ಬೆಂಗಳೂರು: ಥಾಯ್ಲೆಂಡ್ ದೇಶವು ಶಿಕ್ಷಣ, ಐಟಿ ಮತ್ತು ಬಿಟಿ ಕ್ಷೇತ್ರಗಳಲ್ಲಿ ಕರ್ನಾಟಕದ ನೆರವನ್ನು ಕೇಳಿದ್ದು, ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಾಗಿ ಕೋರಿದೆ. ಇದಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
ವಿಕಾಸಸೌಧದಲ್ಲಿ ಥಾಯ್ಲೆಂಡ್ ದೇಶದ ಭಾರತೀಯ ಕೌನ್ಸಿಲ್ ಜನರಲ್ ನಿಟಿರೂಜ್ ಫೋನ್ ಪ್ರಸೆರ್ಟ್ ನೇತೃತ್ವದ ನಿಯೋಗದೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಥಾಯ್ಲೆಂಡ್ ಜತೆ ಸಹಭಾಗಿತ್ವ ಹೊಂದಲು ರಾಜ್ಯ ಸರ್ಕಾರ ಉತ್ಸುಕವಾಗಿದೆ.
ಥಾಯ್ಲೆಂಡ್ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅವಲಂಬಿಸಿದೆ. ಹೀಗಾಗಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೇಕಿರುವ ತಂತ್ರಜ್ಞಾನದ ನೆರವು ನೀಡಲು ಕೂಡ ತಾವು ಸಿದ್ದ ಎಂದು ಹೇಳಿದರು.
ಇದನ್ನೂ ಓದಿ:ಪಿರಿಯಾಪಟ್ಟಣದಲ್ಲಿ ಭಾರಿ ಮಳೆ: ಮರ ಮುರಿದು ಬಿದ್ದು ಮಹಿಳೆ ಸಾವು
ಐಟಿ, ಬಿಟಿ ತಂತ್ರಜ್ಞಾನಗಳನ್ನು ಗರಿಷ್ಠ ಮಟ್ಟದಲ್ಲಿ ಆರ್ಥಿಕ ಪ್ರಗತಿಗೆ ಉದ್ದೇಶವಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿರುವ ಈ ಕಂಪನಿಗಳ ಪೈಕಿ ಆಸಕ್ತ ಕಂಪನಿಗಳು ಥಾಯ್ಲೆಂಡಿನಲ್ಲಿಯೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿ, ಆ ದೇಶಕ್ಕೆ ನೆರವು ನೀಡುವ ಬಗ್ಗೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ನುಡಿದರು.
ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಬಾಂಧವ್ಯವನ್ನು ವರ್ಧಿಸಿಕೊಳ್ಳಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಶಯವಾಗಿದೆ. ಇದಕ್ಕೆ ತಕ್ಕಂತೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು.