Advertisement

ಹೆ. ಕಾಮಗಾರಿ ಸ್ಥಗಿತ: ಮರುಟೆಂಡರ್‌ ಆಹ್ವಾನಕ್ಕೆಸಿದ್ಧತೆ

10:13 AM Jul 08, 2018 | |

ವಿಟ್ಲ : ಈ ರಸ್ತೆ ಚೆನ್ನಾಗಿಯೇ ಇತ್ತು. ಹೆದ್ದಾರಿಯ ಎರಡೂ ಬದಿಗಳನ್ನು ವಿಸ್ತರಿಸುವ ಕಾಮಗಾರಿಗೆ ಅನುದಾನ ಬಿಡುಗಡೆಗೊಂಡು, ಕಾಮಗಾರಿ ಕೈಗೆತ್ತಿಕೊಂಡ ಬಳಿಕ ರಸ್ತೆಯ ಸ್ಥಿತಿ ಸಂಪೂರ್ಣ ಹದಗೆಟ್ಟಿತು. ರಸ್ತೆಯ ಎರಡೂ ಬದಿಗಳಲ್ಲಿ ಹೊಂಡ ನಿರ್ಮಾಣವಾಯಿತು. ನೀರು ನಿಂತು, ಹಾಕಿದ ಜಲ್ಲಿ ನೀರಿಗೆ ಕೊಚ್ಚಿಹೋಗಿ ಅಪಾಯಕಾರಿ ಸ್ಥಿತಿಯನ್ನು ನಿರ್ಮಿಸಿತು.

Advertisement

ರಸ್ತೆ ಯಾವುದು ?
ಸುರತ್ಕಲ್‌ – ಕಬಕ ರಾಜ್ಯ ಹೆದ್ದಾರಿಯ ಪೊಳಲಿ ದೇವಸ್ಥಾನದಿಂದ ಕಬಕ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಒಂದೂವರೆ ಮೀ. ವಿಸ್ತರಣೆ ಕಾಮಗಾರಿ. ಅಂದರೆ 5.5 ಮೀ. ಅಗಲವಿರುವ ರಸ್ತೆಯನ್ನು 7 ಮೀ.ಗೆ ವಿಸ್ತರಿಸುವ ಯೋಜನೆ ಇದಾಗಿದೆ. ಒಂದೆರಡು ಅಡಿ ಆಳ, ಅದಕ್ಕೆ ಜಲ್ಲಿ ಹಾಕಿ ಆಮೇಲೆ ಡಾಮರು ಹಾಕುವ ಮತ್ತು ನಂದಾವರದಲ್ಲಿ ಕಾಂಕ್ರೀಟ್‌ ರಸ್ತೆ, ಆವಶ್ಯಕತೆಯಿರುವಲ್ಲಿ ಕಾಂಕ್ರೀಟ್‌ ಚರಂಡಿ ನಿರ್ಮಾಣ ಮಾಡುವ ಕರಾರು. ರಸ್ತೆಯ ಉದ್ದ ಸುಮಾರು 47 ಕಿಮೀ. 18 ಕೋಟಿ ರೂ. ಅನುದಾನ ಬಿಡುಗಡೆಗೊಂಡಿತ್ತು. ವಿಟ್ಲ ಪೇಟೆಯ ಚರಂಡಿ, ಜಂಕ್ಷನ್‌ನಲ್ಲಿ ಸರ್ಕಲ್‌ ನಿರ್ಮಾಣದ ಚಿಂತನೆಯನ್ನೂ ಲೋಕೋಪಯೋಗಿ ಇಲಾಖೆ ಹೊಂದಿತ್ತು.

ಯೋಜನೆ ಯಾವುದು ?
ಬೆಂಗಳೂರಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅನುದಾನವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಅವರ ಪ್ರಯತ್ನದಲ್ಲಿ ತರಲಾಗಿತ್ತು. 2017ರ ಆಗಸ್ಟ್‌ ತಿಂಗಳಲ್ಲಿ ಕಾಮಗಾರಿ ಆರಂಭವಾಗಿತ್ತು. ಆಮೆಗತಿಯಲ್ಲಿ ಸಾಗಿತ್ತು. ಮಾರ್ನಬೈಲು, ಮಂಚಿ, ಕೊಳ್ನಾಡು ಮೊದಲಾದೆಡೆ ಕಾಮಗಾರಿ ನಡೆಸಲಾಗಿತ್ತು. ಆದರೆ ಚುನಾವಣೆಗೆ ಮುನ್ನ ಕಬಕ, ಉರಿಮಜಲು, ಕಂಬಳಬೆಟ್ಟು, ಕಲ್ಲಕಟ್ಟ, ಕಡಂಬು ಮೊದಲಾದೆಡೆ ಹೊಂಡಗಳಾದವು. ಅದು ಅಪಾಯಕಾರಿಯಾಗಿತ್ತು.

