರೆಗೆ 87.6 ಕಿ.ಮೀ. ದೀರ್ಘ‌ಪಥವನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ ಇದೇ ರಸ್ತೆಯನ್ನು ಮುಂದುವರಿಸಿ ಮಲ್ಪೆ ಬಂದರಿಗೆ ಸಂಪರ್ಕಿಸುವ ಯೋಜನೆ ಈಗಾಗಲೇ ರೂಪಿಸಲಾಗಿದ್ದು, ಹಂತ ಹಂತವಾಗಿ ಕಾಮಗಾರಿ ನಡೆಯಲಿದೆ. ಆದರೆ ರಾ.ಹೆ. ಕಾಮಗಾರಿ ಹಂತ ಹಂತವಾಗಿ ನಡೆಯುವುದರಿಂದ ಬಹುತೇಕ ಅವಶ್ಯವಿರುವಲ್ಲಿ ವಿಳಂಬವಾಗುತ್ತದೆ ಎನ್ನುವ ಅಭಿಪ್ರಾಯ ಇಲ್ಲಿನ ಸಾರ್ವಜನಿಕರದ್ದು. ಆದುದರಿಂದ ಪೂರ್ಣಪ್ರಮಾಣದ ಕಾಮಗಾರಿ ನಡೆಯುವ ಮೊದಲು ರಾ.ಹೆ. ಯಲ್ಲಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಹೊಂಡ ಮುಚ್ಚಿ ರಸ್ತೆಯನ್ನು ಸರಿಪಡಿಸಿದರೆ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು.

ರಸ್ತೆ ಮೇಲ್ದರ್ಜೆಗೇರಿಸಿ
ಮಣಿಪಾಲದಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರಿಗೆ ತೆರಳುವ, ಮಣಿಪಾಲದಿಂದ ಆಗುಂಬೆ, ಶೃಂಗೇರಿ, ಶಿವಮೊಗ್ಗ ಸಂಪರ್ಕದ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಹಿರಿಯಡಕದಿಂದ ಧರ್ಮಸ್ಥಳಕ್ಕೆ ತೆರಳುವ ರಸ್ತೆಯೂ ಮೇಲ್ದರ್ಜೆಗೇರಬೇಕಾಗಿದೆ. ಹಿರಿಯಡಕ, ಆತ್ರಾಡಿ ಪೇಟೆ ಭಾಗ, ಹಿರಿಯಡಕ ಪೊಲೀಸ್‌ ಠಾಣೆ, ಪರ್ಕಳ ಪ್ರೌಢಶಾಲೆ, ಹಿ.ಪ್ರಾ.ಶಾಲೆ ಭಾಗದಲ್ಲಿ ಇಡಲ್ಪಟ್ಟ ಬ್ಯಾರಿಕೇಡ್‌ಗಳು ಚರಂಡಿಯಲ್ಲಿರುವ ದೃಶ್ಯ ಸಾಮಾನ್ಯವಾಗಿದೆ.
– ಕುಯಿಲಾಡಿ ಸುರೇಶ್‌ ನಾಯಕ್‌, ಕೆನರಾ ಬಸ್‌ ಮಾಲಕರ ಸಂಘದ ಪ್ರ.ಕಾರ್ಯದರ್ಶಿ

Advertisement

ರಸ್ತೆ ವಿಸ್ತರಿಸಿ 
ತಿಂಗಳಲ್ಲಿ ಮರು ಡಾಮರೀಕರಣ ತೀರ್ಥಹಳ್ಳಿಯಿಂದ ಕರಾವಳಿ ಜಂಕ್ಷನ್‌ ವರೆಗೆ ದೀರ್ಘ‌ ಪಥ ಮೇಲ್ದರ್ಜೆಗೇರಲಿದ್ದು, ಅದರಲ್ಲಿ ಪರ್ಕಳ – ದೇವಿನಗರ ಪ್ರೌಢಶಾಲೆಯಿಂದ ಕರಾವಳಿ ಜಂಕ್ಷನ್‌ ವರೆಗೆ 10 ಕಿ.ಮೀ. ಕಾಂಕ್ರಿಟೀಕರಣ ಚತುಷ್ಪಥ ರಾ.ಹೆ. ಕಾಮಗಾರಿ ಪ್ರಗತಿಯಲ್ಲಿದೆ. ಹೆಬ್ರಿಯಿಂದ ಪರ್ಕಳದ ವರೆಗಿನ ರಸ್ತೆಯನ್ನು 4ನೇ ಪ್ಯಾಕೇಜ್‌ನಡಿ ಸೇರಿಸಲಾಗಿದ್ದು, ಪೇಟೆ ಭಾಗದಲ್ಲಿ ಚತುಷ್ಪಥ, ಗ್ರಾಮ ಮಿತಿಯಲ್ಲಿ ದ್ವಿಪಥ ರಾ.ಹೆ.ಯಾಗಿ ನಿರ್ಮಾಣವಾಗಲಿದೆ. ಇದೀಗ ಈ ರಸ್ತೆಯಲ್ಲಿ ನಿರ್ಮಾಣವಾದ ಹೊಂಡ ಗುಂಡಿಗಳಿಗೆ ಪರಿಹಾರವಾಗಿ ಮರು ಡಾಮರೀಕರಣ ನಡೆಸಲಾಗುತ್ತದೆ. ಈ ಕಾಮಗಾರಿ ಇನ್ನು ಸುಮಾರು 1 ತಿಂಗಳಲ್ಲಿ ಆರಂಭಗೊಳ್ಳಲಿದೆ. 
– ರಾ.ಹೆ. ಪ್ರಾಧಿಕಾರದ ಅಧಿಕೃತ ಮಾಹಿತಿ 

— ಎಸ್‌.ಜಿ. ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next