ಮಹದೇವಪುರ: ಜೇನು ಸಾಕಣೆ ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ತಂದುಕೊಡುವ ವಾಣೀಜ್ಯ ಉಪ ಕಸುಬಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜ್ ಅಭಿಪ್ರಾಯಪಟ್ಟರು.
ಮಂಡೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಿಂದ ಹಮ್ಮಿಕೊಂಡಿದ್ದ ಜೇನು ಸಾಕಣೆ ಮತ್ತು ಮಹಿಳೆಯರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇನು ಸಾಕಣೆಗೆ ಮುಂದಾಗುವ ರೈತರು, ಮಹಿಳೆಯರಿಗೆ ತೋಟಗಾರಿಕೆ ಇಲಾಖೆಯೇ ಜೇನು ಸಾಕಣೆ ಪೆಟ್ಟಿಗೆ ಮತ್ತು ಹುಳುಗಳನ್ನು ಒಗದಿಸುತ್ತದೆ.
ನೆರಳು ಇರುವಲ್ಲಿ ಪೆಟ್ಟಿಗೆ ಇರಿಸಿದರಷ್ಟೇ ಸಾಕು. ಹೂವಿನ ಮಕರಂದ ಮತ್ತು ನೀರು ಸಿಗುವೆಡೆ ಹುಳುಗಳು ತಾವಾಗೆ ಗೂಡುಕಟ್ಟಿ ಜೇನುತುಪ್ಪ ಉತ್ಪಾದಿಸುತ್ತವೆ ಎಂದು ಮಾಹಿತಿ ನೀಡಿದರು.ಜೇನುತುಪ್ಪ ಹಲವು ಕಾಯಿಲೆಗಳಿಗೆ ರಾಮಬಾಣವಾಗಿದೆ. ಜತೆಗೆ ತೈಕ ಇಳಿಸಲು ಡಯೆಟ್ ಮಾಡುವವರ ಆಹಾರದಲ್ಲಿ ಜೇನುತುಪ್ಪ ಇರಲೇಬೇಕು.
ಹೀಗಾಗಿ ಇತ್ತೀಚಿನ ದಿನಗಳಲ್ಲಿ ಶುದ್ಧ ಜೇನುತುಪ್ಪಕ್ಕೆ ಭಾರೀ ಬೇಡಿಕೆಯಿದೆ. ಬೇಡಿಕೆ ಹೆಚ್ಚಿರುವುದರಿಂದ ಸಾಕಣೆದಾರರಿಗೆ ಲಾಭ ಕೂಡ ಹೆಚ್ಚಿರುತ್ತದೆ. ಹೀಗಾಗಿ ಆಸಕ್ತರು ಬೆಂಗಳೂರು ಪೂರ್ವ ತಾಲೂಕು ಪಂಚಾಯಿತಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡು, ತರಬೇತಿ ಪಡೆದು, ಜೇನು ಸಾಕಣೆಯಲ್ಲಿ ತೊಡಗಬಹುದು ಎಂದು ತಿಳಿಸಿದರು.
ಗೃಹಿಣಿಯರನ್ನು ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಅವರ ಕೌಶಲ್ಯ ಅಭಿವೃದ್ಧಿಗಾಗಿ ಹೊಲಿಗೆ, ಎಮ್ರಾಯರಿ, ಮೆಹಂದಿ, ಬ್ಯುಟೀಷಿಯನ್ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಮಹಿಳೆಯರು ತರಬೇತಿ ಪಡೆದು ಪರಿಣತಿ ವೃತ್ತಿಯಲ್ಲಿ ಹೊಂದಬೇಕು ಎಂದರು.
ಮಂಡೂರು ಗ್ರಾ.ಪಂ ಅಧ್ಯಕ್ಷ ಜನಾರ್ಧನ್ ಗೌಡ, ಸದಸ್ಯರಾದ ಗೋಪಾಲ್ ರಾವ್, ನಳಿನಾ ಪ್ರಸನ್ನಕುಮಾರ್, ಮುನಿಯಮ್ಮ, ಆಶೋಕ್, ಮುನಿಅಂಜಿನಪ್ಪ, ಮರಿಯಪ್ಪ ಹಾಗೂ ತೊಟಗಾರಿಕೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.