ನವದೆಹಲಿ: ಐತಿಹಾಸಿಕ ಸ್ಮಾರಕ ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಮಂಗಳವಾರ(ಮೇ 10) ದೆಹಲಿಯಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್ ಕೊಟ್ಟ ಸುಪ್ರೀಂ: ಎರಡು ವಾರದಲ್ಲಿ ಅಧಿಸೂಚನೆಗೆ ಆದೇಶ
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿರುವ ಕುತುಬ್ ಮಿನಾರ್ ಬಳಿ ಮಹಾಕಾಲ್ ಮಾನವ್ ಸೇವಾ ಮತ್ತು ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಕುತುಬ್ ಮಿನಾರ್ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕುತುಬ್ ಮಿನಾರ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾಕಾರರು ಹನುಮಾನ್ ಚಾಲೀಸಾವನ್ನು ಪಠಿಸಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ರಾಷ್ಟ್ರರಾಜಧಾನಿಯಲ್ಲಿರುವ ಅಕ್ಬರ್ ರೋಡ್, ಹುಮಾಯೂನ್ ರಸ್ತೆ, ಔರಂಗಜೇಬ್ ಲೇನ್ ಮತ್ತು ತುಘಲಕ್ ಲೇನ್ ಹೆಸರನ್ನೂ ಬದಲಾಯಿಸುವಂತೆ ದೆಹಲಿ ಬಿಜೆಪಿ ಆಗ್ರಹಿಸಿರುವುದಾಗಿ ವರದಿ ವಿವರಿಸಿದೆ.
ದೆಹಲಿಯ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ, ಉತ್ತರ ದೆಹಲಿ ಮಹಾನಗರ ಪಾಲಿಕೆ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಮೊಗಲರ ಆಡಳಿತದ ಹೆಸರನ್ನು ಬದಲಾಯಿಸಿ, ಮಹಾರಾಣಾ ಪ್ರತಾಪ್, ಗುರು ಗೋವಿಂದ್ ಸಿಂಗ್, ಮಹರ್ಷಿ ವಾಲ್ಮೀಕಿ ಮತ್ತು ಜನರಲ್ ವಿಪಿನ್ ರಾವತ್ ಹೆಸರನ್ನು ಇಡಬೇಕೆಂದು ಒತ್ತಾಯಿಸಿರುವುದಾಗಿ ವರದಿ ತಿಳಿಸಿದೆ.