ಬಂಟ್ವಾಳ: ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣದಲ್ಲಿರುವ ಹಳೆಯ ಹೈಮಾಸ್ಟ್ ವಿದ್ಯುತ್ ದೀಪದ ಅವಶೇಷವೊಂದು ಅಪಾಯಕಾರಿಯಾಗಿ ಪರಿಣಮಿಸಿದ್ದು, ನಿತ್ಯವೂ ಒಂದಿಲ್ಲೊಂದು ಅವಗಢಗಳಿಗೆ ಕಾರಣವಾಗುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಅದನ್ನು ತೆರವುಗೊಳಿಸುವುದಕ್ಕೆ ಇನ್ನೂ ಕಾಲ ಕೂಡಿ ಬಾರದೇ ಇರುವುದು ವಿಪರ್ಯಾಸವೇ ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಂಟ್ವಾಳ ತಾಲೂಕು ಕೇಂದ್ರಸ್ಥಾನದಲ್ಲಿ ಈ ನಿಲ್ದಾಣಕ್ಕೆ ದಿನನಿತ್ಯ ಹತ್ತಾರು ಬಸ್‌ಗಳ ಮೂಲಕ ನೂರಾರು ಪ್ರಯಾಣಿಕರು ಆಗಮಿಸುತ್ತಿದ್ದು, ಬಹುತೇಕ ಮಂದಿಗೆ ಈ ಹೈಮಾಸ್ಟ್ ದೀಪದ ಅವಶೇಷವು ಅಪಾಯಕಾರಿ ಎನಿಸಿಕೊಂಡಿದೆ. ಇಲ್ಲಿ ಬಿದ್ದು ಗಾಯ ಮಾಡಿಕೊಂಡ ಪ್ರಯಾಣಿಕರಿಗೆ ಲೆಕ್ಕವೇ ಇಲ್ಲ.
ಜತೆಗೆ ಇದರಿಂದಾಗಿ ಹತ್ತಾರು ಬಸ್‌ಗಳು, ಆಟೋಗಳಿಗೂ ಹಾನಿಯಾಗಿವೆ. ಆದರೂ ಇಲ್ಲಿನ ಸ್ಥಳೀಯಾಡಳಿತ ಬಂಟ್ವಾಳ ಪುರಸಭೆ ತೆರವು ಮಾಡುವ ಗೋಜಿಗೇ ಹೋಗಿಲ್ಲ. ತುಕ್ಕು ಹಿಡಿದ ಕಬ್ಬಿಣದ ಚೂಪಾದ ಅವಶೇಷಗಳಿದ್ದು, ಅದು ಇರುವುದು ತಿಳಿಯದೆ ಪ್ರಯಾಣಿಕರು ಅದಕ್ಕೆ ತಾಗಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಕೆಲವು ಸಮಯಗಳ ಹಿಂದೆ ಆಟೋವೊಂದರಿಂದ ಪ್ರಯಾಣಿಕರೊಬ್ಬರು ನೇರವಾಗಿ ಕಬ್ಬಿಣದ ಚೂಪಾದ ಭಾಗಕ್ಕೆ ಕಾಲಿಟ್ಟು ಇಳಿದು ಗಂಭೀರ ಗಾಯ ಮಾಡಿಕೊಂಡಿದ್ದರು. ಬಸ್‌ಗಳು ಅದಕ್ಕೆ ಢಿಕ್ಕಿ ಹೊಡೆದು ಅದರ ಟಯರ್‌ಗೆ ಹಾನಿಯಾದ ಘಟನೆಗಳು ನಡೆದಿತ್ತು. ಹಿಂದೆ ಖಾಸಗಿ ಬಸ್ ನಿಲ್ದಾಣದ ಬೆಳಕಿಗಾಗಿ ಇಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗಿತ್ತು. ಆದರೆ ಬಸ್ಸಿನ ಚಾಲಕರ ಅವಾಂತರದಿಂದ ಕೆಲವೊಮ್ಮೆ ಬಸ್ಸುಗಳು ಅದಕ್ಕೆ ಢಿಕ್ಕಿ ಹೊಡೆದು ಹಾನಗೊಳಗಾಗಿತ್ತು.
ಆ ಕಂಬ ತೆರವುಗೊಂಡು ಹೊಸ ಹೈಮಾಸ್ಟ್ ದೀಪ ಅಳವಡಿಸಿದರೂ ಹೈಮಾಸ್ಟ್ ಕಂಬದ ಕೆಳಗಿನ ಭಾಗ ಹಾಗೂ ಕಾಂಕ್ರೀಟ್ ಬೆಡ್ ಹಾಗೇ ಉಳಿದುಕೊಂಡಿದೆ.