Advertisement
ಸುರತ್ಕಲ್ ಭಾಗದಲ್ಲಿ ಗ್ಯಾಸ್ ಪೈಪ್ ಲೈನ್, ಜಲಸಿರಿ, ಕೇಬಲ್ ಅಳವಡಿಕೆ ಹೀಗೆ ವಿವಿಧ ಕಾರಣಗಳಿಗಾಗಿ ಹೆದ್ದಾರಿ ಬದಿ ಹೊಂಡ ತೋಡಿ ಬಿಡಲಾಗಿದ್ದು, ಮಳೆಗೆ ಹೆದ್ದಾರಿ ಬದಿ ತೋಡು ಪಾಲಾಗಿದೆ. ಭೂಗತ ಗ್ಯಾಸ್ ಪೈಪ್‌ಲೈನ್ ಕೊರೆಯುವ ಸಂದರ್ಭ ಮೇಲೆ ಬಂದ ಕೆಸರು ಮಿಶ್ರಿತ ನೀರು ಮಣ್ಣು ಸಮೀಪದ ತೋಡು ಸೇರಿ ಭರ್ತಿಯಾಗಿದೆ. ಸುರತ್ಕಲ್‌ನ ತಡಂಬೈಲ್ ಮತ್ತು ಸರ್ವಿಸ್ ರಸ್ತೆಯ ನಡುವೆ ಕಾಮಗಾರಿ ನಡೆದ ಹಲವು ಕಡೆ ಇದೇ ಸ್ಥಿತಿಯಿದೆ. ಪೂರ್ವ ಮುಂಗಾರು ಇನ್ನೇನು ಆರಂಭವಾಗಲಿದ್ದು, ಇದುವರೆಗೆ ತೋಡು ಸ್ವತ್ಛಗೊಳಿಸುವ ಕೆಲಸಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿಲ್ಲ. ಅಧಿಕಾರಿಗಳು ಕನಿಷ್ಠ ಪಕ್ಷ ಸರ್ವಿಸ್ ರಸ್ತೆ, ತೋಡುಗಳ ಸ್ಥಿತಿಗತಿ ಪರಿಶೀಲನೆಯನ್ನೂ ನಡೆಸಿಲ್ಲ. ಹಲವು ಕಡೆ ವಿವಿಧ ಬಡಾವಣೆ, ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸಲು ತೋಡಿಗೆ ಮಣ್ಣು ಸುರಿಯಲಾಗಿದೆ. ಇನ್ನು ಹಲವೆಡೆ ಹೆದ್ದಾರಿ ಬದಿ ತೋಡುಗಳು ತ್ಯಾಜ್ಯ ಎಸೆಯುವ ಗುಂಡಿಯಾಗಿ ಮಾರ್ಪಟ್ಟಿವೆ. ಮಳೆನೀರಿನ ಜತೆಗೆ ತ್ಯಾಜ್ಯ ಸೇರಿಕೊಂಡು ಸರಾಗ ಹರಿವಿಗೆ ಅಡ್ಡಿಯಾಗಿ ಉಕ್ಕೇರುವುದು ಖಚಿತ. ಇನ್ನು ಹಲವು ಕಡೆ ತೋಡು ಬ್ಲಾಕ್ ಆಗಿ ಮಳೆ ನೀರು ಸರ್ವಿಸ್ ರಸ್ತೆಯಲ್ಲಿ ಹರಿದು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಭೀತಿಯಿದೆ. ಹೆದ್ದಾರಿ ಇಲಾಖೆಯ ಅನುಮತಿಯೊಂದಿಗೆ ರಸ್ತೆ ಅಗೆದಿದ್ದರೂ ಪಾಲಿಕೆ ವ್ಯಾಪ್ತಿಯ ಬಡಾ ವಣೆಗಳಿಗೆ ಮಳೆಗಾಲದಲ್ಲಿ ಸಮಸ್ಯೆ ಆಗಲಿ ರುವುದರಿಂದ ಪಾಲಿಕೆ ಅಧಿಕಾರಿಗಳು ತೋಡುಗಳ ಸ್ವತ್ಛತೆಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಬೇಕಿದೆ.
Related Articles
Advertisement
ಹೆದ್ದಾರಿ ಬದಿ ತೋಡುಗಳು ಹೂಳು, ಕಸ ಕಡ್ಡಿ ಸ್ವತ್ಛತೆಗೆ ಹೆದ್ದಾರಿ ಇಲಾಖೆಯೇ ಮುಂದಾಗಬೇಕು. ಈ ಬಗ್ಗೆ ಪಾಲಿಕೆಯು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಲಿದೆ. ಮಳೆಗಾಲದಲ್ಲಿ ಮನೆ, ಬಡಾವಣೆಗೆ ಕೃತಕ ನೀರು ನುಗ್ಗಿದರೆ ಹೆದ್ದಾರಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. -ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು ಮನಪಾ