ಸಮಸ್ಯೆ ಆರಂಭ
ಚುನಾವಣೆಯ ಅವಧಿಯಲ್ಲಿ ಕಾಮಗಾರಿ ಮುಂದುವರಿಯಬೇಕಾಗಿತ್ತು. ಆದರೆ ಪ್ರಗತಿ ದಾಖಲಿಸುವ ಹಾಗೆ ಇರಲಿಲ್ಲ. ಅಷ್ಟೊಂದು ನಿಧಾನವಾಗಿ ಸಾಗಲಾರಂಭಿಸಿತು. ಸ್ವಲ್ಪ ಸಮಯದ ಬಳಿಕ ಗುತ್ತಿಗೆದಾರರು ನಾಪತ್ತೆ. ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂಬ ಮಾಹಿತಿ ಬಂತು. ಅಲ್ಲಲ್ಲಿ ಅವರ ಸಾಮಗ್ರಿಗಳು, ಯಂತ್ರಗಳು ಮಾತ್ರ ಮಳೆಯಲ್ಲಿ ನೆನೆಯುತ್ತಿದ್ದವು. ರಸ್ತೆಯೂ ಯಂತ್ರವೂ ಶೋಚನೀಯ ಸ್ಥಿತಿಯಲ್ಲಿದ್ದವು.ಕಳಪೆ ಕಾಮಗಾರಿ ಎಂದು ಸಾರ್ವಜನಿಕರು ದೂರಿದರು. ಹೊಂಡದಲ್ಲಿ ಹಾಕಿದ ಜಲ್ಲಿ ಮಳೆಗೆ ಕೊಚ್ಚಿ ಹೋಯಿತು. ವಾಹನ ಸಂಚಾರವೇ ಅಪಾಯ ಎಂಬ ಸ್ಥಿತಿಗೆ ತಲುಪಿತು. ಬೆಂಗಳೂರಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಎಸ್‌.ಎಚ್‌.ಡಿ.ಪಿ.) ಅಧಿಕಾರಿಗಳು ಇತ್ತ ಧಾವಿಸಲೇ ಇಲ್ಲ. ಬಂಟ್ವಾಳ ಲೋಕೋಪಯೋಗಿ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳುವ ಹಾಗಿರಲಿಲ್ಲ. ಒಟ್ಟಿನಲ್ಲಿ ಸ್ಥಿತಿ ಶೋಚನೀಯವಾಯಿತು.

ಮರು ಟೆಂಡರ್‌ ಆಹಾನಕ್ಕೆ ಸಿದ್ಧತೆ  
ಇದೀಗ ಅಧಿಕಾರಿಗಳು ಕ್ರಮಕೈಗೊಂಡಿದ್ದು, ಗುತ್ತಿಗೆದಾರರ ಟೆಂಡರ್‌ ರದ್ದುಪಡಿಸಿದ್ದಾರೆ. ಮರುಟೆಂಡರ್‌ ಆಹ್ವಾನಿಸಲು ಸಿದ್ಧತೆಗಳು ನಡೆಯುತ್ತಿವೆ. ಹೊಸ ಗುತ್ತಿಗೆದಾರರು ಮತ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಸನ್ನಿವೇಶ ಒದಗಿ ಬಂದಿದೆ. ಕಡಂಬುವಿನಿಂದ ಕಬಕ ವರೆಗಿನ ಶೋಚನೀಯ ರಸ್ತೆಯನ್ನು ಅಭಿವೃದ್ಧಿಪಡಿ ಸದೇ ಇದ್ದಲ್ಲಿ ಇನ್ನಷ್ಟು ಅಪಾಯಗಳು ಸಂಭವಿಸುವುದು ನಿಶ್ಚಿತ.

Advertisement

ಮಾಹಿತಿ ರವಾನೆ
ಬೆಂಗಳೂರಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಕಾಮಗಾರಿ ನಡೆಯುತ್ತದೆ. ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂಬ ಮಾಹಿತಿ ರವಾನಿಸಲಾಗಿದೆ. ಗುತ್ತಿಗೆದಾರರನ್ನು ಬ್ಲ್ಯಾಕ್  ಲಿಸ್ಟ್‌ಗೆ ಹಾಕಿ, ರದ್ದುಪಡಿಸಿ, ಮರುಟೆಂಡರ್‌ ಆಹ್ವಾನಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಾರೆ.
– ಉಮೇಶ್‌ ಭಟ್‌
ಕಾರ್ಯ ನಿರ್ವಾಹಕ ಎಂಜಿನಿಯರ್‌, ಬಂಟ್ವಾಳ

 ಉದಯಶಂಕರ್‌ ನೀರ್ಪಾಜೆ 

Advertisement

Udayavani is now on Telegram. Click here to join our channel and stay updated with the latest news.

Next